ಬೆಂಗಳೂರು: ನಮ್ಮ ಮೆಟ್ರೊ 2ನೇ ಹಂತದ ಆರ್.ವಿ.ರಸ್ತೆ–ಬೊಮ್ಮಸಂದ್ರ(ರೀಚ್– 5) ಮಾರ್ಗವನ್ನು ಹೊಸೂರು ತನಕ ವಿಸ್ತರಿಸುವ ಪ್ರಸ್ತಾವ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಕಾರ್ಯಸಾಧ್ಯತಾ ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ತಮಿಳುನಾಡು ಸರ್ಕಾರ ಅಧ್ಯಯನ ಆರಂಭಿಸಲಿದೆ.
ಹೊಸೂರು ರಸ್ತೆಯಲ್ಲಿ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ತನಕದ ಮೆಟ್ರೊ ರೈಲು ಮಾರ್ಗದ(ಹಳದಿ ಮಾರ್ಗ) ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. 2023ರಲ್ಲಿ ಕಾರ್ಯಾರಂಭ ಆಗಲಿರುವ ಮೆಟ್ರೊ ರೈಲು ಮಾರ್ಗಗಳಲ್ಲಿ ಇದೂ ಒಂದು. ಈ ಮಾರ್ಗವನ್ನು ಹೊಸೂರು ತನಕ ವಿಸ್ತರಣೆ ಮಾಡಬೇಕು ಎಂಬ ತಮಿಳುನಾಡು ಸರ್ಕಾರದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ 2022ರ ಜೂನ್‌ನಲ್ಲಿ ಒಪ್ಪಿಗೆ ಸೂಚಿಸಿತ್ತು. ‘ಬೊಮ್ಮಸಂದ್ರದಿಂದ ಹೊಸೂರು ನಡುವಿನ ಮೆಟ್ರೊ ರೈಲು ಮಾರ್ಗ ವಿಸ್ತರಿಸುವ ಸಂಬಂಧ ತಮಿಳುನಾಡು ಸರ್ಕಾರ ಅಧ್ಯಯನ ನಡೆಸಬಹುದು’ ಎಂದು ರಾಜ್ಯ ಸರ್ಕಾರ ತಿಳಿಸಿತ್ತು.
ಕರ್ನಾಟಕ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ದೊರೆತ ಬೆನ್ನಲ್ಲೇ ತಮಿಳುನಾಡು ಸರ್ಕಾರ ಚೆನ್ನೈ ಮೆಟ್ರೊ ರೈಲು ನಿಗಮದ ಮೂಲಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅದಕ್ಕೆ ಕೇಂದ್ರದಿಂದ ಈಗ ಹಸಿರು ನಿಶಾನೆ ದೊರೆತಿದೆ.
‘ಫೆ.21ರಂದು ಒಪ್ಪಿಗೆ ದೊರೆತಿದ್ದು, ಅಧ್ಯಯನಕ್ಕೆ ತಮಿಳುನಾಡು ಸರ್ಕಾರ ₹75 ಲಕ್ಷ ಅನುದಾನವನ್ನೂ ಒದಗಿಸಿದೆ’ ಎಂದು ತಮಿಳುನಾಡಿನ ಕೃಷ್ಣಗಿರಿ ಸಂಸದ ಡಾ. ಎ. ಚೆಲ್ಲಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಯೋಜನೆಗೆ ತಗಲುವ ವೆಚ್ಚವನ್ನು ಎರಡೂ ಸರ್ಕಾರಗಳು ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಕಾರ್ಯಾಚರಣೆ ಸಂದರ್ಭದಲ್ಲೂ ಸಮನ್ವಯದ ಅಗತ್ಯವಿದೆ. ಹೊಸೂರು ತನಕ ಮೆಟ್ರೊ ರೈಲು ವಿಸ್ತರಣೆಯಾದರೆ ಎರಡೂ ರಾಜ್ಯಗಳ ಜನರಿಗೆ ಪರಸ್ಪರ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.
ಬೊಮ್ಮಸಂದ್ರದಿಂದ ಹೊಸೂರಿಗೆ 20.5 ಕಿಲೋ ಮೀಟರ್ ಮೆಟ್ರೊ ರೈಲು ಮಾರ್ಗ ನಿರ್ಮಾಣ ಆಗಬೇಕಿದೆ. ಈ ಪೈಕಿ ಕರ್ನಾಟಕದ ವ್ಯಾಪ್ತಿಯಲ್ಲಿ 11.7 ಕಿಲೋ ಮೀಟರ್ ಇದೆ. ಉಳಿದ 8.8 ಕಿಲೋ ಮೀಟರ್ ಮಾರ್ಗ ರಾಜ್ಯದ ಗಡಿ ದಾಟಿ ನಿರ್ಮಾಣ ಆಗಬೇಕಿದೆ. ಈ ಯೋಜನೆ ಕಾರ್ಯಸಾಧುವಾದರೆ ದಕ್ಷಿಣ ಭಾರತದ ಮೊದಲನೇ ಅಂತರರಾಜ್ಯ ಮೆಟ್ರೊ ರೈಲು ಮಾರ್ಗ ಇದಾಗಲಿದೆ.
ಆದರೆ, ಈ ಯೋಜನೆ ಪ್ರಸ್ತಾಪವಾದಾಗ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಹೊಸೂರಿಗೆ ಮೆಟ್ರೊ ಸಂಪರ್ಕ ಕಲ್ಪಿಸಿದರೆ ರಾಜ್ಯಕ್ಕೆ ದಕ್ಕಬೇಕಾದ ಕೈಗಾರಿಕೆಗಳು, ಉದ್ದಿಮೆಗಳು ಹೊಸೂರಿಗೆ ಸ್ಥಳಾಂತರಗೊಳ್ಳಲಿವೆ ಎಂದು ಆತಂಕ ವ್ಯಕ್ತವಾಗಿತ್ತು. ಹೊಸೂರಿನ ಬದಲಿಗೆ ಹೊಸಕೋಟೆ, ದಾಬಸ್‌ಪೇಟೆ, ಚಿಕ್ಕಬಳ್ಳಾಪುರಕ್ಕೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದರು.
ಮತ್ತೊಂದು ಡಬಲ್ ಡೆಕ್ಕರ್ ಮಾರ್ಗ
3ನೇ ಹಂತದ ಮೆಟ್ರೊ ರೈಲು ಮಾರ್ಗದಲ್ಲಿ ನಗರದ ಎರಡನೇ ಡಬಲ್ ಡೆಕ್ಕರ್ ಮಾರ್ಗ ನಿರ್ಮಾಣವಾಗಲಿದೆ.
ನಿರ್ಮಾಣ ಹಂತದಲ್ಲಿರುವ ಹಳದಿ ಮಾರ್ಗದಲ್ಲಿ ಈಗಾಗಲೇ ಡಬಲ್ ಡೆಕ್ಕರ್ ಮಾರ್ಗ ನಿರ್ಮಾಣವಾಗಿದೆ. ಈ ವರ್ಷದ ಅಂತ್ಯಕ್ಕೆ ಕಾರ್ಯಾರಂಭವಾಗುವ ಸಾಧ್ಯತೆ ಇದೆ.
‘ಜೆ.ಪಿ. ನಗರ ನಾಲ್ಕನೇ ಹಂತದಿಂದ ಹೆಬ್ಬಾಳ ಸಂಪರ್ಕಿಸುವ 31 ಕಿ.ಮೀ ಮಾರ್ಗ ಬಹುತೇಕ ಹೊರ ವರ್ತುಲ ರಸ್ತೆಯಲ್ಲಿ ಸಾಗಲಿದೆ. ಇಲ್ಲಿಯೂ ಕೆಲವೆಡೆ ಡಬಲ್ ಡೆಕ್ಕರ್ ಮಾರ್ಗ ನಿರ್ಮಿಸುವ ಉದ್ದೇಶ ಇದೆ. ಡಾಲ್ಮಿಯಾ ವೃತ್ತದಲ್ಲಿರುವ ರಸ್ತೆ ಮೇಲ್ಸೇತುವೆ ಉರುಳಿಸಲಾಗುತ್ತದೆ ಎಂಬುದು ಸುಳ್ಳು. ಈ ಯೋಜನೆ ಇನ್ನೂ ಪ್ರಸ್ತಾವ ಹಂತದಲ್ಲಿದ್ದು, ಕೇಂದ್ರ ಸರ್ಕಾರ ಒಪ್ಪಿಗೆ ದೊರಕಿದ ಬಳಿಕವೇ ಎಲ್ಲವೂ ಅಂತಿಮವಾಗಲಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.