ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಚಾಲನೆ ನೀಡಿದರು. ಕಂಟೋನ್ಮೆಂಟ್ ಮತ್ತು ಶಿವಾಜಿನಗರದ ನಡುವೆ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ‘ಊರ್ಜಾ’ ಕಾರ್ಯಾರಂಭ ಮಾಡಿತು.
ಕಂಟೋನ್ಮೆಂಟ್ ನಿಲ್ದಾಣದಿಂದ ಶಿವಾಜಿನಗರ ನಿಲ್ದಾಣಕ್ಕೆ ಮತ್ತು ಕಂಟೋನ್ಮೆಂಟ್ ನಿಲ್ದಾಣದಿಂದ ಟ್ಯಾನರಿ ರಸ್ತೆಯಲ್ಲಿರುವ ಶಾದಿ ಮಹಲ್‌ವರೆಗೆ 2.88 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಗೊಳ್ಳಲಿದೆ. ಕಂಟೋನ್ಮೆಂಟ್ ಮತ್ತು ಪಾಟರಿ ಟೌನ್‌ನಲ್ಲಿ ನೆಲದಡಿ ನಿಲ್ದಾಣಗಳು ತಲೆ ಎತ್ತಲಿವೆ. ಎಲ್ ಆ್ಯಂಡ್ ಟಿ ಕಂಪನಿ ಈ ಮಾರ್ಗ ನಿರ್ಮಾಣದ ಗುತ್ತಿಗೆ ಪಡೆದಿದೆ. ಈಗ ‘ಊರ್ಜಾ’ ಕಾರ್ಯಾರಂಭಿಸಿದ್ದು, ಮತ್ತೊಂದು ಟಿಬಿಎಂ ‘ವಿಂಧ್ಯ’ ಶೀಘ್ರದಲ್ಲಿಯೇ ಕೆಲಸ ಶುರು ಮಾಡಲಿದೆ. 3ನೇ ಪ್ಯಾಕೇಜ್ ಅಡಿ ಈ ಸುರಂಗ ಮಾರ್ಗ ನಿರ್ಮಾಣಗೊಳ್ಳಲಿದೆ.
ಈ ಸುರಂಗ ಮಾರ್ಗದ ಭೂಸಮೀಕ್ಷೆ ಅಂದಾಜಿನ ಪ್ರಕಾರ, ಇಲ್ಲಿ 250 ಮೀಟರ್ ಉದ್ದ ಗಟ್ಟಿ ಕಲ್ಲು, ಸುಮಾರು 350 ಮೀಟರ್ ಮಿಶ್ರಭೂಮಿ ಮತ್ತು ಬಾಕಿ 255 ಮೀಟರ್‌ಗಳು ಉದ್ದ ಮಣ್ಣಿನಿಂದ ಕೂಡಿದೆ.
‘ನಮ್ಮ ಮೆಟ್ರೊ ರೈಲಿನಿಂದ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಸಾಕಷ್ಟು ಕಡಿಮೆಯಾಗಿದೆ. ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ಒಟ್ಟು ₹30,695 ಕೋಟಿ ವೆಚ್ಚದಲ್ಲಿ 72 ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಾಣವಾಗಲಿದೆ’ ಎಂದು ಯಡಿಯೂರಪ್ಪ ಹೇಳಿದರು.
***
‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಸುರಂಗ ಕೊರೆಯಲು ಒಟ್ಟು 12 ಟಿಬಿಎಂಗಳ ಅಗತ್ಯವಿದೆ. ಈಗಾಗಲೇ ನಾಲ್ಕು ಟಿಬಿಎಂಗಳು ಬಂದಿದ್ದು, ಉಳಿದ ಎಂಟು ಶೀಘ್ರದಲ್ಲಿಯೇ ಬರಲಿವೆ
ಅಜಯ್ ಸೇಠ್,
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ
***
ನಾಲ್ಕು ಪ್ಯಾಕೇಜ್‌ಗಳಲ್ಲಿ ಸುರಂಗ ಮಾರ್ಗ ನಿರ್ಮಾಣ
ತ್ವರಿತವಾಗಿ ಮುಗಿಸಬೇಕು ಎಂಬ ಉದ್ದೇಶದಿಂದ ಸುರಂಗ ಮಾರ್ಗದ ಕಾಮಗಾರಿಯನ್ನು ನಾಲ್ಕು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಲಾಗಿದೆ. ಶಿವಾಜಿನಗರ– ಕಂಟೋನ್ಮೆಂಟ್ ಭಾಗದಲ್ಲಿ ಸುರಂಗ ಕೊರೆಯುವುದು ಮೂರನೇ ಪ್ಯಾಕೇಜ್‌ನಲ್ಲಿ ಬರುತ್ತದೆ.
ಪ್ಯಾಕೇಜ್ 1
-ಜಯನಗರ ಅಗ್ನಿಶಾಮಕ ಕೇಂದ್ರದ ಬಳಿಯ ದಕ್ಷಿಣ ರ್‍ಯಾಂಪ್‌ನಿಂದ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ವರೆಗೆ.
-ಉದ್ದ– 3.66 ಕಿ.ಮೀ.
-ನೆಲದಡಿ ನಿಲ್ದಾಣಗಳು– ಡೇರಿ ವೃತ್ತ, ಲಕ್ಕಸಂದ್ರ ಮತ್ತು ಲ್ಯಾಂಗ್‌ಫೋರ್ಡ್ ಟೌನ್‌ನಲ್ಲಿ.
-ಅಫ್ಕಾನ್ಸ್ ಲಿಮಿಟೆಡ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ
-ಮೂರು ಟಿಬಿಎಂಗಳ ಅಗತ್ಯವಿದ್ದು, ಇವುಗಳನ್ನು ತಯಾರಿಸಲು ಹೆರೆನ್‌ನೆಚ್ ಕಂಪನಿಗೆ ವಹಿಸಲಾಗಿದೆ
ಪ್ಯಾಕೇಜ್ 2
-ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನಿಂದ ಶಿವಾಜಿನಗರ ನಿಲ್ದಾಣದವರೆಗೆ
-ಉದ್ದ– 2.76 ಕಿ.ಮೀ.
-ನೆಲದಡಿ ನಿಲ್ದಾಣಗಳು– ರಾಷ್ಟ್ರೀಯ ಮಿಲಿಟರಿ ಸ್ಕೂಲ್, ಎಂ.ಜಿ. ರಸ್ತೆ ಮತ್ತು ಶಿವಾಜಿನಗರ
-ಎಲ್ ಆ್ಯಂಡ್ ಟಿ ಗುತ್ತಿಗೆ ಪಡೆದಿದೆ
-ಈ ಪ್ಯಾಕೇಜ್‌ಗೆ ಅಗತ್ಯವಿರುವ ಎರಡು ಟಿಬಿಎಂ ಅವನಿ ಮತ್ತು ಲಾವಿ ಶಿವಾಜಿನಗರ ನಿಲ್ದಾಣಕ್ಕೆ ಬಂದಿದ್ದು, ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿವೆ
ಪ್ಯಾಕೇಜ್ 3– ಸುರಂಗ ಮಾರ್ಗ
855 ಮೀಟರ್ - ಶಿವಾಜಿನಗರ ನಿಲ್ದಾಣದಿಂದ ಕಂಟೋನ್ಮೆಂಟ್ ನಿಲ್ದಾಣದವರೆಗೆ
896 ಮೀಟರ್ -ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದವರೆಗೆ
682 ಮೀಟರ್ -ಪಾಟರಿ ಟೌನ್ ನಿಲ್ದಾಣದಿಂದ ಶಾದಿಮಹಲ್‌ವರೆಗೆ
ಪ್ಯಾಕೇಜ್ 4
-ಟ್ಯಾನರಿ ರಸ್ತೆಯಲ್ಲಿರುವ ಶಾದಿ ಮಹಲ್‌ನಿಂದ ನಾಗವಾರದಲ್ಲಿರುವ ಉತ್ತರ ರ‍್ಯಾಂಪ್‌ನವರೆಗೆ
-4.59 ಕಿ.ಮೀ.
-ನೆಲದಡಿ ನಿಲ್ದಾಣಗಳು– ಟ್ಯಾನರಿ ರಸ್ತೆ, ವೆಂಕಟೇಶಪುರ, ಕಾಡುಗೊಂಡನಹಳ್ಳಿ ಮತ್ತು ನಾಗವಾರ
-ಐಟಿಡಿ ಸಿಮೆಂಟ್ ಇಂಡಿಯಾ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿದೆ
-ಈ ಮಾರ್ಗದಲ್ಲಿ ಎರಡು ಟಿಬಿಎಂಗಳ ಅಗತ್ಯವಿದ್ದು, ಇವುಗಳನ್ನು ತಯಾರಿಸಲು ಹೆರೆನೆಚ್ ಕಂಪನಿಗೆ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.