ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ‘ಮೀ–ಟೂ: ಅವಳದೇ ಧ್ವನಿಯಲ್ಲಿ ಕಥನಗಳು’ ಸಂವಾದದಲ್ಲಿ ಪತ್ರಕರ್ತೆಯರು ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳದ ಪ್ರಸಂಗಗಳನ್ನು ಧೈರ್ಯವಾಗಿ ಹೇಳಿದರು.
‘ಮುಂಬೈನಲ್ಲಿದ್ದ ಆ ಇಂಗ್ಲಿಷ್ ಪತ್ರಿಕಾ ಕಚೇರಿಯಲ್ಲಿ ಆ ದಿನದ ಕೆಲಸ ಮುಗಿಸುವ ವೇಳೆಗೆ ಸರಿಸುಮಾರು ರಾತ್ರಿ ಒಂದು ಗಂಟೆಯಾಗಿತ್ತು. ಹಿರಿಯ ಸಹೋದ್ಯೋಗಿಯೊಬ್ಬ ಬಾ ಹಾಗೆ ನಗರ ಸುತ್ತಿಕೊಂಡು ಬರೋಣ ಎಂದು ಕರೆದ. ನಾನು ನಿರಾಕರಿಸಿದೆ. ಹೆಣ್ಣು ಮಕ್ಕಳು ಈ ತಡರಾತ್ರಿಯಲ್ಲಿ ಒಂಟಿಯಾಗಿ ಇರಬಾರದು. ಬಾ, ನಾನೇ ಕಾರಿನಲ್ಲಿ ಕರೆದೊಯ್ದು ಮನೆಗೆ ಬಿಡುತ್ತೇನೆ ಎಂದ. ಹೊರಟೆ. ಮನೆ ಬಂದಾಗ ಇಳಿದೆ. ಆತನೂ ಇಳಿದ. ಹತ್ತಿರ ಬಂದವನೆ ಗಟ್ಟಿಯಾಗಿ ಹಿಡಿದುಕೊಂಡು ತುಟಿಗೆ ಮುತ್ತಿಕ್ಕಿದ’ ಎಂದು ಹೇಳುವಾಗ ಫ್ರಿಲಾನ್ಸ್ ಪತ್ರಕರ್ತೆ ಸಂಧ್ಯಾ ಮೆನನ್ ಧ್ವನಿಯಲ್ಲಿ ಅಳುಕು ಇರಲಿಲ್ಲ.
‘ನನಗಾಗ 25ರ ಹರೆಯ. ಆ ಕ್ಷಣಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ಹೊಳೆಯಲಿಲ್ಲ. ನರ್ವಸ್ ಆದೆ. ಮರುದಿನ ಆತನೇ ರಾತ್ರಿ ಘಟನೆಯ ವಿಷಯ ನಮ್ಮಿಬ್ಬರ ಮಧ್ಯೆಯೇ ಇರಲೆಂದು ಸಂದೇಶ ಕಳುಹಿಸಿದ. ನಾನಾಗ ವೃತ್ತಿಯಲ್ಲಿ ಬೆಳೆಯಬೇಕಿತ್ತು. ಹಾಗಾಗಿ ವಿಷಯವನ್ನು ದೊಡ್ಡದು ಮಾಡಲಿಲ್ಲ. ಒಂದು ವಾರದ ಬಳಿಕ ಅದನ್ನು ಕೆಲವು ಸಹದ್ಯೋಗಿಗಳೊಂದಿಗೆ ಹೇಳಿಕೊಂಡೆ. ಇಂಥ ಸಣ್ಣ–ಪುಟ್ಟ ವಿಷಯಗಳು ಆಗುತ್ತಿರುತ್ತವೆ ಎಂದು ನಿರ್ಲಕ್ಷಿಸಿದರು’ ಎಂದು ಹೇಳುವಾಗ ಅಸಮಾಧಾನ ಸಂಧ್ಯಾರ ಮಾತಿನಲ್ಲಿತ್ತು.
‘ಬೆಂಗಳೂರಿನ ಮತ್ತೊಂದು ಇಂಗ್ಲಿಷ್ ಪತ್ರಿಕೆಯ ಕಚೇರಿ
ಯಲ್ಲಿ 2007ರಲ್ಲಿ ಕೆಲಸ ಮಾಡುತ್ತಿದ್ದೆ. ಒಂದು ದಿನ ರಾತ್ರಿ 12.30ಕ್ಕೆ ಕೆಲಸ ಮುಗಿದಿತ್ತು. ಹಿರಿಯ ಸಹೊದ್ಯೋಗಿಯೊಬ್ಬ ಮನೆ
ಯವರೆಗೂ ಕಾರ್‌ನಲ್ಲಿ ಬಿಡಲು ಬಂದ. ಬರುವ ದಾರಿಯುದ್ದಕ್ಕೂ ಪತ್ನಿ ಸಹಕರಿಸುತ್ತಿಲ್ಲ, ಅವಳಿಂದ ದೂರವಾಗಬೇಕು ಅಂದುಕೊಂಡಿದ್ದೇನೆ ಎಂಬ ಮಾತನ್ನೆ ಹೇಳಿದ. ಮನೆ ಹತ್ತಿರ ಕಾರು ನಿಲ್ಲಿಸಿ, ತೊಡೆ ಸವರಿದ, ಹಿಸುಕಿದ. ಮರುದಿನ, ಈ ಕುರಿತ ಕಚೇರಿಯ ಎಚ್‌ಆರ್ ವಿಭಾಗಕ್ಕೆ ದೂರು ನೀಡಿದೆ. ಆತನ ಮೇಲೆ ಯಾವುದೇ ಕ್ರಮ ಜರುಗಿಸಲಿಲ್ಲ’ ಎಂದು ವಿಷಾದಿಸಿದರು.
ಪತ್ರಕರ್ತೆ ತುಷಿತಾ ಪಟೇಲ್, ‘ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಹಿರಿಯ ಸಹೊದ್ಯೋಗಿ ಕೆಲಸದ ಬಗ್ಗೆ ಚರ್ಚಿಸಲು ಹೋಟೆಲ್‌ಗೂ ಕರೆಯುತ್ತಿದ್ದ. ಒಮ್ಮೆ ಹೋಗಿದ್ದಾಗ, ಒಳಉಡುಪಿನಲ್ಲಿಯೇ ಬಾಗಿಲು ತೆರೆದಿದ್ದ. ಮೂರ್ನಾಲ್ಕು ಬಾರಿ ಬಲವಂತವಾಗಿ ಮುತ್ತಿಕ್ಕಿದ್ದ. ನನ್ನ ವೃತ್ತಿಭದ್ರತೆಗಾಗಿ ಅದನ್ನು ಒಲ್ಲದ ಮನಸ್ಸಿ
ನಿಂದ ಸಹಿಸಿಕೊಂಡಿದ್ದೆ’ ಎಂಬ ಕಹಿ ನೆನಪನ್ನು ಅಂಜಿಕೆ ಇಲ್ಲದೆ ಹಂಚಿ ಕೊಂಡರು.
ಪತ್ರಕರ್ತೆ ರಕ್ಷಾ ಕುಮಾರ್, ‘ನನಗೂ ಸಹೊದ್ಯೋಗಿಗಳಿಂದ ಕಿರುಕುಳ ಅನುಭವ ಹಲವಾರು ಬಾರಿ ಆಗಿತ್ತು. ಹೋದ ವರ್ಷ ಇದ್ದಂತಹ ಪರಿಸ್ಥಿತಿ ಈಗಿಲ್ಲ. ಕಿರುಕುಳದ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಬೇಕು. ಅದಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ವೇದಿಕೆಯಾಗಿ ಬಳಸಿಕೊಳ್ಳಬೇಕು’ ಎಂದರು. ಇದಕ್ಕೆ ಸಭಿಕರು ಧ್ವನಿಗೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.