ಬೆಂಗಳೂರು: ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ‘ಮಿರಾಜ್–2000’ ಯುದ್ಧ ವಿಮಾನ ಸ್ಫೋಟಗೊಂಡು ಪೈಲಟ್‌ಗಳಾದ ಸಿದ್ಧಾರ್ಥ್ ನೇಗಿ (31) ಹಾಗೂ ಸಮೀರ್ ಅಬ್ರಾಲ್ (33) ಮೃತಪಟ್ಟಿದ್ದಾರೆ.
ಪೈಲಟ್‌ಗಳು ಬೆಳಿಗ್ಗೆ 10.30ರ ಸುಮಾರಿಗೆ ಪ್ರಾಯೋಗಿಕವಾಗಿ ವಿಮಾನ ಹಾರಾಟ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಡೆಹ್ರಾಡೂನ್‌ನನೇಗಿ 2009ರ ಜೂನ್‌ನಲ್ಲಿ ಹಾಗೂ ಗಾಜಿಯಾಬಾದ್‌ನ ಸಮೀರ್ 2008ರ ಜೂನ್‌ನಲ್ಲಿ ಸ್ಕ್ವಾಡ್ರನ್ ಲೀಡರ್‌ಗಳಾಗಿ ಭಾರತೀಯ ವಾಯುಸೇನೆ (ಐಎಎಫ್) ಸೇರಿದ್ದರು.
ಟೇಕ್ ಆಫ್ ಆಗಲಿಲ್ಲ: ರನ್‌ವೇನಲ್ಲಿ ವೇಗವಾಗಿ ಬಂದ ವಿಮಾನವು ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಟೇಕ್ ಆಫ್ ಆಗಲಿಲ್ಲ. ಇದರಿಂದ ನೆಲದ ಮೇಲೇ ಸಾಗಿ ಬಂದು, ಮುಂದೆ ಇದ್ದ ಕಾಂಪೌಂಡ್‌ಗೆ ಡಿಕ್ಕಿ ಹೊಡೆಯಿತು. ನಂತರ ಸುಮಾರು 50 ಅಡಿಯ ಹಳ್ಳಕ್ಕೆ ಬಿದ್ದು ಸ್ಫೋಟಗೊಂಡಿತು.
ದೋಷ ಕಾಣಿಸಿಕೊಂಡಾಗಲೇ ಪೈಲಟ್‌ಗಳು ಎಜೆಕ್ಟ್ ಬಟನ್ ಒತ್ತಿ ಹೊರಗೆ ಜಿಗಿದರು. ಆದರೆ, ಪ್ಯಾರಚೂಟ್‌ಗಳು ತೆರೆದುಕೊಳ್ಳದ ಕಾರಣ ಹೊತ್ತಿ ಉರಿಯುತ್ತಿದ್ದ ವಿಮಾನದ ಅವಶೇಷಗಳ ಮೇಲೆಯೇಸಮೀರ್ ಬಿದ್ದರು. ಇನ್ನು ಅಷ್ಟು ಎತ್ತರದಿಂದ ನೆಲಕ್ಕೆ ಬಿದ್ದಿದ್ದರಿಂದ ನೇಗಿ ಅವರಿಗೂ ಗಂಭೀರ ಗಾಯಗಳಾದವು.
ಸ್ಫೋಟದ ಶಬ್ದಕ್ಕೆ ಸ್ಥಳೀಯರೂ ಬೆಚ್ಚಿ ಬಿದ್ದರು. ವಿಮಾನ ಬಿದ್ದ ಸ್ಥಳದಲ್ಲಿ ಪೊದೆಗಳಿದ್ದ ಕಾರಣ ಕೆಲವೇ ಕ್ಷಣಮಾತ್ರದಲ್ಲಿ ಬೆಂಕಿ ಹೊತ್ತಿಕೊಂಡು ವಾತಾವರಣದಲ್ಲಿ ದಟ್ಟ ಹೊಗೆ ಆವರಿಸಿತು. ತಕ್ಷಣ ಸ್ಥಳೀಯರು ಕಾಂಪೌಂಡ್ ಜಿಗಿದು ರಕ್ಷಣೆಗೆ ಓಡಿ ಬಂದರು. ಎಚ್‌ಎಎಲ್ ಆವರಣದಲ್ಲೇ ಇರುವ ಅಗ್ನಿಶಾಮಕ ಠಾಣೆ ಸಿಬ್ಬಂದಿಯೂ ಧಾವಿಸಿದರು.
ಎಚ್‌ಎಎಲ್ ವೈದ್ಯರು ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ಹತ್ತಿರದ ಕಮಾಂಡೊ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾರ್ಗಮಧ್ಯೆ ಸಮೀರ್ ಕೊನೆಯುಸಿರೆಳೆದರೆ, ಚಿಕಿತ್ಸೆಗೆ ಸ್ಪಂದಿಸದೆ ನೇಗಿ ಕೂಡ ಸ್ವಲ್ಪ ಸಮಯದಲ್ಲೇ ಪ್ರಾಣ ಕಳೆದುಕೊಂಡರು.
ಕಾರ್ಗಿಲ್ ವಿಮಾನ: ‘ಮಿರಾಜ್–2000 ವಿಮಾನವನ್ನು ಕಾರ್ಗಿಲ್ ಯುದ್ಧದಲ್ಲಿ ಬಳಸಲಾಗಿತ್ತು. ಅದಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಎಂಜಿನ್‌ಗಳನ್ನು ಅಳವಡಿಸಿ ಪ್ರಾಯೋಗಿಕವಾಗಿ ಹಾರಾಟ ನಡೆಸಲಾಗುತ್ತದೆ. ಈ ಪ್ರಕ್ರಿಯೆ ನಿರಂತರವಾಗಿರುತ್ತದೆ. ಅಂತೆಯೇ ಎಚ್‌ಎಎಲ್‌ನ ‘ಏರ್‌ಕ್ರಾಫ್ಟ್ ಆ್ಯಂಡ್ ಸಿಸ್ಟಮ್ ಟೆಸ್ಟಿಂಗ್ ಎಸ್ಟಾಬ್ಲಿಷ್‌ಮೆಂಟ್’ನಲ್ಲಿ ಪೈಲಟ್‌ಗಳಾಗಿದ್ದ ನೇಗಿ ಹಾಗೂ ಸಮೀರ್ ಅವರು ಬೆಳಿಗ್ಗೆ ಪ್ರಯೋಗಾರ್ಥ ಹಾರಾಟಕ್ಕೆ ಮುಂದಾಗಿದ್ದರು’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ರಸ್ತೆಗೇ ನುಗ್ಗುತ್ತಿತ್ತು: ‘ಒಂದು ವೇಳೆ ಕಾಂಪೌಂಡ್ ಇರದಿದ್ದರೆ ವಿಮಾನ ನೇರವಾಗಿ ರಸ್ತೆಗೇ ನುಗ್ಗಿಬಿಡುತ್ತಿತ್ತು. ಹಾಗೆ ಆಗಿದ್ದರೆ, ವಾಹನ ದಟ್ಟಣೆಯಿಂದ ಕೂಡಿದ್ದ ಈ ರಸ್ತೆಯಲ್ಲಿ ಹೆಚ್ಚು ಜೀವಹಾನಿಗಳು ಸಂಭವಿಸುತ್ತಿದ್ದವು’ ಎಂದು ಪ್ರತ್ಯಕ್ಷದರ್ಶಿ ಎಲ್.ಶ್ರೀನಿವಾಸ್ ಹೇಳಿದರು.
‘ಸ್ಫೋಟದ ಸದ್ದು ಸುಮಾರು ಮೂರ್ನಾಲ್ಕು ಕಿ.ಮೀನಷ್ಟು ದೂರದವರೆಗೂ ಕೇಳಿಬಂದಿತ್ತು. ಆ ಶಬ್ದ ಕೇಳಿ ಏನೋ ದೊಡ್ಡ ಅನಾಹುತ ಆಗಿರಬಹುದೆಂದು ಎಚ್‌ಎಎಲ್ ನೌಕರರಿಗೆ ಕರೆ ಮಾಡಿ ವಿಚಾರಿಸಿದೆವು. ವಿಮಾನ ಸ್ಫೋಟಗೊಂಡಿರುವುದಾಗಿ ಅವರು ಹೇಳಿದರು. ತಕ್ಷಣ ಉಪವಿಭಾಗದ ಆರೂ ಠಾಣೆಗಳಿಗೂ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸುವಂತೆ ಮಾಹಿತಿ ಕೊಟ್ಟು, ಸ್ಥಳಕ್ಕೆ ತೆರಳಿದೆವು. ಅಷ್ಟರಲ್ಲಾ
ಗಲೇ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಕಾರ್ಯಾಚರಣೆ ಪ್ರಾರಂಭಿಸಿದ್ದರು’ ಎಂದು ಪೊಲೀಸರು ವಿವರಿಸಿದರು.
‘2019ರ ಏರ್ ಶೋ’ಗೆ (ಫೆ.20 ರಿಂದ ಫೆ.24) ದಿನಗಣನೆ ಶುರುವಾಗಿದ್ದು, ಆ ಪ್ರದರ್ಶನ ಸಂಘಟಿಸುವಲ್ಲಿ ಎಚ್‌ಎಎಲ್ ಪ್ರಮುಖ ಪಾತ್ರವಹಿಸಿದೆ. ಇದರ ಬೆನ್ನಲ್ಲೇ ದೊಡ್ಡ ದುರಂತ ಸಂಭವಿಸಿದೆ.
ರಸ್ತೆಗೆ ಬಿತ್ತು ಪೈಲಟ್ ಸೀಟು!: ಎಜೆಕ್ಟ್ ಬಟನ್ ಒತ್ತುತ್ತಿದ್ದಂತೆಯೇ ಪೈಲಟ್‌ಗಳು ಸೀಟುಗಳ ಸಮೇತ ಹೊರಗೆ ಬಂದಿದ್ದಾರೆ. ಆನಂತರ ಪೈಲಟ್‌ಗಳು ಕೆಳಗೆ ಬಿದ್ದರೆ, ಸೀಟುಗಳು ಬೇರೆ ದಿಕ್ಕಿಗೆ ಹಾರಿವೆ. ಒಂದು ಸೀಟು ಸುಮಾರು 300 ಮೀಟರ್ ದೂರದ ಯಮಲೂರು ಮುಖ್ಯರಸ್ತೆಗೆ ಬಂದು ಬಿದ್ದಿತ್ತು. ಎಚ್‌ಎಎಲ್ ಅಧಿಕಾರಿಗಳು ಅದನ್ನು ವಶಕ್ಕೆ ಪಡೆದು, ಪ್ರಯೋಗಾಲಯಕ್ಕೆ ಕಳುಹಿಸಿದರು.
ವಿಮಾನ ದುರಂತದಕಹಿ ನೆನಪುಗಳು
1990, ಏ.4: ದೆಹಲಿಯಿಂದ 93 ಪ್ರಯಾಣಿಕರನ್ನು ಕರೆದುಕೊಂಡು ಎಚ್‌ಎಎಲ್ ನಿಲ್ದಾಣಕ್ಕೆ ಬರುತ್ತಿದ್ದ ‘ಏರ್‌ಬಸ್–320’ ವಿಮಾನ, ರನ್‌ವೇನಲ್ಲೇ ಹೊತ್ತಿ ಉರಿದಿತ್ತು. ಒಬ್ಬ ಪ್ರಯಾಣಿಕ ತುರ್ತು ನಿರ್ಗಮನ ದ್ವಾರದ ಮೂಲಕ ಆಚೆ ಬಂದಿದ್ದನ್ನು ಬಿಟ್ಟರೆ, ಉಳಿದವರೆಲ್ಲ ಸಜೀವ ದಹನವಾಗಿದ್ದರು.
1991, ಮಾರ್ಚ್ 25: ಯಲಹಂಕ ವಾಯುನೆಲೆಯಲ್ಲಿ 86 ಪೈಲಟ್‌ಗಳಿಗೆ ತರಬೇತಿ ನೀಡಲಾಗುತ್ತಿತ್ತು. ಮೊದಲ ಬ್ಯಾಚ್‌ನಲ್ಲಿ 26 ಅಧಿಕಾರಿಗಳು ವಿಮಾನದಲ್ಲಿ ಹೋಗುತ್ತಿದ್ದಾಗ ಅದು ನೆಲಕ್ಕಪ್ಪಳಿಸಿ ಅಷ್ಟೂ ಮಂದಿ ಜೀವ ತೆತ್ತಿದ್ದರು.
2005, ಅ.26: ಎಚ್‌ಎಎಲ್ ವಿಮಾನ ನಿಲ್ದಾಣದಲ್ಲೇ ‘ಎಂಐಜಿ–21’ ವಿಮಾನ ಸ್ಫೋಟಗೊಂಡು ಸ್ಕ್ವಾಡ್ರನ್ ಲೀಡರ್ ಕೆ.ಆರ್.ಮೂರ್ತಿ ಮೃತಪಟ್ಟಿದ್ದರು. ಇನ್ನೊಬ್ಬ ಪೈಲಟ್ ಕೆ.ಡಿ.ಭಟ್ ಅವರು ಎಜೆಕ್ಟ್ ಬಟನ್ ಒತ್ತಿ ಸುರಕ್ಷಿತವಾಗಿ ಹೊರಬಂದಿದ್ದರು.
2007, ಫೆ.2: ಯಲಹಂಕ ವಾಯುನೆಲೆಯಲ್ಲಿ ‘ಧ್ರುವ್’ ವಿಮಾನ ದುರಂತಕ್ಕೀಡಾಗಿ ಪೈಲಟ್ ಪ್ರಿಯಾ ಶರ್ಮಾ ಮೃತಪಟ್ಟು, ಅವರ ಜತೆಗಿದ್ದ ವಿಂಗ್ ಕಮಾಂಡರ್ ವಿ.ಜೇಟ್ಲಿ ಗಾಯಗೊಂಡಿದ್ದರು.
2009, ಜೂನ್ 6: ಬಿಡದಿ ಬಳಿ ಸುಧಾರಿತ ‘ಸಾರಸ್’ ಯುದ್ಧ ವಿಮಾನ ನೆಲಕ್ಕುರುಳಿ ವಿಂಗ್ ಕಮಾಂಡರ್ ಪ್ರವೀಣ್ ಕೋಟೆಕೊಪ್ಪ, ದೀಪೇಶ್ ಶಾ ಮತ್ತು ಟೆಸ್ಟ್ ಎಂಜಿನಿಯರ್ ಮುಖ್ಯಸ್ಥ ಇಳಯರಾಜ ಮೃತಪಟ್ಟಿದ್ದರು.
ಮಣ್ಣೆರಚಿ ಬೆಂಕಿ ನಂದಿಸುವ ಯತ್ನ
‘ಸ್ಫೋಟದ ಸದ್ದು ಕೇಳಿ ಯಾರೋ ಜಿಲೆಟಿನ್ ಬಳಸಿ ಬಂಡೆ ಸಿಡಿಸುತ್ತಿರಬಹುದೆಂದು ಭಾವಿಸಿದೆ. ನೋಡ ನೋಡುತ್ತಿದ್ದಂತೆಯೇ ಇಡೀ ವಾತಾವರಣದಲ್ಲಿ ಹೊಗೆ ಆವರಿಸಿತು. ತಕ್ಷಣ ಕಾಂಪೌಂಡ್ ಹಾರಿ ಒಳಗೆ ಓಡಿದೆ. ನನ್ನ ಹಿಂದೆ ಸ್ಥಳೀಯ ಹುಡುಗರೂ ಬಂದರು. ಸೇನಾ ಸಮವಸ್ತ್ರದಲ್ಲಿದ್ದ ವ್ಯಕ್ತಿ (ನೇಗಿ) ಕೆಳಗೆ ಬಿದ್ದು ಒದ್ದಾಡುತ್ತಿದ್ದರು’ ಎಂದು ಶೇಖ್ ಇರ್ಫಾನ್ ವಿವರಿಸಿದರು.
‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಒಬ್ಬರ (ಸಮೀರ್) ದೇಹಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಕೆಲ ಹುಡುಗರು ಅವರ ಮೇಲೆ ಮಣ್ಣು ಎರಚಿ ಬೆಂಕಿ ನಂದಿಸಲು ಯತ್ನಿಸುತ್ತಿದ್ದರು. ನಾನು ಹಾಗೂ ಇನ್ನೊಬ್ಬ ಮಹಿಳೆ ಇನ್ನೊಬ್ಬರ ರಕ್ಷಣೆಗೆ ಮುಂದಾದೆವು. ಉಸಿರಾಟ ಸಹಜ ಸ್ಥಿತಿಗೆ ಬರಲೆಂದು ಎದೆಯನ್ನು ಒತ್ತುತ್ತಿದ್ದೆವು. ಸ್ವಲ್ಪ ಸಮಯದಲ್ಲೇ ವೈದ್ಯರು ಬಂದು ತಪಾಸಣೆ ನಡೆಸಿದರು. ಆ ನಂತರ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಯತ್ತ ಕರೆದೊಯ್ಯಲಾಯಿತು. ಆದರೆ, ಇಬ್ಬರೂ ಬದುಕುಳಿಯಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.