ADVERTISEMENT

ರೈತರ ಕುತೂಹಲ ತಣಿಸಿದ ‘ಮೇವು ಮೇಳ’: ನಾನಾ ಬಗೆಯ ಮೇವುಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 15:42 IST
Last Updated 25 ಅಕ್ಟೋಬರ್ 2024, 15:42 IST
<div class="paragraphs"><p>ಹೆಬ್ಬಾಳದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೇವು ಮೇಳ’ದಲ್ಲಿ ಆಸಕ್ತ ರೈತರು ವಿವಿಧ ಮೇವುತಳಿಗಳ ಮಾಹಿತಿ ಪಡೆದರು </p></div>

ಹೆಬ್ಬಾಳದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೇವು ಮೇಳ’ದಲ್ಲಿ ಆಸಕ್ತ ರೈತರು ವಿವಿಧ ಮೇವುತಳಿಗಳ ಮಾಹಿತಿ ಪಡೆದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಹೈನುಗಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೇವಿಗೆ ಸಂಬಂಧಿಸಿದಂತೆ ರೈತರು ಮಾಡಬಹುದಾದ ಅನೇಕ ಪ್ರಯೋಗಗಳು, ಮೇವು ಹೊಂದಿಸುವ, ಪೌಷ್ಟಿಕಾಂಶ ಒದಗಿಸುವ ಸುಲಭ ಮಾರ್ಗಗಳು ಅನಾವರಣಗೊಂಡವು. ರೈತರು ಕುತೂಹಲದಿಂದ ವೀಕ್ಷಿಸಿ ಮಾಹಿತಿ ಪಡೆದರು.

ADVERTISEMENT

ಬೀದರ್‌ನಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಕೆವಿಎಎಫ್‌ಎಸ್‌ಯು), ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು, ಭಾರತೀಯ ಡೇರಿ ಅಸೋಸಿಯೇಶನ್‌ ಶುಕ್ರವಾರ ಪಶುವೈದ್ಯಕೀಯ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ‘ಮೇವು ಮೇಳ’ ಇದಕ್ಕೆ ವೇದಿಕೆಯಾಯಿತು.

ಹೆಚ್ಚಿನ ಖನಿಜಾಂಶ ಇರುವ, ಬೇಸಿಗೆ–ಮಳೆಗಾಲ ಎರಡೂ ಋತುಗಳಲ್ಲಿ ಹಸಿರು ಮೇವು ನೀಡುವ ‘ಮೇವಿನ ಸಜ್ಜೆ’, ನೆಲ–ಹೊಲದ ಅಗತ್ಯವೇ ಇಲ್ಲದಂತೆ ಮನೆ ಮಹಡಿಯಲ್ಲಿಯೂ ಬೆಳೆಯಬಹುದಾದ ಜಲಕೃಷಿ ಮೇವಿನ ಬೆಳೆ, ಹಲವು ಬಾರಿ ಕಟಾವ್‌ ಮಾಡಬಹುದಾದ ಹೈಬ್ರಿಡ್‌ ನೇಪಿಯರ್ ಹುಲ್ಲು, ರೇಷ್ಮೆಗೂ ಮೇವಿಗೂ ಬಳಸಬಹುದಾದ ಹಿಪ್ಪು ನೇರಳೆ (ಮಲ್‌ಬೆರಿ), ನೇಪಿಯರ್‌ ಮತ್ತು ಜೋಳವನ್ನು ಕಸಿ ಮಾಡಿದ ಪುಲೆ ಜೈವಂತ್‌ ಹುಲ್ಲುಗಳು ಗಮನ ಸೆಳೆದವು. ಮೆಕ್ಕೆಜೋಳ, ತೊಕ್ಕೆ ಗೋಧಿ, ಸಜ್ಜೆ ಸಹಿತ ಮೇವಿನ ಸಿರಿಧಾನ್ಯಗಳು ವಿಶಿಷ್ಟವಾಗಿದ್ದವು.

ಮೇವು ಸಹಿತ ವಿವಿಧ ಕೃಷಿಗೆ ಬಳಸುವ ಅಡಿಕೆ ಹಾಳೆ ಗೊಬ್ಬರ, ಹಲಸಿನ ಹಣ್ಣಿನ ಗೊಬ್ಬರ, ಎರೆಹುಳು ಗೊಬ್ಬರ ಸಹಿತ ವಿವಿಧ ತರಹದ ಗೊಬ್ಬರಗಳನ್ನು ಪ್ರದರ್ಶಿಸಲಾಯಿತು. ಹಸಿರು ಮೇವಿನ ಗುಣ ಮತ್ತು ಅದರಲ್ಲಿರುವ ಪೌಷ್ಟಿಕಾಂಶಗಳು ಹಾಳಾಗದಂತೆ ಶೇಖರಿಸಿ ಮುಚ್ಚಿಟ್ಟು ಮಾಗಿಸಿದ ಮೇವನ್ನು ರಸಮೇವು (ಸೈಲೇಜ್‌) ಎಂದು ಕರೆಯಲಾಗುತ್ತಿದ್ದು, ಈ ಮೇವಿನ ಬಗ್ಗೆಯೇ ಹೈನುಗಾರರು ಹೆಚ್ಚು ಕುತೂಹಲಗೊಂಡರು.

ಪಾಚಿ ರೀತಿಯಲ್ಲಿ ಬೆಳೆಯುವ ಅಜೋಲ, ಏಕ ಕಟಾವ್‌ ದ್ವಿದಳ ಮೇವಿನ ಬೆಳೆಗಳಾದ ಗೋವಿನ ಜೋಳ, ಮೇವಿನ ಜೋಳ, ಮೇವಿನ ಅಲಸಂದಿ, ಹುರುಳಿ, ಸೋಯಾ ಅವರೆ, ಬಹುಕಟಾವು/ ಬಹು ವಾರ್ಷಿಕ ದ್ವಿದಳ ಮೇವಿನ ಬೆಳೆಗಳಾದ ಕುದುರೆ ಮಸಾಲೆ, ದಶರಥ ಹುಲ್ಲು, ಬೇಲಿ ಮೆಂತೆ, ನೇಪಿಯರ್‌ ಹುಲ್ಲು, ಉತ್ತಮವಾಗಿ ಇಳುವರಿ ನೀಡುವ ಗಿರಿಮೇವು, ಗಿನಿ ಹುಲ್ಲು, ರೋಡ್ಸ್‌ ಹುಲ್ಲು, ಬ್ರೆಕೇರಿಯ ಹುಲ್ಲು, ಕುದುರೆಮೆಂತೆ, ಸ್ಟೈಲೊ, ಸೂಪರ್‌ ನೇಪಿಯರ್, ಪ್ಯಾರಾ ಹುಲ್ಲು, ಬರ್ಸಿಮ, ಲೂಸರ್ನ್‌, ಚವಳಿ, ಮರ ಹುಲ್ಲುಗಳಾದ ಸುಬಾಬುಲ್‌, ಚೊಗಚಿಗಳು ಪ್ರದರ್ಶನಗೊಂಡವು. 

ಉತ್ತಮ ಮೇವುಗಳ ಬೀಜೋತ್ಪಾದನೆ, ಬಿತ್ತನೆ, ಹೊಲದ ಸಿದ್ಧತೆ, ಪೋಷಕಾಂಶ ನಿರ್ವಹಣೆ, ಕಳೆ ನಿರ್ವಹಣೆ, ನಾಟಿ, ಬೆರಕೆ ಗಿಡ ತೆಗೆಯುವುದು, ನೀರಾವರಿ, ಕೊಯ್ಲು, ಸಂಸ್ಕರಣೆ, ಸಂಗ್ರಹಣೆಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ವಿವಿಧ ಮಳಿಗೆಗಳಲ್ಲಿ ನೀಡಲಾಯಿತು.

ರಾಸುಗಳಿಗೆ ಸಮತೋಲಿತ ಆಹಾರದ ಮಾಹಿತಿ, ಕರುಗಳ ಆರಂಭಿಕ ಆಹಾರ, ಆನಂತರದ ಆಹಾರ, ಹೋರಿಗಳ ಆಹಾರ, ಗರ್ಭರಾಸುಗಳ ಆಹಾರಗಳ ಬಗ್ಗೆ ಮಾಹಿತಿ, ಶುದ್ಧ ಹಾಲು ಉತ್ಪಾದನೆಯ ಮಾಹಿತಿಗಳನ್ನು ವಿವಿಧ ಕೃಷಿ ಕಾಲೇಜುಗಳು ನೀಡಿದವು.

ಆಲಂಕಾರಿಕ ಮೀನು ಪಾಲನೆ, ಸುಧಾರಿತ ಹಂದಿ ಸಾಕಣೆಯ ಮಾಹಿತಿ, ಕೃಷಿ ಬಳಕೆಯ ವಸ್ತುಗಳು, ಹಾಲು ಕರೆಯುವ ಯಂತ್ರಗಳು, ನೀರಾವರಿಗೆ ಸಂಬಂಧಿಸಿದ ಯಂತ್ರಗಳು, ಕಟಾವು ಯಂತ್ರಗಳು ಕೂಡ ಇದ್ದವು.

‘ಮೇವಿನ ವೆಚ್ಚ ಕಡಿಮೆಯಾಗಲಿ’

ಹೈನುಗಾರಿಕೆಯ ಆದಾಯದಲ್ಲಿ ಶೇ 70ರಷ್ಟು ಮೇವಿಗೆ ಖರ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಿದರೆ ರೈತರ ಆದಾಯ ಹೆಚ್ಚಳವಾಗಲಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಮೇವು ಮೇಳ ಆಯೋಜಿಸಲಾಗಿದೆ ಎಂದು ಬೀದರ್‌ ಕೆವಿಎಎಫ್‌ಎಸ್‌ಯು ಕುಲಪತಿ ಕೆ.ಸಿ. ವೀರಣ್ಣ ತಿಳಿಸಿದರು. ಮೇವು ಮೇಳ ಉದ್ಘಾಟಿಸಿ ಅವರು ಮಾತನಾಡಿ ‘ಹಸಿರು ಮೇವು ಅಧಿಕ ಬಳಕೆಯಾಗಬೇಕು. ಕಡಿಮೆ ವೆಚ್ಚದಲ್ಲಿ ಹಸಿರು ಮೇವು ಬೆಳೆಯುವುದು ಹೇಗೆ? ಬೀಜ ಸಂಸ್ಕರಣೆ ಸಹಿತ ವಿವಿಧ ವೈಜ್ಞಾನಿಕ ಮತ್ತು ಪ್ರಾಯೋಗಿಕ ಮಾಹಿತಿ ಈ ಮೇಳದಲ್ಲಿ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ಕೆವಿಎಎಫ್‌ಎಸ್‌ಯು ಆಡಳಿತ ಮಂಡಳಿ ಸದಸ್ಯರಾದ ಎಚ್‌.ಎಂ. ಜಯಪ್ರಕಾಶ, ವೆಂಕಟಾಚಲ ವಿ.ಎಸ್‌., ಲತಾ ಡಿ.ಎಚ್‌., ಬಸವರಾಜ್ ಪಿ. ಭಟ್‌ಮುರ್ಗೆ, ಸಂಗಪ್ಪ ದೊಡ್ಡಬಸಪ್ಪ, ವಿಎಸ್‌ಜಿಒಕೆ ನಿರ್ದೇಶಕ ಮಂಜುನಾಥ್‌ ಎಸ್‌. ಪಾಳೆಗಾರ್‌, ಪಶು ವೈದ್ಯಕೀಯ ಕಾಲೇಜಿನ ಡೀನ್‌ ಎನ್‌.ಕೆ.ಎಸ್. ಗೌಡ, ಹಾಲು ಒಕ್ಕೂಟದ ನಿರ್ದೇಶಕ ಪದ್ಮಾ, ಸಂಶೋಧನಾ ನಿರ್ದೇಶಕ ಶಿವಪ್ರಕಾಶ್‌, ಪಶುವೈದ್ಯಕೀಯ ಪರಿಷತ್‌ ಅಧ್ಯಕ್ಷ ಎಚ್‌.ಸಿ. ಇಂದ್ರೇಶ್‌, ಮೇವು ಮೇಳದ ಸಂಘಟನಾ ಕಾರ್ಯದರ್ಶಿ ಮಂಜುನಾಥ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.