ADVERTISEMENT

ಎಂ.ಜಿ. ರಸ್ತೆಯಲ್ಲಿ ವಾಹನ ನಿಲುಗಡೆಗೆ ತಾತ್ಕಾಲಿಕ ಅವಕಾಶ

ನಿರ್ಬಂಧಿಸಲಾಗಿದ್ದ ಪಾರ್ಕಿಂಗ್ , ತಾತ್ಕಾಲಿಕ ಕ್ರಮವೆಂದ ಡಿಸಿಪಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:09 IST
Last Updated 3 ಆಗಸ್ಟ್ 2019, 19:09 IST
   

ಬೆಂಗಳೂರು: ಕಾಮರಾಜ ರಸ್ತೆಯಲ್ಲಿ ನಡೆಯುತ್ತಿರುವ ‘ನಮ್ಮ ಮೆಟ್ರೊ’ ಕಾಮಗಾರಿ ನೆಪ ಇಟ್ಟುಕೊಂಡು ಎಂ.ಜಿ. ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ವಿಧಿಸಿದ್ದ ನಿರ್ಬಂಧವನ್ನು ಸಂಚಾರ ಪೊಲೀಸರು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.

ಕಾಮಗಾರಿ ಆರಂಭವಾಗಿದ್ದ ಜೂನ್ 15ರಿಂದಲೇ ಎಂ.ಜಿ. ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ನಿರ್ಬಂಧಿಸಲಾಗಿತ್ತು. ಪೊಲೀಸರ ನಿರ್ಧಾರದಿಂದ, ಎಂ.ಜಿ.ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳ ವಾಣಿಜ್ಯ ವಹಿವಾಟಿನ ಮೇಲೆ ಹೊಡೆತ ಬಿದ್ದಿತ್ತು.

45 ದಿನಗಳ ನಂತರ ಪುನಃ ವಾಹನಗಳ ನಿಲುಗಡೆಗೆ ಪೊಲೀಸರು ಅವಕಾಶ ನೀಡಿದ್ದಾರೆ. ಶುಕ್ರವಾರದಿಂದಲೇ ಎಂ.ಜಿ.ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.

ADVERTISEMENT

‘ಈ ತೀರ್ಮಾನ ತಾತ್ಕಾಲಿಕವಷ್ಟೇ’ ಎಂದಿರುವ ಸಂಚಾರ ವಿಭಾಗದ ಡಿಸಿಪಿ ಜಗದೀಶ್, ‘ಕಾಮಗಾರಿಯಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಬಹುದು ಹಾಗೂ ಸಂಚಾರ ದಟ್ಟಣೆ ಉಂಟಾಗಬಹುದೆಂಬ ಕಾರಣಕ್ಕೆ ನಿಲುಗಡೆ ನಿರ್ಬಂಧಿಸಲಾಗಿತ್ತು’ ಎಂದರು.

‘ಇದೀಗ ನಿರ್ಬಂಧವನ್ನು ಹಿಂಪಡೆದು ಮುಂದಿನ ಶುಕ್ರವಾರದವರೆಗೂ (ಆಗಸ್ಟ್ 9)ಎಂ.ಜಿ.ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತದೆಯೋ ಅಥವಾ ಸಂಚಾರ ದಟ್ಟಣೆ ಉಂಟಾಗುತ್ತದೆಯೋ ಎಂಬುದನ್ನು ಪರೀಕ್ಷಿಸಲಿದ್ದೇವೆ. ಅದಾದ ನಂತರವೇ ನಿಲುಗಡೆಗೆ ನೀಡಿರುವ ಅವಕಾಶವನ್ನು ಮುಂದುವರಿಸಬೇಕೋ ಅಥವಾ ಬೇಡವೋ ಎಂಬುದನ್ನು ತೀರ್ಮಾನಿಸಲಾಗುವುದು’ ಎಂದು ಜಗದೀಶ್ ಮಾಹಿತಿ ನೀಡಿದರು.

ತಮ್ಮಿಷ್ಟದಂತೆ ಕ್ರಮ: ಆಕ್ರೋಶ

‘ನಗರದ ಸಂಚಾರ ವ್ಯವಸ್ಥೆಯನ್ನು ತಮ್ಮಿಷ್ಟದಂತೆ ಬದಲಾಯಿಸುತ್ತಿರುವ ಪೊಲೀಸರು, ಯಾವುದೇ ಮಾನದಂಡಗಳನ್ನೂ ಪಾಲಿಸುತ್ತಿಲ್ಲ. ಇದು ಸಾಮಾನ್ಯ ಜನರು ಹಾಗೂ ವ್ಯಾಪಾರಿಗಳ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಎಂ.ಜಿ.ರಸ್ತೆಯ ವ್ಯಾಪಾರಿ ಹೇಮಚಂದ್ರ ಹೇಳಿದರು.

‘ಪೊಲೀಸರಿಗೆ ಒಂದು ನಿರ್ದಿಷ್ಟ ಯೋಜನೆ ಇಲ್ಲ. ಬೇಕಾಬಿಟ್ಟಿಯಾಗಿ ವಾಹನಗಳ ನಿಲುಗಡೆ ನಿರ್ಬಂಧಿಸುವುದು ಹಾಗೂ ದಿಢೀರ್ ನಿಲುಗಡೆಗೆ ಅವಕಾಶ ನೀಡುವುದನ್ನು ಮಾಡುತ್ತಿದ್ದಾರೆ. ಇಂಥ ವರ್ತನೆಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳೇ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ಶಾಪಿಂಗ್‌ಗೆ ಬಂದಿದ್ದ ಜಯತೀರ್ಥ, ‘ಈ ಕಡೆ ಬಂದರೆ ಎಂ.ಜಿ.ರಸ್ತೆಯಲ್ಲಿ ಬೈಕ್ ನಿಲ್ಲಿಸುತ್ತೇನೆ. ಇದೀಗ ಹಬ್ಬಗಳು ಬರುತ್ತಿವೆ ಎಂಬ ಕಾರಣಕ್ಕೆ ನಿಲುಗಡೆಗೆ ಅವಕಾಶ ನೀಡಿದಂತೆ ಕಾಣುತ್ತಿದೆ. ಹಬ್ಬ ಮುಗಿದ ನಂತರ ನಿಲುಗಡೆ ನಿರ್ಬಂಧಿಸಿದರೂ ಆಶ್ಚರ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.