ADVERTISEMENT

ನಮ್ಮ ಮೆಟ್ರೊ ಸ್ಮಾರ್ಟ್‌ ಕಾರ್ಡ್‌ ಕೊರತೆ: ಪ್ರಯಾಣಿಕರ ಪರದಾಟ

ಕೋವಿಡ್‌: ಟೋಕನ್‌ ವಿತರಣೆ ಸ್ಥಗಿತ, ನಮ್ಮ ಮೆಟ್ರೊ ಪ್ರಯಾಣಿಕರಿಗೆ ಮುಂದುವರಿದ ಕಷ್ಟ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 20:10 IST
Last Updated 15 ಮಾರ್ಚ್ 2021, 20:10 IST
ಮೆಟ್ರೊ ಸ್ಮಾರ್ಟ್‌ ಕಾರ್ಡ್‌ ಬಳಕೆ–ಸಾಂದರ್ಭಿಕ ಚಿತ್ರ
ಮೆಟ್ರೊ ಸ್ಮಾರ್ಟ್‌ ಕಾರ್ಡ್‌ ಬಳಕೆ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ಕಾರಣದಿಂದ ಟೋಕನ್‌ ವಿತರಣೆಯನ್ನು ನಿಲ್ಲಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮವು ಈಗ ಸಮರ್ಪಕವಾಗಿ ಸ್ಮಾರ್ಟ್‌ಕಾರ್ಡ್ ಕೂಡ ಪೂರೈಸದ ಕಾರಣ ತೊಂದರೆ ಅನುಭವಿಸಬೇಕಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

‘ಗೊರಗುಂಟೆಪಾಳ್ಯ ಮೆಟ್ರೊ ರೈಲು ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಹೋದಾಗ ಸ್ಮಾರ್ಟ್‌ಕಾರ್ಡ್‌ ಖಾಲಿ ಆಗಿವೆ ಎಂದು ಸಿಬ್ಬಂದಿ ಹೇಳಿದರು. ಟೋಕನ್‌ ಕೂಡ ವಿತರಣೆ ಮಾಡುತ್ತಿಲ್ಲ. ಪ್ರಯಾಣ ಮಾಡಲಾಗದೆ ವಾಪಸ್‌ ಬರಬೇಕಾಯಿತು’ ಎಂದು ಪ್ರಯಾಣಿಕರೊಬ್ಬರು ಹೇಳಿದರು.

‘ಗೊರಗುಂಟೆ ಪಾಳ್ಯ ಮಾತ್ರವಲ್ಲದೆ, ಜಾಲಹಳ್ಳಿ, ದಾಸರಹಳ್ಳಿ ನಿಲ್ದಾಣ ಸೇರಿದಂತೆ ನಗರದ ಬಹುತೇಕ ನಿಲ್ದಾಣಗಳಲ್ಲಿ ಸ್ಮಾರ್ಟ್‌ಕಾರ್ಡ್‌ ಕೊರತೆ ಇದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ’ ಎಂದು ಬಿಎಂಆರ್‌ಸಿಎಲ್‌ ಕಾರ್ಮಿಕರ ಸಂಘದ ಸೂರ್ಯ ನಾರಾಯಣಮೂರ್ತಿ ದೂರಿದರು.

ADVERTISEMENT

‘ನಿಗದಿತ ಸಂಖ್ಯೆಯ ಸ್ಮಾರ್ಟ್‌ ಕಾರ್ಡ್‌ಗಳ ಸಂಗ್ರಹ ಇರುವಂತೆ ನೋಡಿಕೊಳ್ಳದೆ ಪ್ರಯಾಣಿಕರು ತೊಂದರೆ ಅನುಭವಿಸುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ಕೆಲವು ದಿನಗಳ ಹಿಂದೆ ಸ್ಮಾರ್ಟ್‌ಕಾರ್ಡ್‌ಗಳ ಕೊರತೆ ಉದ್ಭವಿಸಿತ್ತು. ಆದರೆ, ಈಗ ಸರಿಯಾಗಿದೆ. ಯಾವ ಪ್ರಯಾಣಿಕರನ್ನೂ ವಾಪಸ್‌ ಕಳುಹಿಸಿಲ್ಲ. ಸ್ಮಾರ್ಟ್‌ ಕಾರ್ಡ್‌ಗಳು ಸಂಪೂರ್ಣವಾಗಿ ಖಾಲಿಯಾದರೆ ಕಾಗದದ ಟಿಕೆಟ್‌ ನೀಡಿ ಪ್ರಯಾಣಿಸಲು ಅವಕಾಶ ನೀಡುವ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

‘ಟೋಕನ್‌ ವಿತರಣೆಗಿಂತ ಸ್ಮಾರ್ಟ್‌ಕಾರ್ಡ್‌ ಬಳಕೆ ಮಾಡುವುದರಿಂದ ನಿಗಮಕ್ಕೂ ಮತ್ತು ಪ್ರಯಾಣಿಕರೂ ಆರ್ಥಿಕವಾಗಿ ಅನುಕೂಲವಾಗುತ್ತದೆ. ಟೋಕನ್‌ ವಿತರಣೆ ಸ್ಥಗಿತಗೊಳಿಸಿರುವುದರಿಂದ ಸ್ಮಾರ್ಟ್‌ಕಾರ್ಡ್‌ ಬಳಕೆ ಹೆಚ್ಚಾಗಿದ್ದು ಕೆಲವು ಕಡೆಗಳಲ್ಲಿ ಮಾತ್ರ ಕೊರತೆ ಉದ್ಭವಿಸಿತ್ತು’ ಎಂದೂ ಅವರು ಹೇಳಿದರು.

ಕೊರತೆ ಇಲ್ಲ: ‘ಯಾವುದೇ ನಿಲ್ದಾಣಗಳಲ್ಲಿ ಸ್ಮಾರ್ಟ್‌ಕಾರ್ಡ್‌ಗಳ ಕೊರತೆ ಇಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಕಾರ್ಡ್‌ಗಳನ್ನು ತರಲಾಗಿದೆ. ದಿನಕ್ಕೆ 6,500ದಿಂದ 7,000 ಸ್ಮಾರ್ಟ್‌ಕಾರ್ಡ್‌ಗಳು ಮಾರಾಟವಾಗುತ್ತಿವೆ. ತಿಂಗಳಿಗೆ ಅಂದಾಜು 2 ಲಕ್ಷ ಕಾರ್ಡ್‌ಗಳು ಬೇಕಾಗಿದ್ದು, ಎಲ್ಲ ವ್ಯವಸ್ಥೆ ಮಾಡಲಾಗಿದೆ’ ಎಂದು ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್‌.ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ನಿಲ್ದಾಣದಲ್ಲಿ ಕಾರ್ಡ್‌ಗಳ ಸಂಖ್ಯೆ ಕಡಿಮೆಯಿದ್ದರೂ, ಪಕ್ಕದ ನಿಲ್ದಾಣದಿಂದ ತೆಗೆದುಕೊಂಡು ಬಂದು ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಯಾವುದೇ ಪ್ರಯಾಣಿಕರಿಗೂ ತೊಂದರೆಯಾಗಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.