ADVERTISEMENT

ಮೆಟ್ರೊ ನೀಲಿ ಮಾರ್ಗ: ಸೀಮೆನ್ಸ್‌ಗೆ ವಿದ್ಯುದ್ದೀಕರಣ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 15:41 IST
Last Updated 10 ಜುಲೈ 2024, 15:41 IST
ನಿರ್ಮಾಣ ಹಂತದಲ್ಲಿರುವ ನಮ್ಮ ಮೆಟ್ರೊ ನೀಲಿ ಮಾರ್ಗ
ನಿರ್ಮಾಣ ಹಂತದಲ್ಲಿರುವ ನಮ್ಮ ಮೆಟ್ರೊ ನೀಲಿ ಮಾರ್ಗ   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ– ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ವರೆಗಿನ ನೀಲಿ ಮಾರ್ಗದಲ್ಲಿ ವಿದ್ಯುದ್ದೀಕರಣ ತಂತ್ರಜ್ಞಾನ ಅಳವಡಿಸುವ ಕಾಮಗಾರಿಗೆ ಆದೇಶವನ್ನು ಸೀಮೆನ್ಸ್‌ ನೇತೃತ್ವದ ಕಂಪನಿಗಳ ಸಮೂಹ ಪಡೆದಿದೆ.

ನೀಲಿ ಮಾರ್ಗದಲ್ಲಿ ದೇವನಹಳ್ಳಿಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆ.ಆರ್‌. ಪುರ ಹಾಗೂ ಕೆ.ಆರ್‌.ಪುರದಿಂದ ಕೇಂದ್ರ ರೇಷ್ಮೆ ಮಂಡಳಿವರೆಗೆ ಎರಡು ಹಂತದಲ್ಲಿ ಒಟ್ಟು 58 ಕಿ.ಮೀ.  ಕಾಮಗಾರಿ ನಡೆಯುತ್ತಿದೆ. 30 ನಿಲ್ದಾಣಗಳಿರುವ ಈ ಮಾರ್ಗದಲ್ಲಿ ವಿದ್ಯುದ್ದೀಕರಣಕ್ಕೆ ₹ 766 ಕೋಟಿ ವೆಚ್ಚವಾಗಲಿದೆ. ಅದರಲ್ಲಿ ₹ 558 ಕೋಟಿಯ ಕಾಮಗಾರಿಯನ್ನು ಸೀಮೆನ್ಸ್‌ ಸಮೂಹ ನಡೆಸಲಿದೆ.

ಸೀಮೆನ್ಸ್ ಲಿಮಿಟೆಡ್ ಸೂಪರ್ವೈಸರಿ ಕಂಟ್ರೋಲ್ ಆ್ಯಂಡ್‌ ಡೇಟಾ ಅಕ್ವಿಸಿಷನ್ (ಎಸ್‌ಸಿಎಡಿಎ) ವ್ಯವಸ್ಥೆಗಳನ್ನು ಒಳಗೊಂಡ ರೈಲು ವಿದ್ಯುದ್ದೀಕರಣ ತಂತ್ರಜ್ಞಾನಗಳ ಜೊತೆಗೆ ಡಿಜಿಟಲ್ ಪರಿಹಾರಗಳನ್ನು ವಿನ್ಯಾಸಗೊಳಿಸಿ ಅಳವಡಿಸುತ್ತದೆ ಎಂದು ಸೀಮೆನ್ಸ್ ಲಿಮಿಟೆಡ್‌ನ ಮೊಬಿಲಿಟಿ ಬಿಸಿನೆಸ್ ಮುಖ್ಯಸ್ಥ ಗುಂಜನ್ ವಖಾರಿಯಾ ತಿಳಿಸಿದ್ದಾರೆ.

ADVERTISEMENT

ನಮ್ಮ ಮೆಟ್ರೊ ಹಂತ 2ರ ಅನುಷ್ಠಾನವು ಬೆಂಗಳೂರಿನ ಸುಸ್ಥಿರ ನಗರಾಭಿವೃದ್ಧಿಗೆ ಗಣನೀಯವಾಗಿ ಕೊಡುಗೆ ನೀಡಲಿದೆ. ಪ್ರಯಾಣಿಕರ ಅಗತ್ಯವನ್ನು ಪೂರೈಸಲಿದೆ ಎಂದು ವಿವರಿಸಿದ್ದಾರೆ.

ಸೀಮೆನ್ಸ್ ಉದ್ಯಮವು ಮೂಲಸೌಕರ್ಯ, ಸಾರಿಗೆ ಮತ್ತು ವಿದ್ಯುತ್ ಶಕ್ತಿಯ ಪ್ರಸರಣ ಮತ್ತು ಉತ್ಪಾದನೆಯ ಮೇಲೆ ಕೇಂದ್ರೀಕರಿಸಿದ ತಂತ್ರಜ್ಞಾನ ಕಂಪನಿಯಾಗಿದೆ. ರೈಲ್ವೆ ಸಚಿವಾಲಯದ ಅಡಿಯಲ್ಲಿರುವ ರೈಲು ವಿಕಾಸ ನಿಗಮ ಲಿಮಿಟೆಡ್ (ಆರ್‌ವಿಎನ್‌ಎಲ್‌) ಜೊತೆಗಿನ ಒಕ್ಕೂಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.