ADVERTISEMENT

ನಮ್ಮ ಮೆಟ್ರೊ: ಆ.16ರಿಂದ ನಾಗಸಂದ್ರ–ಮಾದಾವರ ಪರೀಕ್ಷಾ ಸಂಚಾರ

ಮೆಟ್ರೊ: ಬಿಎಂಆರ್‌ಸಿಎಲ್‌ ತಾಂತ್ರಿಕ ತಂಡದಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 0:20 IST
Last Updated 1 ಆಗಸ್ಟ್ 2024, 0:20 IST
ಚಿಕ್ಕಬಿದರಕಲ್ಲು ಮೆಟ್ರೊ ನಿಲ್ದಾಣ 
ಚಿಕ್ಕಬಿದರಕಲ್ಲು ಮೆಟ್ರೊ ನಿಲ್ದಾಣ    

ಬೆಂಗಳೂರು: ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಈ ವರ್ಷದ ಅಂತ್ಯದ ಒಳಗೆ ನಾಗಸಂದ್ರದಿಂದ ಮಾದಾವರವರೆಗೆ ರೈಲು ಸಂಚಾರ ಆರಂಭಗೊಳ್ಳಲಿದೆ. ಅದಕ್ಕಾಗಿ ಆಗಸ್ಟ್‌ 16ರಿಂದ ವಿವಿಧ ಪರೀಕ್ಷೆಗಳನ್ನು ನಡೆಸಲು ಪ್ರಾಯೋಗಿಕ ಸಂಚಾರ ನಡೆಯಲಿದೆ.

ಮೆಟ್ರೊ ರೈಲಿನಲ್ಲಿ ಬಿಎಂಆರ್‌ಸಿಎಲ್‌ ತಾಂತ್ರಿಕ ತಂಡವು ಸಂಚರಿಸಿ ಪರೀಕ್ಷೆಗಳನ್ನು ನಡೆಸಲಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್‌ ತಿಳಿಸಿದ್ದಾರೆ.

ಸುಮಾರು ಎರಡೂವರೆ ತಿಂಗಳು ವಿವಿಧ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ಯಶಸ್ವಿಯಾದ ಬಳಿಕ ಸಿಗ್ನಲಿಂಗ್‌, ದೂರಸಂಪರ್ಕ, ವಿದ್ಯುತ್‌ ಸರಬರಾಜು ವ್ಯವಸ್ಥೆಗಳೊಂದಿಗೆ ಸಿಸ್ಟಂ ಸಂಯೋಜನೆ ನಡೆಯಲಿದೆ. ಪರೀಕ್ಷೆ ಪೂರ್ಣಗೊಂಡ ಬಳಿಕ ಗುಣಮಟ್ಟ ತಪಾಸಣಾ ಸಂಸ್ಥೆಗಳು ಸುರಕ್ಷತಾ ಪರೀಕ್ಷೆ ನಡೆಸಿ ವರದಿ ನೀಡಲಿವೆ. ವರದಿ ಸಕಾರಾತ್ಮಕವಾಗಿದ್ದರೆ ರೈಲ್ವೆ ಮಂಡಳಿಯು ಮೆಟ್ರೊ ರೈಲು ಸಂಚಾರ ಆರಂಭಿಸಲು ಅನುಮತಿ ನೀಡಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಹಸಿರು ಮಾರ್ಗದಲ್ಲಿ ವಿಸ್ತರಿತಗೊಂಡಿರುವ ಈ ಪ್ರದೇಶದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು (ಜಿಂದಾಲ್‌), ಮಾದಾವರ ಮೆಟ್ರೊ ನಿಲ್ದಾಣಗಳಿದ್ದು, ಎಲ್ಲ ನಿಲ್ದಾಣಗಳ ಸಿವಿಲ್‌ ಕಾಮಗಾರಿ ಮುಕ್ತಾಯಗೊಂಡಿದೆ. 3.7 ಕಿಲೋಮೀಟರ್‌ ದೂರದ ಈ ಮಾರ್ಗದಲ್ಲಿ ಗರ್ಡರ್‌ (ಸಿಮೆಂಟ್‌ ತೊಲೆ) ಅಳವಡಿಕೆ ಸಹಿತ ಸಿವಿಲ್‌ ಕಾಮಗಾರಿಗಳು ಪೂರ್ಣಗೊಂಡಿವೆ. 

ವಿಸ್ತರಿತ ಮಾರ್ಗದ ಕಾಮಗಾರಿಗೆ 2017ರ ಮೇ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಕು ಸಹಿತ ವಿವಿಧ ಕಾರಣಗಳಿಂದ ಕಾಮಗಾರಿ ನಿಧಾನವಾಗಿತ್ತು. 2023ರ ಜೂನ್‌ ವೇಳೆಗೆ ರೈಲು ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಇಟ್ಟುಕೊಂಡಿತ್ತು. ಆದರೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣವಾಗದ ಕಾರಣ ಅವಧಿ ವಿಸ್ತರಿಸಲಾಗಿತ್ತು. ಇದೀಗ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ.

ಹಸಿರು ಮಾರ್ಗ ಯೋಜನೆಯ ಕಾಮಗಾರಿಗಳು ಹಂತಹಂತವಾಗಿ ನಡೆದಿದ್ದವು. ಇದರ ಕೊನೆಯ ಹಂತವಾದ ನಾಗಸಂದ್ರ–ಮಾದಾವರ ಮಾರ್ಗ ಮುಕ್ತಾಯಗೊಂಡರೆ ಹಸಿರು ಮಾರ್ಗ ನಿರ್ಮಾಣ ಶೇ 100ರಷ್ಟು ಪೂರ್ಣಗೊಂಡಂತಾಗಲಿದೆ. ನೆಲಮಂಗಲ, ಮಾಕಳಿ ಮತ್ತು ಮಾದನಾಯಕನಹಳ್ಳಿ ಸಹಿತ ಸುತ್ತಮುತ್ತಲ ಪ್ರದೇಶಗಳಿಂದ ನಗರಕ್ಕೆ ಬರುವವರಿಗೆ ಈ ಮೆಟ್ರೊ ರೈಲು ಉಪಯೋಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.