ಬೆಂಗಳೂರು: ಕಳೆದ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೇರೂರಿದ್ದ ವಿಧಾನಪರಿಷತ್ ಸಚಿವಾಲಯದ 30 ಕ್ಕೂ ಹೆಚ್ಚು ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.
‘ಆಯಕಟ್ಟಿನ ಸ್ಥಳಗಳಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಾ ಸಚಿವಾಲಯದ ಮೇಲೆ ಈ ಅಧಿಕಾರಿಗಳು ಹಿಡಿತ ಸಾಧಿಸಿದ್ದರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕ್ರಮ ಕೈಗೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ವರ್ಗಾವಣೆ ಸಂಬಂಧ ಗುರುವಾರ ಅಧಿಸೂಚನೆ ಹೊರಡಿಸಿದ್ದು, ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಶಾಖಾಧಿಕಾರಿಗಳು, ಹಿರಿಯ ಸಹಾಯಕರು, ಸಹಾಯಕರು ಮತ್ತು ಕಿರಿಯ ಸಹಾಯಕರನ್ನು ಒಳಗೊಂಡಂತೆ 30 ಮಂದಿಯನ್ನು ಬೇರೆ ವಿಭಾಗಗಳಿಗೆ ವರ್ಗಾಯಿಸಲಾಗಿದೆ. ಪ್ರಭಾವಿಗಳ ಮೂಲಕ ಒತ್ತಡ ತಂದು ಆಯಕಟ್ಟಿನ ಸ್ಥಳಗಳಲ್ಲೇ ಬಹಳ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಿಬ್ಬಂದಿ ಬಗ್ಗೆ ಹಲವು ದೂರುಗಳೂ ಕೇಳಿ ಬಂದಿದ್ದವು’ ಎಂದು ಮೂಲಗಳು ತಿಳಿಸಿವೆ.
‘ಸಚಿವಾಲಯದಲ್ಲಿ ಹಣ ಮತ್ತು ಅಧಿಕಾರ ದುರುಪಯೋಗ ಕುರಿತ ದೂರುಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಸಚಿವಾಲಯದಲ್ಲಿ ಇರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಂತಹ ಆರೋಪಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.