ಬೆಂಗಳೂರು: ಗಾಳಿಪಟ ಹಾರಿಸಲು ಬಳಸುವ ನೈಲಾನ್ ನೂಲಿನ ಜಾಲಕ್ಕೆ ಸಿಲುಕಿದ್ದ ಹದ್ದು ಅದು. ಅತ್ತ ನಭಕ್ಕೆ ಹಾರಲಾಗದೇ, ಇತ್ತ ಕೆಳಕ್ಕೂ ಇಳಿಯಲಾಗದೆ ಮರದ ನಡುವೆ ತ್ರಿಶಂಕು ಸ್ಥಿತಿಯಲ್ಲಿದ್ದ ಆ ಹಕ್ಕಿಯ ಸಂಕಟ ಕಂಡು ನೂರಾರು ಮಂದಿ ಮಮ್ಮುಲ ಮರುಗಿದರು. ಪಕ್ಷಿಪ್ರಿಯರ ಸತತ ಪ್ರಯತ್ನದಿಂದ ಕೊನೆಗೂ ಆ ಹಕ್ಕಿ ಅಪಾಯದಿಂದ ಪಾರಾಯಿತು.
ಎಂ.ಜಿ.ರಸ್ತೆಯ ಬಳಿ ಮಂಗಳವಾರ ಕಂಡು ಬಂದ ದೃಶ್ಯವಿದು.
ಕಚೇರಿ ಎದುರಿನ ತುರಬೇವಿನ ಮರದಲ್ಲಿ ಸಿಲುಕಿದ್ದ ಹದ್ದು ಹಾರಲಾಗದೇ ನರಳುವುದನ್ನು ಕಂಡು ಅಲ್ಲಿನ ವಿಪ್ರೊ ಸಂಸ್ಥೆಯ ಉದ್ಯೋಗಿ ಹೇಮಾ ಅವರು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಕಚೇರಿಗೆ ಕರೆ ಮಾಡಿದ್ದರು. ಅಷ್ಟರಲ್ಲೇ ಯಾರೋ ಹೊರಮಾವಿನ ಹಕ್ಕಿಗಳ ಮತ್ತು ಸರೀಸೃಪಗಳ ಪುನರ್ವಸತಿ ಕೇಂದ್ರಕ್ಕೆ (ಎಆರ್‌ಆರ್‌ಸಿ) ಕರೆ ಮಾಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಎಆರ್‌ಆರ್‌ಸಿಯ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿತ್ತು.
ಎಆರ್‌ಆರ್‌ಸಿಯ ವನ್ಯಜೀವಿ ಸಂರಕ್ಷಕ ವೀರಬಾಬು ಸುರಕ್ಷಾ ಸಾಧನಗಳನ್ನು ಧರಿಸಿ ತುರಬೇವಿನ ಮರವನ್ನೇರಿ ಈ ಹಕ್ಕಿಯನ್ನು ಉಳಿಸಲು ಹರಸಾಹಸ ಪಡುತ್ತಿದ್ದರೆ, ಕೆಳಗೆ ಸೇರಿದ್ದ ನೂರಾರು ಮಂದಿಯ ಮನದಲ್ಲೇನೋ ತಳಮಳ. ಅದಾಗಲೇ ಮೂರು ಗಂಟೆಗಳಿಗೂ ಹೆಚ್ಚು ಹೊತ್ತು ನೂಲಿನಲ್ಲಿ ಸಿಲುಕಿ ನರಳಿದ್ದ ಹಕ್ಕಿ ಬದುಕಿ ಉಳಿಯುತ್ತದೋ ಇಲ್ಲವೋ ಎಂಬ ಆತಂಕ.
ವೀರಬಾಬುವಿನ ಕೈಗೆ ಸಿಕ್ಕ ಹಕ್ಕಿ ಪಟಪಟನೆ ರೆಕ್ಕೆ ಬಡಿಯುತ್ತಿದ್ದಂತೆ ಈ ಕಾರ್ಯಾಚರಣೆಯನ್ನು ಕಣ್ತುಂಬಿಕೊಂಡ ಜನ ಖುಷಿಯಿಂದ ಚಪ್ಪಾಳೆ ತಟ್ಟಿದರು. ನೂಲಿನ ಎಳೆಯಲ್ಲಿ ಸಿಲುಕಿದ್ದ ಹಕ್ಕಿಯನ್ನು ಸತತ ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಸುರಕ್ಷಿತವಾಗಿ ಕೆಳಗಿಳಿಸುತ್ತಿದ್ದಂತೆಯೇ, ಈ ದೃಶ್ಯವನ್ನು ನೋಡುತ್ತಾ ನಿಂತಿದ್ದ ಮಂದಿಯ ಮೊಗದಲ್ಲಿ ಮಂದಹಾಸ ಮೂಡಿತ್ತು. ಅನೇಕ ಮಂದಿ ತಮ್ಮ ಮೊಬೈಲ್‌ನಲ್ಲಿ ರಕ್ಷಣಾ ಕಾರ್ಯಾಚರಣೆಯ ದೃಶ್ಯವನ್ನು ಸೆರೆ ಹಿಡಿದರು.
‘ಚೈನೀಸ್ ಮಾಂಜಾ ದಾರವನ್ನು ಗಾಳಿಪಟ ಹಾರಿಸಲು ಬಳಸುತ್ತಾರೆ. ಗಾಳಿಪಟ ಗೋತಾ ಹೊಡೆದಾಗ ಅದರ ಜೊತೆ ಈ ದಾರವು ಎಲ್ಲೆಲ್ಲೋ ಹೋಗಿ ಸೇರಿಕೊಳ್ಳುತ್ತದೆ. ಈ ದಾರ ನೂರಾರು ಹಕ್ಕಿಗಳ ಪ್ರಾಣಕ್ಕೆ ಸಂಚಕಾರ ತರುತ್ತಿದೆ. ಈ ದಾರದ ಮಾರಾಟವನ್ನು ನಿಷೇಧಿಸಲಾಗಿದೆ. ಆದರೂ ಇದನ್ನು ಯಾರು ಮಾರಾಟ ಮಾಡುತ್ತಾರೋ ಎಲ್ಲಿಂದ ತರುತ್ತಾರೋ ತಿಳಿಯದು’ ಎನ್ನುತ್ತಾರೆ ವೀರಬಾಬು.
‘ಕೆಲವು ವನ್ಯಜೀವಿ ರಕ್ಷಕರು ಅವೈಜ್ಞಾನಿಕ ವಿಧಾನದಿಂದ ಹಕ್ಕಿಗಳನ್ನು ಸಂರಕ್ಷಿಸುತ್ತಾರೆ. ಈ ದಾರವನ್ನು ಎಳೆದರ ಹಕ್ಕಿ ಗಾಯಗೊಳ್ಳುವ ಅಪಾಯವಿದೆ. ಹಾಗಾಗಿ ನಾವು ಸುರಕ್ಷತಾ ಸಾಧನಗಳನ್ನು ಧರಿಸಿ ಮರವನ್ನು ಹತ್ತಿಯೇ ಹಕ್ಕಿಯನ್ನು ಹಿಡಿಯುತ್ತೇವೆ’ ಎಂದರು.
ವೀರಬಾಬು ಅವರು 1997ರಿಂದ ಬೆಂಗಳೂರಿನ ಕಾಡುಗೋಡಿ ನಿವಾಸಿ. ಅವರು ಮಂಗಳವಾರ ಒಂದೇ ದಿನ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿ ಇನ್ನೊಂದು ಹದ್ದನ್ನು, ಎಚ್‌ಎಸ್‌ಆರ್ ಬಡಾವಣೆಯಲ್ಲಿ ಕಾಗೆಯನ್ನು ಹಾಗೂ ಗೂಬೆಯನ್ನು ರಕ್ಷಿಸಿದ್ದಾರೆ. ‘ತಿಂಗಳಿಗೆ ಏನಿಲ್ಲವೆಂದರೂ 30ರಿಂದ 40 ಹಕ್ಕಿಗಳನ್ನು ರಕ್ಷಿಸುತ್ತೇನೆ. ನನಗೀಗ ಇದೇ ಕಾಯಕವಾಗಿದೆ’ ಎಂದು ಹೇಳಿದರು.
‘ಅಪಾಯಕ್ಕೆ ಹಕ್ಕಿಗಳ ರಕ್ಷಿಸುವಂತೆ ಕೋರಿ ನಮಗೂ ಕರೆ ಬರುತ್ತದೆ. ನಾವೂ ವನ್ಯಜೀವಿ ಸಂರಕ್ಷಕರ ನೆರವು ಪಡೆಯುತ್ತೇವೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿ ಜಿ.ಕೃಷ್ಣಸ್ವಾಮಿ ತಿಳಿಸಿದರು.
ಚೇತರಿಸಿಕೊಂಡ ಹದ್ದು
‘ರಕ್ಷಣೆ ಮಾಡಿರುವ ಹದ್ದು ಚೇತರಿಸಿಕೊಂಡಿದೆ. ಸಣ್ಣ ಪುಟ್ಟ ಗಾಯ ಬಿಟ್ಟರೆ ಬೇರೇನೂ ಅಪಾಯವಾಗಿಲ್ಲ. ಹದ್ದಿಗೆ ಇಲಿಯನ್ನು ಆಹಾರವಾಗಿ ನೀಡಿದ್ದೇವೆ. ಗಾಬರಿಗೊಂಡ ಈ ಹದ್ದಿಗೆ ಎಆರ್‌ಆರ್‌ಸಿಯಲ್ಲಿ ಮೂರು ದಿನ ಚಿಕಿತ್ಸೆ ನೀಡಿ ಬಳಿಕ ಹೊರಗೆ ಬಿಡುತ್ತೇವೆ’ ಎಂದು ವೀರಬಾಬು ತಿಳಿಸಿದರು.
ಹಕ್ಕಿಗಳು ಹಾಗೂ ಸರೀಸೃಪಗಳು ಅಪಾಯದಲ್ಲಿ ಸಿಲುಕಿದ್ದರೆ ಎಆರ್‌ಆರ್‌ಸಿಗೆ (9620286800) ಕರೆ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.