ಯಲಹಂಕ: ಬ್ಯಾಟರಾಯನಪುರ ವಾರ್ಡ್ ವ್ಯಾಪ್ತಿಯ ತಿಂಡ್ಲು ಗ್ರಾಮದ ಸಿದ್ಧಿವಿನಾಯಕ ಲೇಔಟ್ ಮತ್ತು ಸುತ್ತಮುತ್ತಲ ಬಡಾವಣೆಗಳು, ನಾಗವಾರದ ಮಂಜುನಾಥ ಬಡಾವಣೆ ಹಾಗೂ ದೊಡ್ಡಬೊಮ್ಮಸಂದ್ರದ ಮುನಿಶಾಮಪ್ಪ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಈ ಬಡಾವಣೆಗಳಲ್ಲಿ ಹಿಂದೆಯೆ ಒಳಚರಂಡಿ ಸಂಪರ್ಕ ಮತ್ತು ಕಾವೇರಿ ನೀರು ಸರಬರಾಜು ವ್ಯವಸ್ಥೆಗೆ ಪೈಪ್‌ಲೈನ್ ಅಳವಡಿಸುವುದು ಸೇರಿದಂತೆ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಡಾಂಬರು ಹಾಕಿಸಿ ಬಹಳ ದಿನಗಳಾಗಿದೆ. ನಿರಂತರ ಮಳೆಯಿಂದ ರಸ್ತೆಗಳು ಹಾಳಾಗಿರುವುದರಿಂದ, ಮತ್ತೆ ಡಾಂಬರು ಹಾಕಿಸಬೇಕೆಂಬ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದರು. ಹಾಗಾಗಿ, ಮೂರನೇ ಬಾರಿಗೆ ರಸ್ತೆಗಳಿಗೆ ಡಾಂಬರು ಹಾಕಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಅಭಿವೃದ್ಧಿಗೊಂಡಿರುವ ಅತ್ಯಂತ ಸುಂದರ ಕೆರೆಗಳ ಪೈಕಿ ದೊಡ್ಡಬೊಮ್ಮಸಂದ್ರ ಕೆರೆಯೂ ಒಂದಾಗಿದೆ. ಕೆರೆಯ ಸುತ್ತಲೂ ಸಾವಿರಾರು ಗಿಡಗಳನ್ನು ನೆಡಲಾಗಿದ್ದು, ನಡಿಗೆಪಥ, ಉದ್ಯಾನ ಸೇರಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಕೆರೆಯು ಒಂದು ಪರಿಸರದ ತಾಣವಾಗಿ ಮಾರ್ಪಾಡಾಗಿದ್ದು, ಈ ಭಾಗದ
ಜನರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಎನ್.ಎನ್.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ಆರ್.ಎಂ.ಶ್ರೀನಿವಾಸ್, ಬಿ.ಎಸ್.ಗೋಪಾಲಕೃಷ್ಣ, ಮಲ್ಯಾದ್ರಿ, ಸುರೇಶ್, ಮಂಜುನಾಥ್, ರವಿ ನಾಯ್ಡು, ಪಟೇಲ್ ರಮೇಶ್, ರಾಮಯ್ಯ, ತಿಂಡ್ಲು ಸತೀಶ್, ಹನುಮಂತಿ,
ಕೆ.ದಿಲೀಪ್‌ಕುಮಾರ್, ಸಿ.ಆನಂದ್, ನರಸಿಂಹಮೂರ್ತಿ, ಬಸವರಾಜು, ಟಿ.ಎನ್.ಮಹೇಶ್‌ಕುಮಾರ್, ಶ್ರೀನಿವಾಸ್, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.