ADVERTISEMENT

ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕುಸಿದು ಬಿದ್ದಿದ್ದಕ್ಕೆ ಕಾರಣ ಕೊಟ್ಟ ಐಐಎಸ್‌ಸಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 5:30 IST
Last Updated 22 ಜನವರಿ 2023, 5:30 IST
   

ಬೆಂಗಳೂರು: ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿಬಿದ್ದು ತಾಯಿ– ಮಗು ಮೃತಪಟ್ಟ ಪ್ರಕರಣದ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ‘ಕಬ್ಬಿಣದ ಚೌಕಟ್ಟಿಗೆ ಆಸರೆಯಾಗಿ ಕಟ್ಟಲಾಗಿದ್ದ ಕಬ್ಬಿಣದ ಹಗ್ಗಗಳನ್ನು ತೆರವುಗೊಳಿಸಿದ ಬಳಿಕ ಒಂದು ದಿನ ಪೂರ್ತಿ ಅಸುರಕ್ಷಿತ ಸ್ಥಿತಿಯಲ್ಲೇ ಇತ್ತು. ಅನಾಹುತಕ್ಕೆ ಇದೇ ಕಾರಣ’ ಎಂದು ಅಭಿಪ್ರಾಯಪಟ್ಟಿದೆ.

ಐಐಎಸ್‌ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಜೆ.ಎಂ. ಚಂದ್ರಕಿಶನ್ ನೇತೃತ್ವದ ತಂಡ 27 ಪುಟಗಳ ವರದಿ ಸಿದ್ಧಪಡಿಸಿದ್ದು, ಇ–ಮೇಲ್ ಮೂಲಕ ವರದಿಯನ್ನು ಬಿಎಂಆರ್‌ಸಿಎಲ್‌ಗೆ ಸಲ್ಲಿಸಿದೆ. 18 ಮೀಟರ್‌ ಎತ್ತರದ ಕಂಬಕ್ಕೆ ಯಾವುದೇ ಆಸರೆ ಇಲ್ಲದಿದ್ದರಿಂದ ರಸ್ತೆಗೆ ವಾಲಿದೆ ಎಂಬುದು ಪರಿಶೀಲನೆ ವೇಳೆ ಗೊತ್ತಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಈ ರೀತಿಯ ಕಂಬ ನಿರ್ಮಾಣ ಮಾಡುವಾಗ ಆಸರೆಗಾಗಿ ಕಬ್ಬಿಣದ ಹಗ್ಗಗಳಿಂದ ಬಿಗಿಯಲಾಗುತ್ತದೆ. ಅದನ್ನು ತೆರವುಗೊಳಿಸಿದ ತಕ್ಷಣ ವೃತ್ತಾಕಾರದ ಕಬ್ಬಿಣದ ಪ್ಲೇಟ್‌ಗಳನ್ನು ಜೋಡಿಸಬೇಕು. ಅಲ್ಲಿಯ ತನಕ ಸುರಕ್ಷತೆ ದೃಷ್ಟಿಯಿಂದ ಕ್ರೇನ್‌ನಿಂದ ಆಸರೆ ನೀಡಬೇಕಿತ್ತು. ಈಗ ಬಿದ್ದಿರುವ ಚೌಕಟ್ಟಿಗೆ ಈ ರೀತಿಯ ಯಾವುದೇ ಆಸರೆ ಇರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ADVERTISEMENT

ಈ ರೀತಿಯ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಕಾರ್ಮಿಕರಿಗೆ ತಿಳಿವಳಿಕೆ ನೀಡಬೇಕು. ಹೊಸದಾಗಿ ಬರುವ ಕಾರ್ಮಿಕರಿಗೆ ತರಬೇತಿ ನೀಡಬೇಕು ಎಂದು ವರದಿಯಲ್ಲಿ ತಿಳಿಸಿದೆ.

ಘಟನೆಗೆ ಕಾರಣ ಏನು ಎಂಬುದನ್ನಷ್ಟೇ ಐಐಎಸ್‌ಸಿ ತಂಡ ಹೇಳಿದ್ದು, ಯಾರು ಹೊಣೆ ಎಂಬುದು ಪೊಲೀಸ್‌ ಮತ್ತು ಬಿಎಂಆರ್‌ಸಿಎಲ್‌ ನಡೆಸುತ್ತಿರುವ ಹೆಚ್ಚುವರಿ ತನಿಖೆಯಿಂದ ಗೊತ್ತಾಗಬೇಕಿದೆ.

ಹೆಣ್ಣೂರು ಕ್ರಾಸ್ ಬಳಿ ಮೆಟ್ರೊ ಪಿಲ್ಲರ್ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಜ. 10ರಂದು ಬೆಳಿಗ್ಗೆ ಬೈಕ್‌ ಮೇಲೆ ಉರುಳಿಬಿದ್ದಿತ್ತು. ಬೈಕ್‌ನಲ್ಲಿ ಹೊರಟಿದ್ದ ತೇಜಸ್ವಿನಿ ಸುಲಾಖೆ (28) ಹಾಗೂ ಎರಡೂವರೆ ವರ್ಷದ ಮಗು ವಿಹಾನ್ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.