ಬೆಂಗಳೂರು: ಹೆಣ್ಣೂರು ಕ್ರಾಸ್‌ನಲ್ಲಿ ಮೆಟ್ರೊ ಪಿಲ್ಲರ್ ನಿರ್ಮಿಸಲು ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಉರುಳಿ ಬಿದ್ದು ತಾಯಿ–ಮಗು ಮೃತಪಟ್ಟ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು, ಸದ್ಯದಲ್ಲೇ ಅಂತಿಮ ವರದಿ ಸಲ್ಲಿಸುವ ಸಾಧ್ಯತೆಯಿದೆ.
ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಮನವಿ ಮೇರೆಗೆ ಘಟನಾ ಸ್ಥಳಕ್ಕೆ ತಜ್ಞರು ಭೇಟಿ ನೀಡಿ ಮಾದರಿ ಸಂಗ್ರಹಿಸಿದ್ದರು. ಕಾಮಗಾರಿ ಉಸ್ತುವಾರಿ ವಹಿಸಿದ್ದ ಬಿಎಂಆರ್‌ಸಿಎಲ್ ಅಧಿಕಾರಿಗಳು ಹಾಗೂ ಗುತ್ತಿಗೆ ಪಡೆದಿದ್ದ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಯ (ಎನ್‌ಸಿಸಿ) ಎಂಜಿನಿಯರ್‌ಗಳಿಂದ ಮಾಹಿತಿ ಕಲೆ ಹಾಕಿದ್ದರು. ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಸಂಗ್ರಹಿಸಿದ್ದರು.
‘ಕಾಮಗಾರಿ ನಡೆಯುತ್ತಿದ್ದ ಸ್ಥಳದ ಮಣ್ಣು ಹಾಗೂ ಕಾಮಗಾರಿಗೆ ಬಳಸಿದ ಕಬ್ಬಿಣಗಳನ್ನು ಪರಿಶೀಲಿಸಲಾಗಿದೆ. ಅವಘಡಕ್ಕೆ ಎಂಜಿನಿಯರ್‌ಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ. ವೈಜ್ಞಾನಿಕ ಕಾರಣ ಸಮೇತ ಸರ್ಕಾರಕ್ಕೆ ವರದಿ ಸಲ್ಲಿಸಲು ತಯಾರಿ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
‘ಗುಣಮಟ್ಟದ ವಸ್ತುಗಳನ್ನೇ ಕಾಮಗಾರಿಗೆ ಬಳಸಲಾಗಿದೆ. ಆದರೆ, ಅತೀ ಎತ್ತರದ ಕಬ್ಬಿಣದ ಚೌಕಟ್ಟು ನಿರ್ಮಿಸಿದ್ದರಿಂದ ಭಾರ ಹೆಚ್ಚಾಗಿ ಉರುಳಿದೆ. ಎತ್ತರದ ಕಬ್ಬಿಣದ ಚೌಕಟ್ಟು ನಿಲ್ಲಿಸಿದ್ದರೂ ವಾಲದಂತೆ ತಡೆಯಲು ಯಾವುದೇ ಸುರಕ್ಷತಾ ಕ್ರಮ ತೆಗೆದುಕೊಂಡಿರಲಿಲ್ಲವೆಂಬ ಅಂಶಗಳು ವರದಿಯಲ್ಲಿವೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.