ಬೆಂಗಳೂರು:ಕೋಲಾರದ ಕೆರೆಗಳಿಗೆ ವಿಷಪೂರಿತ ನೀರು ಸೇರುತ್ತಿರುವ ಬಗ್ಗೆ ಪರಿಶೀಲಿಸಲು ಸಣ್ಣ ನೀರಾವರಿ ಸಚಿವ ಪುಟ್ಟರಾಜು ಗುರುವಾರ ಅಧಿಕಾರಿಗಳ ಸಮೇತ ಮಹದೇವಪುರ ಕ್ಷೇತ್ರದ ಚಲ್ಲಘಟ್ಟ ಸಂಸ್ಕರಣಾ ಘಟಕ ಹಾಗೂ ಬೆಳ್ಳಂದೂರು ಕೆರೆಗೆ ಭೇಟಿ ನೀಡಿದರು.
ಹೈಕೋರ್ಟ್ ನೀಡಿರುವ ಸೂಚನೆಗಳನ್ನು ನೆನಪಿಸಿದ ಅವರು, ತಪ್ಪುಗಳು ಮರುಕಳಿಸದಂತೆ ಎಚ್ಚರದಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಾಲಿನ್ಯಕ್ಕೆ ಕಾರಣಗಳನ್ನು ಕಂಡುಹಿಡಿದು ವಿವರವಾದ ವರದಿ ಸಲ್ಲಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಜಲಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು, ‘ಕೋಲಾರದ ಕೆರೆಗಳಿಗೆ ಬಿಡುತ್ತಿರುವ ನೀರು ಸಂಸ್ಕರಣೆಗೊಳ್ಳುತ್ತಿಲ್ಲ. ಹರಿಯುವ ನೀರು ವಾಸನೆ ಬರುತ್ತದೆ ಎಂದರೆ ಏನರ್ಥ? ಕೋಲಾರದ ಕೆರೆಗಳನ್ನು ತುಂಬಿಸಿ, ಅಂತರ್ಜಲ ವೃದ್ಧಿಸುವ ಯೋಜನೆ ಇದಾಗಿದೆ. ಈ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಿಸಿ ಹರಿಸಬೇಕಿದೆ. ಆದರೆ, ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ನೀರಿನ ಗುಣಮಟ್ಟವನ್ನುಅಧಿಕಾರಿಗಳು ಸರಿಯಾಗಿ ಪರಿಶೀಲಿಸುತ್ತಿಲ್ಲ. ವರದಿ ಸಿಕ್ಕ ಬಳಿಕ ಸಭೆ ನಡೆಸಿ ಮುಂದಿನ ಕ್ರಮಕೈಗೊಳ್ಳುತ್ತೇನೆ’ ಎಂದರು.
‘ನೀರಿನ ಗುಣಮಟ್ಟ ಉತ್ತಮವಾಗಿದೆ. ಆದರೆ ಕೋಲಾರದ ಕೆರೆಗೆ ನೀರನ್ನು ಸರಬರಾಜು ಮಾಡುವ ಪೈಪ್‌ಗಳಲ್ಲಿ ರಾಸಾಯನಿಕ ಸೇರಿಕೊಂಡಿದೆ. ಪ್ರತಿದಿನ ಮೊದಲ ಮೂರು ಗಂಟೆಯವರೆಗೆ ಈ ಪೈಪ್ ಮೂಲಕ ಹರಿಯುವ ನೀರಿನಲ್ಲಿ ರಾಸಾಯನಿಕ ಕಂಡುಬಂದಿದೆ’ ಎಂದು ಜಲಮಂಡಳಿ ಅಧಿಕಾರಿ ಮಾಹಿತಿ ನೀಡಿದರು.
3 ಹಂತದ ಸಂಸ್ಕರಣೆ ಅಗತ್ಯ
‘ರಾಸಾಯನಿಕ ಕೈಗಾರಿಕೆಗಳು ಹೊರ ಬಿಡುವ ವಿಷಕಾರಿ ನೀರು ಹಾಗೂ ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು ಬೆಂಗಳೂರಿನ ಬೆಳ್ಳಂದೂರು ಕೆರೆ ಸೇರುತ್ತಿದೆ. ಆ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಜಿಲ್ಲೆಗೆ ಹರಿಸಲಾಗುತ್ತಿದೆ. ಮೂರನೇ ಹಂತದಲ್ಲಿ ಸಂಸ್ಕರಿಸಿದ ನಂತರವಷ್ಟೇ ನೀರು ಬಳಕೆಗೆ ಯೋಗ್ಯ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ವರದಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.