ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್) ನಂದಿನಿ ಹಾಲು ಮತ್ತು ಮೊಸರಿನ ಪರಿಷ್ಕೃತ ದರಗಳು ಆಗಸ್ಟ್ 1ರಿಂದ ಜಾರಿಯಾಗಲಿವೆ.
ನಂದಿನಿಯ ಎಲ್ಲ ಮಾದರಿಗಳ ಹಾಲು ಮತ್ತು ಮೊಸರು ಮಾರಾಟ ದರವನ್ನು ಪ್ರತಿ ಲೀಟರ್ ಅಥವಾ ಕೆ.ಜಿಗೆ ₹3ರಂತೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ.
ನಂದಿನ ಹಾಲಿನ ಮಾರಾಟ ದರ ಹೆಚ್ಚಳದ ಮೊತ್ತವನ್ನು ರೈತರಿಗೆ ವರ್ಗಾಯಿಸಲಾಗುವುದು. ₹3 ಹೆಚ್ಚಿಸಿದ ನಂತರವೂ ದೇಶದ ಇತರೆ ಪ್ರಮುಖ ರಾಜ್ಯಗಳಲ್ಲಿನ ಹಾಲಿನ ಬ್ರ್ಯಾಂಡ್‌ಗಳ ಮಾರಾಟ ದರಕ್ಕೆ ಹೋಲಿಸಿದಾಗ ನಂದಿನಿ ಟೋನ್ಡ್ ಹಾಲಿನ ಮಾರಾಟ ದರವೇ ಕಡಿಮೆ ಇದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ತಿಳಿಸಿದ್ದಾರೆ.
2022ರಲ್ಲಿ ಚರ್ಮಗಂಟು ರೋಗ, ಪಶು ನಿರ್ವಹಣಾ ವೆಚ್ಚ ಇತ್ಯಾದಿ ಕಾರಣಗಳಿಂದ ರಾಜ್ಯದಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ರೈತರು ಹೈನುಗಾರಿಕೆಯಿಂದ ವಿಮುಖರಾಗಿದ್ದರು. ಇದರಿಂದಾಗಿ, ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಹಾಲಿನ ಶೇಖರಣೆ ಕಡಿಮೆಯಾಗಿತ್ತು. ಪ್ರಸ್ತುತ ಪ್ರತಿ ದಿನ ಅಂದಾಜು 10 ಲಕ್ಷ ಲೀಟರ್ ಹಾಲು ಶೇಖರಣೆ ಕಡಿಮೆಯಾಗಿದೆ. ಹೀಗಾಗಿ, ಹೈನುಗಾರರನ್ನು ಉತ್ತೇಜಿಸಲು ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ವಿವರಿಸಿದ್ದಾರೆ.
ಕೆಎಂಎಫ್ ಅಧ್ಯಕ್ಷ ಎಲ್.ಬಿ.ಪಿ. ಭೀಮ ನಾಯ್ಕ ಅವರ ನೇತೃತ್ವದಲ್ಲಿ ಮಹಾಮಂಡಳದ ನಿರ್ದೇಶಕರು ಹಾಗೂ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಜುಲೈ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪ್ರತಿ ಲೀಟರ್‌ಗೆ ₹5 ಹೆಚ್ಚಿಸುವಂತೆ ಪ್ರಸ್ತಾವ ಸಲ್ಲಿಸಿದ್ದರು. ಮುಖ್ಯಮಂತ್ರಿ ಅವರು ₹3 ಹೆಚ್ಚಿಸಲು ಅನುಮತಿ ನೀಡಿದ್ದರು.
510 ಮಿ.ಲೀ ಪೊಟ್ಟಣ:
ಪ್ರತಿ ಲೀಟರ್‌ಗೆ ₹3ರಂತೆ ಮಾರಾಟ ದರ ಹೆಚ್ಚಿಸಿದಲ್ಲಿ 500 ಮಿ.ಲೀ. ಒಂದು ಪೊಟ್ಟಣಕ್ಕೆ ₹1.50ರಂತೆ ಹೆಚ್ಚಿಸಬೇಕಾಗುತ್ತದೆ. ಇದರಿಂದಾಗಿ ಚಿಲ್ಲರೆ ಸಮಸ್ಯೆಯಾಗುತ್ತದೆ. ಹೀಗಾಗಿ, 500 ಮಿ.ಲೀ ಪ್ರತಿ ಪೊಟ್ಟಣಕ್ಕೆ 10.ಮಿ.ಲೀ. ಹೆಚ್ಚಿಗೆ ನೀಡಲಾಗುತ್ತದೆ. ಹೆಚ್ಚುವರಿ ನೀಡುತ್ತಿರುವ ಹಾಲಿನ ಪ್ರಮಾಣವನ್ನು ಇಂಕ್‌ಜೆಟ್ ಪ್ರಿಂಟರ್ ಮೂಲಕ ಎಲ್ಲ ಪೊಟ್ಟಣಗಳ ಮೇಲೆ ಹೆಚ್ಚುವರಿ 10 ಮಿ.ಲೀ. ಎಂದು ಮುದ್ರಿಸಲಾಗುತ್ತಿದ್ದು, ದರವನ್ನು ₹2ರಷ್ಟು ಹೆಚ್ಚಿಸಲಾಗಿದೆ.
ಇದು ಧಾರವಾಡ, ವಿಜಯಪುರ, ಕಲಬುರಗಿ ಮತ್ತು ಹಾವೇರಿ ಹಾಲು ಒಕ್ಕೂಟಗಳಲ್ಲಿ ಉತ್ಪಾದನೆ ಮಾಡುತ್ತಿರುವ ಎಚ್‌ಟಿಎಂ 500 ಮಿ.ಲೀ. ಪೊಟ್ಟಣಗಳಿಗೆ ಮಾತ್ರ ಅನ್ವಯಿಸುವುದಿಲ್ಲ ಎಂದು ಕೆಎಂಎಫ್ ಪ್ರಕಟಣೆ ತಿಳಿಸಿದೆ.
ಪರಿಷ್ಕರಿಸಿದ ದರಗಳ ವಿವರಗಳು ಹಾಲು ಮತ್ತು ಮೊಸರಿನ ಮಾದರಿಗಳು;ಪ್ರಸ್ತುತ ದರ(₹/ಲೀ/ಕೆ.ಜಿ.ಗೆ);ಪರಿಷ್ಕೃತ ದರಗಳು ಟೋನ್ಡ್ ಹಾಲು(ನೀಲಿ ಪೊಟ್ಟಣ);39;42 ಹೋಮೋಜಿನೈಸ್ಟ್ ಟೋನ್ಡ್ ಹಾಲು;40;43 ಹಸುವಿನ ಹಾಲು;(ಹಸಿರು ಪೊಟ್ಟಣ);43;46 ಶುಭಂ(ಕೇಸರಿ ಪೊಟ್ಟಣ)/ವಿಶೇಷ ಹಾಲು;45;48 ಮೊಸರು(ಪ್ರತಿ ಕೆಜಿಗೆ);47;50 ಮಜ್ಜಿಗೆ (ಪ್ರತಿ 200 ಮಿಲಿಗೆ);8;9
ನಂದಿನಿ ಹಾಲು;ಕೇರಳ;ದೆಹಲಿ;ಗುಜರಾತ್;ಮಹಾರಾಷ್ಟ್ರ;ಆಂಧ್ರಪ್ರದೇಶ(ಲೀಟರ್‌ಗೆ) 42;50;54;54;54;56
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.