ADVERTISEMENT

ಮದರಸಾ ಪರಿಶೀಲನೆ; ಅಧಿಕಾರಿಗಳಿಗೆ ಸಚಿವ ಬಿ.ಸಿ.ನಾಗೇಶ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 20:11 IST
Last Updated 24 ಆಗಸ್ಟ್ 2022, 20:11 IST
ಸಚಿವ ಬಿ.ಸಿ.ನಾಗೇಶ್‌
ಸಚಿವ ಬಿ.ಸಿ.ನಾಗೇಶ್‌   

ಬೆಂಗಳೂರು: ಸರ್ಕಾರದ ಅಧಿಕಾರಿಗಳು ಮದರಸಾಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿಗಳ ಪರಿಶೀಲನೆ ನಡೆಸಿ, ವರದಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಸೂಚಿಸಿದ್ದಾರೆ.

ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಬುಧವಾರ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಸಭೆ ಬಳಿಕ ಅವರು ಮಾತನಾಡಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಮದರಸಾಗಳ ಪರಿಶೀಲನೆಗೆ ತೆರಳಿದ್ದಾಗ ಕೆಲ ಆಡಳಿತ ಮಂಡಳಿಗಳು ಸಹಕರಿಸಿಲ್ಲ ಎಂಬ ದೂರುಗಳು ಇಲಾಖೆಗೆ ಬಂದಿವೆ. ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆದ ಬಳಿಕ ವಿಜ್ಞಾನ, ಗಣಿತ ಅಧ್ಯಯನ ಮಾಡಲು ಹತ್ತಿರದ ಶಾಲೆಗಳಿಗೆ ಹಾಜರಾಗಬೇಕು ಎಂಬ ನಿಯಮವಿದೆ. ಮದರಸಾಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಸಿಗಬೇಕಾಗ ಶಿಕ್ಷಣ ಸಿಗುತ್ತಿದೆಯೇ? ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆಯೇ? ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣದ ಸ್ವರೂಪ ಹೇಗಿದೆ ಎನ್ನುವ ಕುರಿತು ಮಾಹಿತಿಯ ಅಗತ್ಯವಿದೆ. ಅಧಿಕಾರಿಗಳ ವರದಿಯ ನಂತರ ಶಿಕ್ಷಣ ತಜ್ಞರು, ಮದರಸಾ ಮುಖ್ಯಸ್ಥರ ಜತೆ ಸಭೆ ನಡೆಸಲಾಗುವುದು ಎಂದರು.

ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಆರ್. ರಾಮಚಂದ್ರನ್ ಉಪಸ್ಥಿತರಿದ್ದರು.

ADVERTISEMENT

‘ಮದರಸಾ ಪಠ್ಯದ ಸ್ವರೂಪವೂ ಬದಲು’

ಮದರಸಾಗಳಲ್ಲಿ ಬೋಧಿಸುವ ಪಠ್ಯಗಳ ಸ್ವರೂಪದಲ್ಲೂ ಬದಲಾವಣೆ ತರುವ ಕುರಿತು ಚರ್ಚೆ ನಡೆಸಲಾಗುವುದು ಎಂದುಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಮದರಸಾ ಶಿಕ್ಷಣದತ್ತ ಸರ್ಕಾರ ಗಮನ ನೀಡಬೇಕು.ಎಲ್ಲರಂತೆ‌ ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು. ಸ್ಪರ್ಧಾತ್ಮಕ ಪ್ರಪಂಚಕ್ಕೆ ತೆರೆದುಕೊಳ್ಳಬೇಕು ಎಂದುಮುಸ್ಲಿಂ ಸಮುದಾಯದವರೇ ಕೇಳಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಸರ್ಕಾರ ಒಂದಷ್ಟು ಕ್ರಮ ಕೈಗೊಳ್ಳುವ ಚಿಂತನೆ ನಡೆಸಿದೆ ಎಂದರು.

‘ಮಂಡಳಿ ರಚನೆಯ ನಂತರ ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು. ಆದರೆ, ಉತ್ತರ ಪ್ರದೇಶ ಅಥವಾ ಇತರೆ ರಾಜ್ಯಗಳ ಮಾದರಿ ಅನುಸರಿಸುವುದಿಲ್ಲ. ನಮ್ಮದೇ ನೀತಿ ನಿಯಮಗಳನ್ನು ರೂಪಿಸುವೆವು’ ಎಂದು ಸಮರ್ಥಿಸಿಕೊಂಡರು.

ಚಿಕ್ಕಪೇಟೆ ಸರ್ಕಾರಿ ಶಾಲೆಯ ದಾಖಲೆಗಳ ಸಂಗ್ರಹ ಕಾರ್ಯ ನಡೆಯುತ್ತಿದೆ. ಸ್ವಾತಂತ್ರ್ಯ ಪೂರ್ವದ ಆ ಶಾಲೆಯ ಕೆಲವು ದಾಖಲೆಗಳು ಸಿಗುತ್ತಿಲ್ಲ. ಈಗಾಗಲೇ ಕಂದಾಯ ಇಲಾಖೆ ಜತೆ ಮಾತುಕತೆ ನಡೆಸಲಾಗಿದೆ. ಶಾಲೆ ಹೆಸರಿಗೆ ಶೀಘ್ರ ಖಾತೆ ಮಾಡಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.