ADVERTISEMENT

ಮತದಾರರ ನೋಂದಣಿಗೆ ವಿಶೇಷ ಅಭಿಯಾನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 20:17 IST
Last Updated 23 ನವೆಂಬರ್ 2018, 20:17 IST

ಬೆಂಗಳೂರು: ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರ ಹೆಸರು ನೋಂದಾಯಿಸುವ ‘ವಿಶೇಷ ನೋಂದಣಿ ಅಭಿಯಾನ’ ನ. 25ರವರೆಗೆ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆಯಲಿದೆ.

ಎಲ್ಲ ಕಡೆಗಳಲ್ಲಿ ಬೂತ್‌ಮಟ್ಟದ ಅಧಿಕಾರಿಗಳು ಈ ದಿನಗಳಲ್ಲಿ ಆಯಾ ಮತಗಟ್ಟೆಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಲಭ್ಯರಿರುತ್ತಾರೆ. ತಮ್ಮ ವಾಸಸ್ಥಳ ದೃಢೀಕರಣ ಪತ್ರ ಹಾಗೂ ಭಾವಚಿತ್ರದೊಂದಿಗೆ ಮತಗಟ್ಟೆಗೆ ಭೇಟಿ ನೀಡಬೇಕು. ಅಲ್ಲಿ ನಮೂನೆ – 6ನ್ನು ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಕೊಟ್ಟು ಮತದಾರರಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇಲ್ಲಿ ನೋಂದಣಿಯಾಗಿರುವ ಮತದಾರರು ತಾವು ಈ ಹಿಂದೆ ನೋಂದಣಿಯಾಗಿರುವ ಸ್ಥಳದಲ್ಲಿ ತಮ್ಮ ಹೆಸರನ್ನು ರದ್ದುಗೊಳಿಸಿದ ಪತ್ರ
ತರಲೇಬೇಕೆಂದಿಲ್ಲ. ಇಲ್ಲಿ ತಮ್ಮ ಸಂಪೂರ್ಣ ಮಾಹಿತಿ ನೀಡಿದರೆ ಇನ್ನೊಂದು ಕಡೆಯಲ್ಲಿ ಆಗಿರುವ ನೋಂದಣಿಯನ್ನು ಅಧಿಕಾರಿಗಳು ರದ್ದುಗೊಳಿಸುವ ವ್ಯವಸ್ಥೆ ಇದೆ ಎಂದು ಅವರು ಹೇಳಿದರು.

ADVERTISEMENT

ಪ್ರಕ್ರಿಯೆ ಹೇಗೆ?: ಮತದಾರರ ಪಟ್ಟಿಗೆ ಹೆಸರು ಸೇರಿಸಲು ನೋಂದಣಿ ಮಾಡಿದ ಬಳಿಕ ಆ ವಿವರಗಳ ಆಧಾರದ ಮೇಲೆ ಮತಗಟ್ಟೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಾರೆ. ಇದು ಡಿ. 20ರ ಒಳಗೆ ಮುಕ್ತಾಯವಾಗಲಿದೆ. ಜ. 4ರಂದು ಮತದಾರರ ಹೊಸ ಪಟ್ಟಿ ಪ್ರಕಟಿಸಲಾಗುತ್ತದೆ. ಆ ಬಳಿಕವೂ ಹೆಸರು ನೋಂದಾಯಿಸಲು ಅವಕಾಶ ಇದೆ. ಆದರೆ, ಅಲ್ಲಿವರೆಗೆ ಕಾಯದೇ ಈ ಮೂರು ದಿನಗಳೊಳಗೆ ಹೆಸರು ನೋಂದಾಯಿಸಬೇಕು ಎಂದು ಅವರು ಕೋರಿದರು.

ಚುನಾವಣಾ ಆ್ಯಪ್‌ ಸೌಲಭ್ಯ: ಜಿಲ್ಲಾ ವ್ಯಾಪ್ತಿಯ 8,500 ಮತಗಟ್ಟೆಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಮತದಾರರ ಅನುಕೂಲಕ್ಕಾಗಿ ಚುನಾವಣಾ ಹೆಸರಿನ ಆ್ಯಪ್‌ (CHUNAVANA) ಅಭಿವೃದ್ಧಿಪಡಿಸಲಾಗಿದೆ. ಮೊಬೈಲ್‌ಗಳಲ್ಲಿ ಈ ಆ್ಯಪ್‌ಅನ್ನು ಅಳವಡಿಸಿಕೊಂಡರೆ ತಮ್ಮ ಸಮೀಪದ ಮತಗಟ್ಟೆಯ ಮಾಹಿತಿ ಪಡೆಯಬಹುದು. ಹೆಸರು ನೋಂದಣಿ ಸಹಿತ ಚುನಾವಣೆಯ ಮಾಹಿತಿ, ಸಮೀಪದ ಪೊಲೀಸ್‌ ಠಾಣೆ ವಿವರ ಇದರಲ್ಲಿ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.