ಬೆಂಗಳೂರು: ವಿವಿಧ ಕೈಗಾರಿಕೆಗಳ ಕಾರ್ಮಿಕರಿಗೆ ವ್ಯತ್ಯಸ್ಥ ತುಟ್ಟಿ ಭತ್ಯೆ ಏರಿಕೆ ಮೊತ್ತ ಪಾವತಿ ಕುರಿತಂತೆ ಕಾರ್ಮಿಕ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಕಾರ್ಮಿಕ ಸಂಘಟನೆಗಳು ಮತ್ತು ಉದ್ದಿಮೆಗಳ ಮಾಲೀಕರ ಪ್ರತಿನಿಧಿಗಳ ನಡುವೆ ಮಂಗಳವಾರ ನಡೆದ ಸಭೆ ಯಾವುದೇ ತೀರ್ಮಾನ ಕೈಗೊಳ್ಳಲು ವಿಫಲವಾಗಿದೆ.
‘ಕನಿಷ್ಠ ವೇತನ ಮತ್ತು ವ್ಯತ್ಯಸ್ಥ ತುಟ್ಟಿ ಭತ್ಯೆ ಪಾವತಿ ಮುಂದೂಡುವಂತೆ ಉದ್ದಿಮೆಗಳ ಮಾಲೀಕರು ಮುಂದಿಟ್ಟ ಬೇಡಿಕೆಯನ್ನು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಒಪ್ಪಲಿಲ್ಲ. ಹೀಗಾಗಿ, ಎರಡೂ ಕಡೆಯ ಅಭಿಪ್ರಾಯವನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಕಾರ್ಮಿಕ ಇಲಾಖೆ ಆಯುಕ್ತ ಕೆ.ಜಿ. ಶಾಂತಾರಾಮ್ ತಿಳಿಸಿದರು.
ಕೊರೊನಾ ಕಾರಣದಿಂದ ಲಾಕ್‌ಡೌನ್ ಘೋಷಿಸಿದ್ದರಿಂದ ಉದ್ದಿಮೆಗಳು ಸ್ಥಗಿತಗೊಂಡಿದ್ದು, ಭಾರಿ ಆರ್ಥಿಕ ಹೊರೆ ಉಂಟಾಗಿದೆ. ಕನಿಷ್ಠ ವೇತನ ಪಾವತಿಸುವುದೇ ಕಷ್ಟವಾಗಿದೆ. ಹೀಗಾಗಿ, ಏಪ್ರಿಲ್ ನಂತರದ ನಾಲ್ಕು ತಿಂಗಳ ವ್ಯತ್ಯಸ್ಥ ತುಟ್ಟಿ ಭತ್ಯೆ ಪಾವತಿಯನ್ನು ಮುಂದೂಡಬೇಕು ಎಂದು ಮಾಲೀಕರ ಸಂಘಟನೆಗಳ ಪ್ರತಿನಿಧಿಗಳು ಬೇಡಿಕೆ ಮುಂದಿಟ್ಟರು.
‘ಹಲವು ಉದ್ದಿಮೆಗಳು ಕಾರ್ಮಿಕರಿಗೆ ಕನಿಷ್ಠ ವೇತನವನ್ನೇ ಪಾವತಿಸಿಲ್ಲ. ಅಲ್ಲದೆ, ವ್ಯತ್ಯಸ್ಥ ತುಟ್ಟಿ ಭತ್ಯೆ ನೀಡಿಲ್ಲ. ಮಾಲೀಕರ ಈ ಬೇಡಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಿದ್ಧವಿಲ್ಲ’ ಎಂದು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಪಟ್ಟುಹಿಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ (ಕಾಸಿಯಾ) ಅಧ್ಯಕ್ಷ ಆರ್. ರಾಜು, ‘ಕೈಗಾರಿಕೆಗಳು 2016ರಿಂದಲೂ ಸಂಕಷ್ಟ ಅನುಭವಿಸುತ್ತಿವೆ. ಕೈಗಾರಿಕೆಗಳು ಉಳಿಯಬೇಕಿದ್ದರೆ, ಪರಿಸ್ಥಿತಿ ಅರ್ಥ ಮಾಡಿಕೊಂಡು ಕಾರ್ಮಿಕರು ಸಹಕರಿಸಬೇಕು’ ಎಂದರು.
‘ಕನಿಷ್ಠ ವೇತನ ಪಾವತಿ ಮಾಡಲೇಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡಾ ಸ್ಪಷ್ಟಪಡಿಸಿದೆ. ಹೀಗಾಗಿ, ಈ ವಿಷಯದಲ್ಲಿ ಯಾವುದೇ ರಾಜಿಗೆ ಸಿದ್ಧವಿಲ್ಲ’ ಎಂದು ಟ್ರೇಡ್ ಯೂನಿಯ್‌ಗಳ ಜಂಟಿ ಸಮಿತಿ ಅಧ್ಯಕ್ಷ ಮೀನಾಕ್ಷಿ ಸುಂದರಂ ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ಎಂಎಸ್‌ಎಂಇಗೆ ₹ 3 ಲಕ್ಷ ಕೋಟಿ ಕೊಡುತ್ತೇವೆ ಎಂದಿದ್ದಾರೆ. ಆದರೆ, ಅದು ಸಹಾಯಧನ ಅಲ್ಲ. ಅನುದಾನವೂ ಅಲ್ಲ. ಸಾಲ ಪಡೆಯಲು ಅಷ್ಟೆ. ಕನಿಷ್ಠ ವೇತನ ಮತ್ತು ವ್ಯತ್ಯಸ್ಥ ತುಟ್ಟಿ ಭತ್ಯೆ ವಿಷಯದಲ್ಲಿ ಕಾರ್ಮಿಕರು ನಮ್ಮ ಜೊತೆ ಕೈಜೋಡಿಸಬೇಕು. ಕನಿಷ್ಠ ಒಂದು ವರ್ಷ ಕಾರ್ಮಿಕ ಕಾಯ್ದೆಗಳನ್ನೆಲ್ಲ ಮುಂದೂಡಬೇಕು. ಇಲ್ಲದಿದ್ದರೆ, ಈಗಾಗಲೇ ಶೇ 10ರಷ್ಟು ಕೈಗಾರಿಕೆಗಳು ಮುಚ್ಚಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಶೇ 25ಕ್ಕೆ ಏರಿಕೆ ಆಗಲಿದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.