ಬೆಂಗಳೂರು: ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಅಂತಿಮ ಹಂತ ತಲುಪುತ್ತಿದೆ. ತುಂಗಾ ಟಿಬಿಎಂ(ಸುರಂಗ ಕೊರೆಯುವ ಯಂತ್ರ) ಬುಧವಾರ ಕೊರೆಯುವ ಕಾರ್ಯ ಪೂರ್ಣಗೊಳಿಸಿದೆ. ಭದ್ರಾ ಟಿಬಿಎಂ ಅಕ್ಟೋಬರ್‌ಗೆ ಹೊರಬರಲಿದ್ದು, ಅಲ್ಲಿಗೆ ಗುಲಾಬಿ ಮಾರ್ಗದ ಸುರಂಗ ಕೊರೆಯುವ ಕಾರ್ಯ ಮುಕ್ತಾಯಗೊಳ್ಳಲಿದೆ.
ಕಳೆದ ಫೆಬ್ರುವರಿ 3ರಂದು ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ಕೊರೆಯುವ ಕಾಮಗಾರಿಯನ್ನು ‘ತುಂಗಾ’ ಆರಂಭಿಸಿತ್ತು. ನಾಗವಾರ ನಿಲ್ದಾಣದ ಸೌತ್‌ಕಟ್ ಮತ್ತು ಕವರ್ ಶಾಫ್ಟ್‌ನಲ್ಲಿ ಪೂರ್ಣಗೊಳಿಸಿತು.
9 ಸುರಂಗ ಕೊರೆಯುವ ಯಂತ್ರಗಳಲ್ಲಿ ‘ವರದ’, ‘ಅವನಿ’, ‘ಊರ್ಜ್ವಾ’, ‘ವಿಂಧ್ಯಾ’, ‘ಲವಿ’, ‘ವಮಿಕ’, ‘ರುದ್ರ’ ಯಂತ್ರಗಳು ಈಗಾಗಲೇ ಕೆಲಸ ಮುಗಿಸಿವೆ. ಇದೀಗ ತುಂಗಾ ಸೇರ್ಪಡೆಗೊಂಡಿದೆ. ಕೊನೇ ಹಂತದ 624 ಮೀಟರ್ ಸುರಂಗವನ್ನು ‘ಭದ್ರಾ’ ಕೊರೆಯುತ್ತಿದೆ. ಅದರಲ್ಲಿ ಇನ್ನು 410 ಮೀಟರ್ ಮಾತ್ರ ಬಾಕಿ ಇದೆ.
ಹಂತ– 2ರ ಯೋಜನೆಯಡಿ ರೀಚ್–6 ಮಾರ್ಗ ಇದಾಗಿದ್ದು, ಕಾಳೇನ ಅಗ್ರಹಾರದಿಂದ ನಾಗವಾರವರೆಗೆ 21.76 ಕಿ.ಮೀ.ನ ಈ ಮಾರ್ಗದಲ್ಲಿ 13.76 ಕಿ.ಮೀ. ಉದ್ದದ ಸುರಂಗ ಮಾರ್ಗ ಇರಲಿದೆ. ಎರಡು ಪಥಗಳು ಸೇರಿ 20.992 ಕಿಲೋ ಮೀಟರ್ ಸುರಂಗ ನಿರ್ಮಾಣವಾಗಲಿದೆ.
ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ, ಸ್ವಾಗತ್ ರೋಡ್ ಕ್ರಾಸ್, ಡೇರಿ ಸರ್ಕಲ್, ಮೈಕೊ ಇಂಡಸ್ಟ್ರೀಸ್, ಲ್ಯಾಂಗ್‌ಫೋರ್ಡ್ ಟೌನ್, ವೆಲ್ಲಾರ, ಎಂ.ಜಿ. ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್, ಪಾಟರಿ ಟೌನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜು, ನಾಗವಾರದಲ್ಲಿ ಮೆಟ್ರೊ ನಿಲ್ದಾಣಗಳು ನಿರ್ಮಾಣಗೊಳ್ಳುತ್ತಿವೆ. ಅಕ್ಟೋಬರ್ ಅಂತ್ಯಕ್ಕೆ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಳ್ಳಲಿದ್ದು, 2025ರ ಅಂತ್ಯಕ್ಕೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.