ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂಪರಭಾರೆ ನಿಷೇಧ ಕಾಯ್ದೆಗೆ (ಪಿಟಿಸಿಎಲ್) ಸಮಗ್ರ ತಿದ್ದುಪಡಿ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಂವಿಧಾನ ಸಂರಕ್ಷಣಾ ಮಹಾಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಶನಿವಾರ ಸಚಿವ ಎಚ್.ಸಿ.ಮಹದೇವಪ್ಪ ಭೇಟಿ ನೀಡಿ, ಅಹವಾಲು ಆಲಿಸಿದರು.
‘ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಮಾಡುತ್ತೇವೆ. ಪಕ್ಷದ ಚುನಾವಣೆಯ ಪ್ರಣಾಳಿಕೆಯಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ’ ಎಂದು ಸಚಿವರು ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇವೆ. ಕಾಂಗ್ರೆಸ್ ಸರ್ಕಾರ ಶೋಷಿತರ ಪರ ಇದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದೆ. ಶೀಘ್ರದಲ್ಲೇ ನಿಮ್ಮ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ’ ಎಂದು ಹೇಳಿದರು.
‘1978ರ ಕಾಯ್ದೆ ಅಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸಲ್ಲಿಸುವ ಅರ್ಜಿಗಳನ್ನು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳು ತಿರಸ್ಕರಿಸುತ್ತಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂಮಿ ಪರರ ಪಾಲಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿ 153 ದಿನದಿಂದ ಪ್ರತಿಭಟನೆ ನಡೆಯುತ್ತಿದೆ.
ಪ್ರತಿಭಟನಾ ಸ್ಥಳದಲ್ಲಿ ಮಂಜುನಾಥ್, ಅಣ್ಣಯ್ಯ ಹೆಣ್ಣೂರು, ಶ್ರೀನಿವಾಸ್, ಬಸವರಾಜ ಕೌತಳ್, ಹೆಬ್ಬಾಳ್ ವೆಂಕಟೇಶ್, ರಾಮಣ್ಣ, ಬಿ.ಎಂ. ವೆಂಕಟೇಶ್, ಮುನಿಸ್ವಾಮಾಪ್ಪ, ಅಂಬಣ್ಣ, ವೇಣು ಮೌರ್ಯ, ಸಾಗರ್, ಇಂದೂದರ ಹೊನ್ನಾಪುರ, ಕೋಡಿಗೆಹಳ್ಳಿ ನಾಗರಾಜು, ಶಿವರಾಜ್, ನಾಗಾರ್ಜುನ್ ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.