ಬೆಂಗಳೂರು: ‘ಶಾಂತಿಯ ಕಾಲದಲ್ಲಿ ಕ್ರಾಂತಿಯ ಮಾತನ್ನಾಡುತ್ತಾ, ಕ್ರಾಂತಿಯ ಕಾಲದಲ್ಲಿ ಮೌನ ವಹಿಸುತ್ತಿರುವ ಕೆಲವು ಸಾಹಿತಿಗಳ ಧೋರಣೆ ಸರಿಯಲ್ಲ. ಇದು ಸಮಾಜಕ್ಕೆ ಬಗೆಯುವ ದ್ರೋಹ’ ಎಂದು ಸಾಹಿತಿ ಡಾ.ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಬೆಂಗಳೂರು ನಗರ ಜಿಲ್ಲಾ ಘಟಕವು ಆಯೋಜಿಸಿದ್ದ ಸಮಾಜದ ನೂತನ ಸಚಿವರು, ಶಾಸಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಗಮೇಶ ಬಾದವಾಡ ಅವರ ‘ಶೃಂಗಾರ ಶಾಯಿರಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಾತನಾಡಬೇಕಿದ್ದ ಕಾಲದಲ್ಲಿ ಸುಮ್ಮಿನಿರುವ ಸಾಹಿತಿಗಳ ಸಂಖ್ಯೆ ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಾಗಿದೆ. ಸಮಾಜವು ಸುವ್ಯವಸ್ಥೆಗೆ ಬಂದಾಗ ಮುಂಚೂಣಿಗೆ ಬಂದು ನೆರೆಯುವವರಿಂದ ಸಾಹಿತ್ಯ ಕ್ಷೇತ್ರವು ಹಾಳಾಗುತ್ತಿದೆ. ಈ ಅವಕಾಶವಾದಿ ಸಾಹಿತಿಗಳ ಮೇಲೆ ಸಾಹಿತ್ಯ ಲೋಕ ಹಾಗೂ ರಾಜಕಾರಣಿಗಳು ಸದಾ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.
‘ಗಜಲ್ ಹಾಗೂ ಶಾಯಿರಿಗಳು ಪರ್ಶಿಯನ್ ಹಾಗೂ ಉರ್ದು ಮೂಲದವು. ಅವುಗಳಿಗೆ ತನ್ನದೇ ಛಂದೋ ರೂಪವಿರುತ್ತದೆ. ಬದುಕಿನ ಸಾಂಸ್ಕೃತಿಕ ಸ್ಪರ್ಶವಿರುತ್ತದೆ. ಅವು ಬೇರೆ ಭಾಷೆಗೆ ಹೋದರೆ ಛಾಯಾ ರಚನೆ ಆಗಿರುತ್ತವೆ. ಹಾಗೆಂದಾಕ್ಷಣ ಬೇರೆ ಭಾಷೆಗೆ ಹೋಗಬಾರದೆಂಬ ಅರ್ಥವಲ್ಲ. ಸಾಂಸ್ಕೃತಿಕ ಸಂವಹನದ ದೃಷ್ಟಿಯಿಂದ ಬೇರೆ ಭಾಷೆಗಳಿಗೂ ಅವುಗಳು ಹೋಗುವುದು ಅಗತ್ಯ’ ಎಂದು ಪ್ರತಿಪಾದಿಸಿದರು.
ನಟ ದೊಡ್ಡಣ್ಣ, ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಇದ್ದರು. ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ ಶ್ರುತಿ ಶಿವಾನಂದ ಯರಗಟ್ಟಿ ಅವರನ್ನು ಸನ್ಮಾನಿಸಲಾಯಿತು.
‘ಉನ್ನತ ಹುದ್ದೆ ಪಡೆಯಲಿ’
ಸಂಜೆ ನಡೆದ ನೂತನ ಸಚಿವರು ಹಾಗೂ ಶಾಸಕರ ಸನ್ಮಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಮಾತನಾಡಿ ‘ಸಮಾಜವು ಜಾಗೃತವಾಗಬೇಕು. ಮತ್ತಷ್ಟು ಸಂಘಟನೆಯಾಗಬೇಕು’ ಎಂದು ಕರೆ ನೀಡಿದರು.
‘ಸಮಾಜಕ್ಕೆ ಈಗ ನಾಯಕತ್ವವೂ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಬರೀ ವ್ಯಾಪಾರಕ್ಕೆ ಸೀಮಿತಗೊಳ್ಳದೇ ಐಎಎಸ್ ಐಪಿಎಸ್ ಅಧಿಕಾರಿಗಳು ಆಗಬೇಕು’ ಎಂದು ಕರೆ ನೀಡಿದರು.
‘ನ್ಯಾಯಾಂಗ ಕ್ಷೇತ್ರದಲ್ಲೂ ಸಮಾಜದ ಸಾಕಷ್ಟು ಮಂದಿ ಸಾಧನೆ ತೋರಿದ್ದಾರೆ. ಅವರ ಮಾರ್ಗದಲ್ಲಿ ಸಮಾಜದ ಯುವಕರು ಮುನ್ನಡೆಯಬೇಕು’ ಎಂದು ಶೆಟ್ಟರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.