ಬೆಂಗಳೂರು: ‘ನಮ್ಮ ಮೆಟ್ರೊ’ದ ಹಸಿರು ಮಾರ್ಗದಲ್ಲಿರುವ ಗೊರಗುಂಟೆ ಪಾಳ್ಯ ನಂತರದ ನಾಲ್ಕು ನಿಲ್ದಾಣಗಳಲ್ಲಿ ಸ್ಕೈವಾಕ್ ಇಲ್ಲದೇ, ರಸ್ತೆಯ ಒಂದು ಬದಿಯ ಪ್ರಯಾಣಿಕರು ಮೆಟ್ರೊ ನಿಲ್ದಾಣ ತಲುಪಲು ಹರಸಾಸಪಡುವಂತಾಗಿದೆ.
ಗೊರಗುಂಟೆಪಾಳ್ಯದ ನಂತರ ಸಿಗುವ ಪೀಣ್ಯ, ಪೀಣ್ಯ ಇಂಡಸ್ಟ್ರಿ, ಜಾಲಹಳ್ಳಿ, ದಾಸರಹಳ್ಳಿಯ ಒಂದು ಭಾಗದಲ್ಲಿರುವ ಪ್ರಯಾಣಿಕರು ಎದುರು ಭಾಗದಲ್ಲಿರುವ ಮೆಟ್ರೊ ನಿಲ್ದಾಣ ತಲುಪಲು ರಸ್ತೆಯನ್ನು ದಾಟಬೇಕಿದೆ. ಸಂಚಾರ ದಟ್ಟಣೆ ಹೆಚ್ಚಿರುವ ಈ ರಸ್ತೆ ದಾಟುವುದು ತುಂಬಾ ಅಪಾಯಕಾರಿಯಾಗಿದೆ.
‘ಹಸಿರು ಮಾರ್ಗ‘ದ ಬಹುತೇಕ ನಿಲ್ದಾಣಗಳಲ್ಲಿ ರಸ್ತೆಯ ಎರಡು ಬದಿಯಿಂದಲೂ ಮೆಟ್ರೊ ನಿಲ್ದಾಣ ಪ್ರವೇಶಕ್ಕೆ ಕಲ್ಪಿಸಲಾಗಿದೆ. ಎಕ್ಸಲೇಟರ್, ಮೆಟ್ಟಿಲು ಹಾಗೂ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಪೀಣ್ಯದಿಂದ ದಾಸರಹಳ್ಳಿವರೆಗಿನ ನಾಲ್ಕು ನಿಲ್ದಾಣಗಳ ಒಂದು ಬದಿಯಲ್ಲಿ ಪ್ರವೇಶ ದ್ವಾರವಿಲ್ಲ. ರಸ್ತೆ ದಾಟಲು ಸ್ಕೈವಾಕ್ ಕೂಡ ಇಲ್ಲ. ಆದರೆ, ನಾಗಸಂದ್ರ ಮೆಟ್ರೊ ನಿಲ್ದಾಣದಿಂದ ಶೋಭಾ ಅಪಾರ್ಟ್‌ಮೆಂಟ್ ಕಡೆ ತೆರಳಲು ಸ್ಕೈವಾಕ್ ನಿರ್ಮಿಸಲಾಗಿದೆ. ಇದು ಕೂಡ ಸ್ಥಳೀಯರ ಹೋರಾಟದ ನಂತರವೇ ನಿರ್ಮಾಣವಾಗಿದೆ. ಸ್ಕೈವಾಕ್‌ನ ಒಂದು ಭಾಗದಲ್ಲಿ ಲಿಫ್ಟ್ ಇದೆ. ಪ್ರಯಾಣಿಕರು ತುಸು ನಿರಾಳವಾಗಿ ಸಂಚರಿಸುತ್ತಿದ್ದಾರೆ.
ತೆವಳುತ್ತಾ ಸಾಗಿದ ಕಾಮಗಾರಿ: ದಾಸರಹಳ್ಳಿ ನಿಲ್ದಾಣದಲ್ಲಿ ಸೌಂದರ್ಯ ಪ್ಯಾರಡೈಸ್ ಕಡೆಗೆ ರಸ್ತೆ ದಾಟುವದಕ್ಕಾಗಿ ಸ್ಕೈವಾಕ್ ನಿರ್ಮಿಸಲು ಕಬ್ಬಿಣದ ಕಂಬಗಳನ್ನು ತಂದು ಹಾಕಲಾಗಿದೆ. ಆದರೆ, ಕಾಮಗಾರಿ ಚುರುಕು ಪಡೆದಿಲ್ಲ. ಸಾಮಗ್ರಿಗಳು ಸ್ಥಳದಲ್ಲೇ ಬಿದ್ದಿವೆ. ಇನ್ನು, ಅತ್ಯಂತ ದಟ್ಟಣೆಯಿರುವ ಉಳಿದ ಮೂರು ನಿಲ್ದಾಣಗಳಲ್ಲಿ ಸ್ಕೈವಾಕ್ ಕಾಮಗಾರಿಯೇ ಆರಂಭವಾಗಿಲ್ಲ.
ತುಮಕೂರು ರಸ್ತೆಯ ಎರಡೂ ಬದಿಯಲ್ಲೂ ಹಲವು ಬಡಾವಣೆಗಳಿವೆ. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕೆ ತೆರಳುವ ಕಾರ್ಮಿಕರು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ರಸ್ತೆ ದಾಟಿ ನಿಗದಿತ ಸ್ಥಳಕ್ಕೆ ತಲುಪುತ್ತಿದ್ದಾರೆ. ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿದ್ದು, ರಸ್ತೆ ದಾಟಬೇಕಾದರೆ ಅಪಾಯ ತಂದೊಡ್ಡುತ್ತಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ವಿಸ್ತರಿತ ಮಾರ್ಗದಲ್ಲೂ ಹೀಗೇ: ನಾಗಸಂದ್ರದಿಂದ ಮಾದಾವರದವರೆಗೆ ನಡೆಯುತ್ತಿರುವ (3.14 ಕಿ.ಮೀ) ವಿಸ್ತರಿತ ಮಾರ್ಗ ಮಾರ್ಚ್ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಉದ್ಘಾಟಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಈ ಮಾರ್ಗದಲ್ಲಿರುವ ಮಂಜುನಾಥ ನಗರ, ಚಿಕ್ಕಬಿದರಕಲ್ಲು(ಜಿಂದಾಲ್) ಹಾಗೂ ಮಾದಾವರ ನಿಲ್ದಾಣಗಳಲ್ಲೂ ಸ್ಕೈವಾಕ್ ನಿರ್ಮಾಣದ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ವಿಸ್ತರಿತ ಮಾರ್ಗ ಉದ್ಘಾಟನೆಯ ನಂತರ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ ದಾಟಿಯೇ ಮೆಟ್ರೊ ನಿಲ್ದಾಣಕ್ಕೆ ಬರಬೇಕಾಗಬಹುದು ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಾರೆ.
ಮೆಟ್ರೊ ಮಾರ್ಗದ ಬಳಿಯೇ ಪೀಣ್ಯ ಮೇಲ್ಸೇತುವೆ ಹಾದು ಹೋಗಿದ್ದು ರಸ್ತೆಯ ಎರಡೂ ಬದಿಯಲ್ಲೂ ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ನಗರದ ಒಳಗೆ ಹಾದುಹೋಗಿರುವ ತುಮಕೂರು ರಸ್ತೆ ಅತ್ಯಂತ ಕಿರಿದಾಗಿದೆ. ಎರಡು ಬದಿಯಲ್ಲೂ ಕಟ್ಟಡಗಳಿದ್ದು ಈ ಮಾರ್ಗ ನಿರ್ಮಾಣದ ವೇಳೆ ಬಿಎಂಆರ್‌ಸಿಎಲ್‌ಗೆ ಭೂಸ್ವಾಧೀನ ಕಷ್ಟಕರ ಆಗಿತ್ತು. ಈಗ ಪ್ರಯಾಣಿಕರ ಸಂಕಷ್ಟ ತೀವ್ರಗೊಂಡಿದೆ. ಜನವರಿ ವೇಳೆಗೆ ಪೀಣ್ಯ ಮೇಲ್ಸೇತುವೆ ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಅದಾದ ಮೇಲೆ ಮೇಲ್ಸೇತುವೆಯಲ್ಲಿ ಬೃಹತ್ ವಾಹನ ಸಂಚಾರಕ್ಕೆ ಅನುಮತಿ ಸಿಗಲಿದೆ. ಆಗ ಕೆಳರಸ್ತೆಯಲ್ಲಿ ದಟ್ಟಣೆ ಕೊಂಚ ತಗ್ಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಹಸಿರು ಮಾರ್ಗದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿಲ್ಲ. ಹೋರಾಟ ನಡೆಸಿದ ಮೇಲೆ ಒಂದು ಸ್ಥಳದಲ್ಲಿ ಮಾತ್ರ ಸ್ಕೈವಾಕ್ ನಿರ್ಮಿಸಲಾಗಿದೆ. ದಾಸರಹಳ್ಳಿಯಲ್ಲೂ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಸ್ಕೈವಾಕ್ ನಿರ್ಮಿಸುವ ಜವಾಬ್ದಾರಿ ಬಿಎಂಆರ್‌ಸಿಎಲ್‌ನದ್ದು. 2016ರಲ್ಲಿಯೇ ಮನವಿ ಸಲ್ಲಿಸಿದ್ದರೂ ಮೆಟ್ರೊ ಅಧಿಕಾರಿಗಳು ಇದುವರೆಗೂ ಕ್ರಮ ಕೈಗೊಂಡಿಲ್ಲ. ಜಾಲಹಳ್ಳಿಯಲ್ಲಿ ಪ್ರತಿನಿತ್ಯ ಸಾವಿರಾರು ಜನರು ಹೆದ್ದಾರಿ ದಾಟಿ ಒಂದು ಬದಿಯಿಂದ ಮತ್ತೊಂದು ಬದಿಗೆ ತಲುಪುತ್ತಿದ್ದಾರೆ. ಈ ಸ್ಥಳದಲ್ಲಿ ಅಂಡರ್‌ಪಾಸ್ ಕಾಮಗಾರಿ ಸಹ ಸ್ಥಗಿತಗೊಂಡಿದೆ. ಕಟ್ಟಡ ತೆರವು ಬಿಟ್ಟರೆ ಬೇರೆ ಕಾಮಗಾರಿ ಚುರುಕು ಪಡೆದಿಲ್ಲ.
–ಧರ್ಮಶ್ರೀ ಮಂಜುನಾಥ್ ದಾಸರಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.