ADVERTISEMENT

ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣೀರಧಾರೆ: ಉಳಿದಿಲ್ಲ ಭರವಸೆಯ ‘ಬೆಳಕು’

ಮುಗಿಲು ಮುಟ್ಟಿದ ಆಕ್ರಂದನ

ವರುಣ ಹೆಗಡೆ
Published 21 ಜುಲೈ 2019, 19:45 IST
Last Updated 21 ಜುಲೈ 2019, 19:45 IST
ಆಸ್ಪತ್ರೆಯ ಒಳಗಡೆ ಹೊರಗಿನವರಿಗೆ ಪ್ರವೇಶ ನೀಡದಂತೆ ಪ್ರವೇಶದ್ವಾರದಲ್ಲಿ ಸಿಬ್ಬಂದಿ ನೇಮಿಸಲಾಗಿದೆ–ಪ್ರಜಾವಾಣಿ ಚಿತ್ರ
ಆಸ್ಪತ್ರೆಯ ಒಳಗಡೆ ಹೊರಗಿನವರಿಗೆ ಪ್ರವೇಶ ನೀಡದಂತೆ ಪ್ರವೇಶದ್ವಾರದಲ್ಲಿ ಸಿಬ್ಬಂದಿ ನೇಮಿಸಲಾಗಿದೆ–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಂದು ನಮ್ಮನ್ನೆಲ್ಲ ಪೂರ್ವನಿಗದಿಯಂತೆ ಶಸ್ತ್ರಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಯಿತು.ಕಣ್ಣಿನ ಪೊರೆ ತೆಗೆಸಿದಲ್ಲಿ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಎಂದು ವೈದ್ಯರು ಭರವಸೆ ನೀಡಿದ್ದರು. ಇದರಿಂದಶಸ್ತ್ರಚಿಕಿತ್ಸೆಯ ನೋವು ಅಷ್ಟಾಗಿ ಭಾದಿಸಿರಲಿಲ್ಲ. ಕಣ್ಣಿಗೆ ಸುತ್ತಿದ ಬಟ್ಟೆಯನ್ನು ತೆಗೆದಾಗ ಸ್ಪಷ್ಟವಾಗಿ ಎಲ್ಲವೂ ಕಾಣಿಸುತ್ತದೆ ಅಂದುಕೊಂಡಿದ್ದೆವು. ಆದರೆ, ನಮ್ಮೆದುರಿಗಿದ್ದುದು ಬರೀ ಅಂಧಕಾರ, ನೋವು...!’

–ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಜುಲೈ 9ರಂದು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದವರ ಸಂಕಟದ ನುಡಿಗಳಿವು. ಕಣ್ಣಿನ ಪೊರೆ ತೆಗೆಸಿಕೊಳ್ಳಲೆಂದು ಬಂದವರು ತಾವು ಮಾಡದ ತಪ್ಪಿಗೆ ಶಾಶ್ವತ ಅಂಧತ್ವಕ್ಕೆ ಒಳಗಾಗುವ ಭೀತಿಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಮತ್ತೆ ಕಣ್ಣು ಕಾಣಿಸೀತು ಎಂಬ ಭರವಸೆಯ ಬೆಳಕೂ ಉಳಿದಿಲ್ಲ.

1913ರಲ್ಲಿ ಸ್ಥಾಪಿತವಾದ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಈವರೆಗೆ 10 ಸಾವಿರಕ್ಕೂ ಅಧಿಕ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವಿಶ್ವದ ಅತ್ಯಂತ ಹಳೆಯ ಕಣ್ಣಿನ ಆಸ್ಪತ್ರೆ ಎಂಬ ಹಿರಿಮೆಗೆ ಭಾಜನವಾಗಿದ್ದು, ಸಾವಿರಾರು ಮಂದಿ ಬೆಳಕು ಕಾಣುವಂತೆ ಮಾಡಿದ್ದ ಮಿಂಟೊ ಆಸ್ಪತ್ರೆಯು ದೃಷ್ಟಿ ಇದ್ದವರನ್ನೂ ಅಂಧಕಾರದ ಕೂಪಕ್ಕೆ ತಳ್ಳಿದ ಅಪವಾದ ಎದುರಿಸುತ್ತಿದೆ.

ADVERTISEMENT

ಇಲ್ಲಿ ಜುಲೈ 9ರಂದು ಶಸ್ತ್ರಚಿಕಿತ್ಸೆಗೆ ಒಳಪಟ್ಟ 24 ಮಂದಿಯಲ್ಲಿ ಇಬ್ಬರಿಗೆ ಮಾತ್ರ ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಮರಳಿದೆ. ಇನ್ನುಳಿದವರು ಕಣ್ಣಿನ ನೋವು ತಾಳಲಾರದೆ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡಿದ್ದಾರೆ.ಸದ್ಯ ಮಿಂಟೋದಲ್ಲಿ 12 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ನೋವಿನ ಯಾತನೆ ತಾಳಲಾರದೆ ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ದೃಷ್ಟಿದೋಷ ಹೊಂದಿದ ಬಡವರ ಪಾಲಿಗೆ ಭರವಸೆಯ ಬೆಳಕಾಗಿದ್ದ ಮಿಂಟೋದಲ್ಲೇ ಹೀಗೇಕಾಯಿತು ಎಂಬುದೇ ದೊಡ್ಡ ಪ್ರಶ್ನೆ.

ಜೊತೆಗೆ ಇನ್ನೂ ಒಂದಷ್ಟು ಪ್ರಶ್ನೆಗಳನ್ನು ಈ ಪ್ರಕರಣ ಹುಟ್ಟುಹಾಕಿದೆ. ಕಣ್ಣಿನಂತಹ ಸೂಕ್ಷ್ಮ ಅವಯವದ ಶಸ್ತ್ರಚಿಕಿತ್ಸೆ ವೇಳೆ ಬಳಸುವ ಔಷಧಗಳ ಸುರಕ್ಷತೆ ಬಗ್ಗೆಯೂ ಮರುಚಿಂತನೆ ನಡೆಸುವ ಅಗತ್ಯವನ್ನು ಈ ಪ್ರಕರಣ ಬೊಟ್ಟು ಮಾಡಿ ತೋರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಹಾಗೂ ವಿವಿಧ ಪ್ರಯೋಗಾಲಯದ ವರದಿ ಬಂದಿದ್ದು, ಶಸ್ತ್ರಚಿಕಿತ್ಸೆ ವೇಳೆ ಬಳಸಿದ ಔಷಧದಲ್ಲಿ ಸೂಡೋಮೋನಾಸ್‌ ಎಂಬ ವೈರಾಣು ಇತ್ತು ಎನ್ನುವುದು ಸಾಬೀತಾಗಿದೆ. ಇದರಿಂದ ಆಸ್ಪತ್ರೆಯುಪ್ರಯೋಗಾಲಯ ವರದಿ ಆಧರಿಸಿ, ಔಷಧ ತಯಾರಿಕಾ ಕಂಪನಿ ಆಪ್ಟೆಕ್ನಿಕ್ ಮತ್ತು ವಿತರಕರಾದ ಯೂನಿಕಾರ್ನ್ ಡಿಸ್ಟ್ರಿಬ್ಯೂಟರ್ಸ್ ವಿರುದ್ಧ ಈಗಾಗಲೇ ವಿ.ವಿ.ಪುರ ಠಾಣೆಯಲ್ಲಿ ದೂರು ದಾಖಲಿಸಿದೆ.

‘ಶಸ್ತ್ರಚಿಕಿತ್ಸೆ ನಡೆಸುವ ರೋಗಿಗಳಿಗೆ ಉಪಯೋಗಿಸಿದ ಔಷಧದಲ್ಲಿ (ಆಕ್ಯುಜೆಲ್‌ 2%) ಸೋಂಕು ಇರುವುದು ಪ್ರಯೋಗಾಲಯದ ವರದಿಗಳಿಂದ ಸಾಬೀತಾಗಿದೆ. ವೈದ್ಯರಿಂದ ಯಾವುದೇ ರೀತಿಯ ತಪ್ಪಾಗಿಲ್ಲ. ಮಿಂಟೊ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಔಷಧದ ದುಷ್ಪರಿಣಾಮದಿಂದ ಕಣ್ಣಿನ ಶಸ್ತ್ರಚಿಕಿತ್ಸೆ ವಿಫಲವಾಗಿದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಸರ್ಕಾರಿ ನೇತ್ರಾಧಿಕಾರಿಗಳ ಸಂಘದ ಅಧ್ಯಕ್ಷ ಎಂ. ವೆಂಕಟೇಶ್.

‘ಕಣ್ಣಿನ ನರದ ಮೂಲಕ ವೈರಾಣು ಮೆದುಳಿಗೆ ಸೇರಿದಲ್ಲಿ ಮನುಷ್ಯ ಉಳಿಯುವುದೇ ಕಷ್ಟ. ಈ ಅಪಾಯವನ್ನು ತಡೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಔಷಧಿಯಿಂದ ಆಗಿರುವ ಅನಾಹುತಕ್ಕೆ ವೈದ್ಯರನ್ನು ದೂಷಿಸುವುದು ಸರಿಯಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅವರ ಮಾತನ್ನು ಒಪ್ಪಿಕೊಳ್ಳೋಣ. ಹಾಗಾದರೆ ದೋಷಪೂರಿತ ಔಷಧ ಆಸ್ಪತ್ರೆಯನ್ನು ಸೇರಿದ್ದಾದರೂ ಹೇಗೆ. ಅದರಲ್ಲೂ ಕಣ್ಣಿಗೆ ಬಳಸುವಂತಹ ಔಷಧ ಸಂಪೂರ್ಣ ಸುರಕ್ಷಿತ ಎಂಬುದನ್ನು ಖಾತರಿಪಡಿಸಿಕೊಳ್ಳುವ ವ್ಯವಸ್ಥೆ ನಮ್ಮಲ್ಲಿಲ್ಲವೇ. ಕಣ್ಣಿಗೆ ಈ ಔಷಧ ಬಳಸುವ ಮುನ್ನ ಕೊನೆ ಕ್ಷಣದಲ್ಲಿ ಅದನ್ನು ಮತ್ತೊಮ್ಮೆ ದೃಢೀಕರಿಸುವ ಅಗತ್ಯವಿಲ್ಲವೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.

‘ಕಣ್ಣಿನ ಔಷಧಗಳು ಕಂಪನಿಗಳಿಂದಲೇ ದೃಢೀಕರಣಗೊಂಡು ಬರುತ್ತವೆ. ಹಾಗಾಗಿ ನೇರವಾಗಿ ಔಷಧಗಳನ್ನು ಬಳಸುವ ಪರಿಪಾಠ ಇದೆ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಬಳಸುವ ಔಷಧವನ್ನು ಒಮ್ಮೆ ತೆರೆದರೆ, ತಕ್ಷಣವೇ ಬಳಸಬೇಕು’ ಎನ್ನುತ್ತಾರೆ ಅಗರವಾಲ್‌ ಕಣ್ಣಿನ ಆಸ್ಪತ್ರೆಯ ಡಾ.ರವಿ.

ವೈದ್ಯಕೀಯ ಲೋಕ ನಿಂತಿರುವುದೇ ಭರವಸೆಯ ಮೇಲೆ. ಇದಕ್ಕೆ ಚ್ಯುತಿ ತರುವಂತಹ ಬೆಳವಣಿಗೆಗಳಾದಾಗ ಲೋಪಗಳನ್ನು ಪತ್ತೆ ಹಚ್ಚಿ ಸರಿಪಡಿಸುವ ಕೆಲಸ ಆಗಬೇಕು. ಇಲ್ಲದಿದ್ದರೆ ತಮ್ಮ ಪಾಲಿನ ಭರವಸೆಯ ಬೆಳಕಾಗಿರುವ ಆಸ್ಪತ್ರೆಗಳ ಮೇಲೂ ಬಡರೋಗಿಗಳು ವಿಶ್ವಾಸ ಕಳೆದುಕೊಳ್ಳುವಂತಾಗುತ್ತದೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಬಯಸದ ವೈದ್ಯರೊಬ್ಬರು.

ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತ

ಜುಲೈ 9ರಂದು ಶಸ್ತ್ರಚಿಕಿತ್ಸೆ ವೈಫಲ್ಯವಾದ ಬಳಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಸ್ಥಗಿತ ಮಾಡಲಾಗಿದೆ. ‌ಒಳರೋಗಿಗಳಿಗೆ ಚಿಕಿತ್ಸೆಯನ್ನು ಮುಂದುವರೆಸಿದ್ದು, ಹೊಸದಾಗಿ ಶಸ್ತ್ರಚಿಕಿತ್ಸೆಗೆ ದಾಖಲಿಸಿಕೊಳ್ಳುತ್ತಿಲ್ಲ. ತುರ್ತುಚಿಕಿತ್ಸೆಯನ್ನು ಎಂದಿನಂತೆ ಮುಂದುವರೆಸಲಾಗಿದೆ.

ಆಸ್ಪತ್ರೆಯ ಕಟ್ಟಡ ಪ್ರವೇಶಕ್ಕೆ ಸಾರ್ವಜನಿಕರಿಗೆ ಭಾನುವಾರದಿಂದ (ಜುಲೈ 21) ನಿರ್ಬಂಧ ಹೇರಿದ್ದು, ಶಸ್ತ್ರಚಿಕಿತ್ಸೆಗೆ ಒಳಪಟ್ಟವರ ಕುಟುಂಬದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಚಿಕಿತ್ಸೆ ಪಡೆದುಕೊಳ್ಳುವವರಿಗೆ ಸೋಂಕು ತಗಲುತ್ತದೆ ಎಂಬ ಕಾರಣವನ್ನು ಆಸ್ಪತ್ರೆ ಸಿಬ್ಬಂದಿ ನೀಡುತ್ತಿದ್ದಾರೆ.

‘ದೃಷ್ಟಿ ಬಂದರೆ ಸಾಕು’

‘ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಕೆಲ ದಿನಗಳಿಂದ ಕಣ್ಣು ಮಂಜಾಗುತ್ತಿತ್ತು. ವೈದ್ಯರ ಬಳಿ ತೋರಿಸಿದಾಗ ಪೊರೆ ಬಂದಿರುವುದಾಗಿ ತಿಳಿಸಿ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸೂಚಿಸಿದರು. ಆದ್ದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಆದರೆ, ಇದೀಗ ಏನೂ ಕಾಣುತ್ತಿಲ್ಲ. ಕಣ್ಣಿನ ನೋವನ್ನೂ ತಾಳಲಾಗುತ್ತಿಲ್ಲ. ಇಬ್ಬರು ಹೆಣ್ಣುಮಕ್ಕಳ ವಿವಾಹವಾಗಿದ್ದು, ಅವರು ಕೂಡ ನನ್ನ ಜತೆಯಲ್ಲಿ ಇರಲು ಸಾಧ್ಯವಿಲ್ಲ. ಇದೀಗ ಮುಂದಿನ ಜೀವನದ್ದೇ ಪ್ರಶ್ನೆಯಾಗಿದೆ. ದೃಷ್ಟಿ ಬಂದರೆ ಹೇಗೋ ಜೀವನ ಸಾಗಿಸುವೆ’.

-ಶಾರದಮ್ಮ, ಕಾಟನ್‌ಪೇಟೆ‌

‘ಪಿಂಚಣಿ ಹಣದಲ್ಲಿ ಜೀವನ ನಿರ್ವಹಣೆ’

‘ಶಸ್ತ್ರಚಿಕಿತ್ಸೆಗೂ ಮುನ್ನ ಶೇ 50ರಷ್ಟು ಕಣ್ಣು ಕಾಣಿಸುತ್ತಿತ್ತು. ಆದರೆ, ಶಸ್ತ್ರಚಿಕಿತ್ಸೆ ನಂತರ ಏನೂ ಕಾಣುತ್ತಿಲ್ಲ. ಚಿಕಿತ್ಸೆ ಮುಂದುವರೆಸಿದರೂ ಫಲಿತಾಂಶ ಮಾತ್ರ ಇಲ್ಲ. ಪ್ರತಿನಿತ್ಯ ವೈದ್ಯರು ಇಂಜೆಕ್ಷನ್‌ ನೀಡುತ್ತಿದ್ದಾರೆ. ನಾನು ಹೃದಯ ರೋಗಿಯಾಗಿದ್ದು, ಪಿಂಚಣಿ ಹಣದಿಂದಲೇ ಜೀವನ ಸಾಗುತ್ತಿದ್ದೆ. ಪತಿ ಕೆಲ ವರ್ಷದ ಹಿಂದೆಯೇ ನಿಧನರಾಗಿದ್ದಾರೆ. ಮಕ್ಕಳು ಕೂಡ ಬೇರೆ ಕಡೆ ಇದ್ದಾರೆ. ನಾವು ಯಾವ ತಪ್ಪನ್ನು ಮಾಡಿದ್ದೇವೆ ಎಂಬ ಕಾರಣಕ್ಕೆ ಈ ಶಿಕ್ಷೆಯನ್ನು ನೀಡಲಾಗಿದೆ? ಸರ್ಕಾರ ನಮ್ಮ ನೋವಿಗೆ ಸ್ಪಂದಿಸಲಿ’.

–ಜಾಹೇದ್ ಉನ್ನಿಸಾ ಬೇಗಂ, ಚಿಕ್ಕಬಾಣಾವರ

‘ಮಕ್ಕಳಿಗೆ ಕೃಷಿ ಚಟುವಟಿಕೆಯಲ್ಲಿ ನೆರವಾಗುತ್ತಿದ್ದೆ’

‘ಇದ್ದ ದೃಷ್ಟಿಯನ್ನು ಇದೀಗ ಕಿತ್ತುಕೊಂಡರು. ಕಣ್ಣಿನ ನೋವನ್ನು ತಡೆಯಲು ಆಗುತ್ತಿಲ್ಲ. ಇನ್ನೆಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕು ಎನ್ನುವುದನ್ನೂ ವೈದ್ಯರು ತಿಳಿಸುತ್ತಿಲ್ಲ. ನಾರಾಯಣ ನೇತ್ರಾಲಯಕ್ಕೂ ಹೋಗಿ ಬಂದಾಯಿತು. ಆದರೂ, ಏನೂ ಕಾಣಿಸುತ್ತಿಲ್ಲ. ಇಬ್ಬರು ಗಂಡು ಮಕ್ಕಳಿದ್ದು, ಅವರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಅವರಿಗೆ ನೆರವಾಗುತ್ತಿದ್ದೆ. ಇದೀಗ ಕತ್ತಲೆಯಲ್ಲಿ ದಿನ ಕಳೆಯಬೇಕಾಗಿದೆ. ವೈದ್ಯರು ಕೂಡ ದೃಷ್ಟಿಯ ಬಗ್ಗೆ ಯಾವುದೇ ಖಚಿತ ಭರವಸೆ ನೀಡುತ್ತಿಲ್ಲ. ಹಾಗಾಗಿ ಮುಂದೆ ಏನು ಮಾಡಬೇಕು ಎಂಬ ದಾರಿ ಕಾಣದಂತಾಗಿದೆ’.

-ಪುಟ್ಟನಂಜಮ್ಮ, ಕೊಳ್ಳೇಗಾಲ

ಆಸ್ಪತ್ರೆಗೆ ಇಂದು ವಿಚಾರಣಾ ಸಮಿತಿ ಭೇಟಿ

ಪ್ರಕರಣದ ಬಗ್ಗೆ ತಡವಾಗಿಯಾದರೂ ಎಚ್ಚೆತ್ತುಕೊಂಡ ಸರ್ಕಾರ ಇದೀಗ ವೈದ್ಯಕೀಯ ಕ್ಷೇತ್ರದ ತಜ್ಞರನ್ನು ಒಳಗೊಂಡ ಉನ್ನತಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ವರದಿಯ ಆಧರಿಸಿ, ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಸಮಿತಿಯ ಸದಸ್ಯರು ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ, ವಿಚಾರಣೆ ನಡೆಸಲಿದ್ದಾರೆ.

ಯಂತ್ರವೇ ಕೆಟ್ಟರೆ ಸರಿಪಡಿಸಲು ಸಾಧ್ಯವೇ?

ಶಸ್ತ್ರಚಿಕಿತ್ಸೆ ಒಳಗಾದವರಲ್ಲಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದ ಐವರನ್ನು ಹೆಚ್ಚಿನ ಚಿಕಿತ್ಸೆಗೆ ನಾರಾಯಣ ನೇತ್ರಾಲಯಕ್ಕೆ ಕಳುಹಿಸಲಾಗಿತ್ತು. ಆದರೆ, ನಾರಾಯಣ ನೇತ್ರಾಲಯದ ವೈದ್ಯರು ಕೂಡ ಕೈಚೆಲ್ಲಿ, ವಾಪಸ್‌ ಕಳುಹಿಸಿದ್ದಾರೆ.

‘ಮಿಂಟೋದಿಂದ ಬಂದ ಐವರಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿದೆವು. ಆದರೆ, ಫಲಿತಾಂಶ ಬಂದಿಲ್ಲ. ಇದರಿಂದ ಉಳಿದವರನ್ನು ಪರೀಕ್ಷಿಸಿ, ಕಳುಹಿಸಿದೆವು. ಶಸ್ತ್ರಚಿಕಿತ್ಸೆ ಮಾಡುವಾಗ ಕಣ್ಣಿಗೆ ಕೆಲವೊಂದು ಇಂಜೆಕ್ಷನ್ ನೀಡಬೇಕಾಗುತ್ತದೆ. ಈ ಇಂಜೆಕ್ಷನ್‌ನಲ್ಲಿ ವೈರಾಣು ಇದ್ದರೆ ಅದು ವೈದ್ಯರಿಗೂ ತಿಳಿಯುವುದಿಲ್ಲ. ಮಧುಮೇಹ, ರಕ್ತದೊತ್ತಡ ಇದ್ದವರಿಗೆ ಹೆಚ್ಚಿನ ಹಾನಿಯಾಗುತ್ತದೆ’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ ತಿಳಿಸಿದರು.

‘ಕಣ್ಣಿನ ಕರಿಗುಡ್ಡೆಗೆ ಮಾತ್ರ ಹಾನಿಯಾಗಿದ್ದರೆ ಕಾರ್ನಿಯಾ ಕಸಿ ಮಾಡಬಹುದು. ಆದರೆ, ಗಂಭೀರ ಸಮಸ್ಯೆ ಎದುರಿಸುತ್ತಿರುವ ಐವರ ಕಣ್ಣು ಪೂರ್ತಿಯಾಗಿ ಹಾನಿಯಾಗಿದೆ. ಹಾಗಾಗಿ ದಾನಿಗಳಿಂದ ಕಣ್ಣನ್ನು ಪಡೆದು, ಅಳವಡಿಸಲು ಸಾಧ್ಯವಿಲ್ಲ. ಕೈಗಡಿಯಾರದ ಗ್ಲಾಸ್‌ ಹಾಳಾಗಿದ್ದರೆ ಬೇರೆ ಗ್ಲಾಸನ್ನು ಹಾಕಬಹುದು. ಆದರೆ, ಯಂತ್ರವೇ ಕೆಟ್ಟು ಹೋಗಿದ್ದರೆ ಗ್ಲಾಸ್‌ ಹಾಕಿದರೆ ಏನು ಪ್ರಯೋಜನ’ ಎಂದು ಉದಾಹರಣೆ ನೀಡಿದರು.

* ಔಷಧದ ದುಷ್ಪರಿಣಾಮದಿಂದ ಶಸ್ತ್ರಚಿಕಿತ್ಸೆ ವಿಫಲವಾಗಿರುವುದು ಪ್ರಯೋಗಾಲಯದ ವರದಿಯಿಂದ ಸಾಬೀತಾಗಿದೆ. ಚಿಕಿತ್ಸೆ ಮುಂದುವರೆಸಿದ್ದು ದೃಷ್ಟಿ ಸಮಸ್ಯೆ ನೀಗಲಿದೆ

– ಡಾ. ಸುಜಾತಾ ರಾಥೋಡ್, ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ

* ಔಷಧದ ಮಾದರಿಯನ್ನು ಪಡೆದು ತನಿಖೆ ನಡೆಸುತ್ತಿದ್ದೇವೆ. ವರದಿ ಸಿದ್ಧವಾದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ

– ಅಮರೇಶ್ ತುಂಬಗಿ, ಹೆಚ್ಚುವರಿ ಔಷಧ ನಿಯಂತ್ರಕ


24

ಜು.9ರಂದು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದವರು

02

ಶಸ್ತ್ರಚಿಕಿತ್ಸೆ ಬಳಿಕ ಸಂಪೂರ್ಣ ಗುಣಮುಖರಾದವರು

12

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು

05

ಶಾಶ್ವತ ಅಂಧತ್ವಕ್ಕೆ ಒಳಗಾಗುವ ಭೀತಿ ಎದುರಿಸುತ್ತಿರುವವರು

ಪ್ರತಿಕ್ರಿಯಿಸಿ: ವಾಟ್ಸ್‌ಆ್ಯಪ್‌ ಸಂಖ್ಯೆ:95133 22930

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.