ಬೆಂಗಳೂರು: ಸಕಾಲ ಕಾಯ್ದೆಯ ಅಡಿಯಲ್ಲಿ ಒದಗಿಸುತ್ತಿರುವ ಎಲ್ಲ ಸೇವೆಗಳನ್ನೂ ಡಿಜಿಟಲೀಕರಣ ಮಾಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಸಕಾಲ ಸೇವೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಕಂದಾಯ ಇಲಾಖೆಯಲ್ಲಿ ಬಹುತೇಕ ಸೇವೆಗಳನ್ನು ಆನ್‌ಲೈನ್ ರೂಪದಲ್ಲಿ ಒದಗಿಸಲಾಗುತ್ತಿದೆ. ಆ ಮಾದರಿಯನ್ನು ಸಕಾಲ ಸೇವೆಗಳಲ್ಲಿ ಏಕೆ ಅನುಷ್ಠಾನಕ್ಕೆ ತರಬಾರದು? ಸಕಾಲ ಅರ್ಜಿಗಳನ್ನೂ ಆನ್‌ಲೈನ್ ಮೂಲಕ ಸ್ವೀಕರಿಸುವ ಪ್ರಕ್ರಿಯೆ ಆರಂಭಿಸಬೇಕು’ ಎಂದು ನಿರ್ದೇಶನ ನೀಡಿದರು.
‘ಪ್ರತಿ ಹಳ್ಳಿಯಲ್ಲೂ ಈಗ ಸೈಬರ್ ಕೇಂದ್ರಗಳಿವೆ. ಗ್ರಾಮ-ಒನ್ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ಮೊಬೈಲ್ ಮೂಲಕವೂ ಸೇವೆ ಒದಗಿಸುವ ಉದ್ದೇಶವಿದೆ. ಜನರು ಮೊಬೈಲ್ ಮೂಲಕವೇ ಸಕಾಲ ಅರ್ಜಿ ಸಲ್ಲಿಸಿ ಸೇವೆಯನ್ನೂ ಪಡೆಯಬಹುದು. ಸಕಾಲ ಸೇವೆ ಡಿಜಿಟಲೀಕರಣಗೊಂಡರೆ ಡಿಜಿಟಲ್ ಹೆಜ್ಜೆ ಗುರುತಿನ ಮೂಲಕ ಅರ್ಜಿ ಎಲ್ಲಿದೆ? ವಿಳಂಬಕ್ಕೆ ಕಾರಣವೇನು? ಎಂಬ ಕುರಿತ ಮಾಹಿತಿ ನಮಗೂ ಲಭ್ಯವಾಗುತ್ತದೆ. ಹೀಗಾಗಿ ಮುಂದಿನ 5 ವರ್ಷದಲ್ಲಿ ಸಕಾಲ ಸಂಪೂರ್ಣ ಡಿಜಿಟಲಿಕರಣ ಆಗಬೇಕು’ ಎಂದು ಸೂಚಿಸಿದರು.
ಸಕಾಲಕ್ಕೆ ಮತ್ತಷ್ಟು ಸೇವೆ: ವೈದ್ಯಕೀಯ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತು, ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿ, ಕರ್ನಾಟಕ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 130 ಹೊಸ ಸೇವೆಗಳನ್ನು ಸಕಾಲದ ಮೂಲಕ ಒದಗಿಸಲು ಪ್ರಸ್ತಾವ ಸಲ್ಲಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂಶೋಧನೆ ಮತ್ತು ತರಬೇತಿ ಇಲಾಖೆ ಈಗಾಗಲೇ 65 ಸೇವೆಗಳನ್ನು ಸಕಾಲದಲ್ಲಿ ನೀಡುತ್ತಿವೆ. ಹೊಸದಾಗಿ 63 ಸೇವೆಗಳನ್ನು ನೀಡುವ ಪ್ರಸ್ತಾವವಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈಗಾಗಲೇ 22 ಸೇವೆಗಳನ್ನು ನೀಡುತ್ತಿದ್ದು, ಹೊಸದಾಗಿ 16 ಸೇವೆಗಳನ್ನು ನೀಡಲು ಪ್ರಸ್ತಾವ ಸಲ್ಲಿಸಿದೆ. ಇನ್ನೂ ಹಲವು ಇಲಾಖೆಗಳು 600 ಸೇವೆಗಳನ್ನು ಸಕಾಲದಡಿ ಒದಗಿಸುವ ಪ್ರಸ್ತಾವ ಸಲ್ಲಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.