ಬೆಂಗಳೂರು: ಮತ್ತಿಕೆರೆ ಮತ್ತು ಮಲ್ಲೇಶ್ವರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೊ ಚಿಪ್ ಅಳವಡಿಸಲಾಯಿತು.
ಮೈಕ್ರೊ ಚಿಪ್ ತಂತ್ರಜ್ಞಾನದಿಂದ ನಾಯಿಯ ವಾಸಸ್ಥಳ, ಲಸಿಕೆ ನೀಡಿದ ದಿನಾಂಕ, ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿದ ದಿನಾಂಕ ಹಾಗೂ ಇನ್ನಿತರ ಅಂಶಗಳನ್ನು ಶಾಶ್ವತವಾಗಿ ಸಂಗ್ರಹಿಸಬಹುದು ಎಂದು ಆರೋಗ್ಯ ಹಾಗೂ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.
ಮೈಕ್ರೊ ಚಿಪ್ ತಂತ್ರಜ್ಞಾನವನ್ನು ಈಗಾಗಲೇ ಹಲವಾರು ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳಿಗೆ ಅಳವಡಿಸಿಕೊಂಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಜ್ ಆರ್ಬಿಟ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಬೀದಿ ನಾಯಿಗಳಿಗೆ ಶನಿವಾರದಿಂದ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
‘ಮೈಕ್ರೊ ಚಿಪ್ ಒಂದು ಅಕ್ಕಿಕಾಳು ಗಾತ್ರದ ಸಾಧನವಾಗಿದ್ದು, ಪ್ರಾಣಿಗಳಲ್ಲಿ ಶಾಶ್ವತ ಗುರುತಿನ ವಿಧಾನವಾಗಿರುತ್ತದೆ. ಇದನ್ನು ಪ್ರಾಣಿಗಳ ಚರ್ಮದ ಕೆಳಗೆ ಇಂಜೆಕ್ಷನ್ ಮೂಲಕ ಇರಿಸಲಾಗುವುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ. ಪ್ರಾಣಿಗಳ ಜೀವನ ಪರ್ಯಂತ ಶಾಶ್ವತ ಗುರುತಾಗಿ ಬಳಸಬಹುದಾಗಿರುತ್ತದೆ. ಇದು ಪ್ರಪಂಚದಾದ್ಯಂತ ಬಳಸಲಾಗುವ ಯೂನಿಕ್ ಸಂಖ್ಯೆಯಾಗಿರುತ್ತದೆ‘ ಎಂದು ತಿಳಿಸಿದರು.
ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿರುವ ಮೈಕ್ರೊ ಚಿಪ್ ಅಳವಡಿಸುವ ಕಾರ್ಯ ಯಶಸ್ವಿಯಾದರೆ, ಅದನ್ನು ಪಾಲಿಕೆಯ ಎಲ್ಲಾ ವಲಯಗಳಲ್ಲಿರುವ ಬೀದಿ ನಾಯಿಗಳಿಗೆ ಅಳವಡಿಸಲಾಗುತ್ತದೆ. ಪಾಲಿಕೆ ವತಿಯಿಂದ ಬೀದಿ ನಾಯಿಗಳಿಗೆ ಸಂಯೋಜಿತ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಪ್ರಸ್ತುತ ಲಸಿಕೆ ಹಾಕಿದ ಬೀದಿನಾಯಿಗಳಿಗೆ ಬಣ್ಣವನ್ನು ಬಳಸಿ ಗುರುತಿಸಲಾಗುತ್ತಿದ್ದು, ಒಂದು ವಾರ ಮಾತ್ರ ಬಣ್ಣದ ಗುರುತು ಪತ್ತೆಹಚ್ಚಬಹುದಾಗಿರುತ್ತದೆ. ಆದ್ದರಿಂದ ಬೀದಿನಾಯಿಗಳಿಗೆ ಪದೇ ಪದೇ ಲಸಿಕೆ ಹಾಕುವ ಸಾಧ್ಯತೆಯಿರುತ್ತದೆ. ಮೈಕ್ರೊ ಚಿಪ್ ತಂತ್ರಜ್ಞಾನದಿಂದ ಈ ನ್ಯೂನತೆಯನ್ನು ಸರಿಪಡಿಸಬಹುದಾಗಿರುತ್ತದೆ. ನಾಯಿಗಳಿಗೆ ಲಸಿಕೆ ಹಾಕಿರುವ ಮಾಹಿತಿಯನ್ನು ನಿಖರವಾಗಿ ತಿಳಿಯಬಹುದಾಗಿರುತ್ತದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.