ಬೆಂಗಳೂರು: ರಿಯಲ್ ಎಸ್ಟೇಟ್ ಕಂಪನಿಗೆ ಸೇರಿದ್ದ ₹17 ಕೋಟಿ ದುರ್ಬಳಕೆ ಮಾಡಿಕೊಂಡ ಆರೋಪದಡಿ ಅದೇ ಕಂಪನಿಯ ಅಧೀಕ್ಷಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಹರಿಕೃಷ್ಣ ರೆಡ್ಡಿ, ಕರುಣಾನಿಧಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಹರಿಕೃಷ್ಣ ರೆಡ್ಡಿ ಅವರಿಂದ ಚಿನ್ನಾಭರಣ ಹಾಗೂ ಮನೆಯ ದಾಖಲೆ ಪತ್ರ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ಮೆ/ಎಸ್ ಪ್ರಾಪ್ಕೇರ್ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಹರಿಕೃಷ್ಣ ರೆಡ್ಡಿ ಅವರು 2018ರಿಂದ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಕಂಪನಿಯು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಯಲ್ಲಿ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಮಾಡಲು ಇ–ಬ್ಯಾಂಕಿಂಗ್ ಸೌಲಭ್ಯ ಪಡೆದುಕೊಂಡಿತ್ತು. ಕಂಪನಿಯ ಖಾತೆ ನಿರ್ವಹಣೆ ಜವಾಬ್ದಾರಿಯನ್ನು ಹರಿಕೃಷ್ಣ ರೆಡ್ಡಿ ಅವರಿಗೆ ವಹಿಸಲಾಗಿತ್ತು. ಹರಿಕೃಷ್ಣ ರೆಡ್ಡಿ ಮತ್ತು ಇತರರು ಸೇರಿಕೊಂಡು ಕಂಪನಿಯ ಬ್ಯಾಂಕಿಂಗ್ ಐ.ಡಿ ಹಾಗೂ ಪಾಸ್‌ವರ್ಡ್ ಬಳಸಿಕೊಂಡು 2020ರಿಂದ 2023ರವರೆಗೆ ಬೇರೆ ಬೇರೆ ಕಂಪನಿಗಳಿಗೆ ನೀಡಬೇಕಾದ ಸುಮಾರು ₹17 ಕೋಟಿಯನ್ನು ಅನ್ಯ ವ್ಯಕ್ತಿಗಳಿಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಕಂಪನಿ ನಿರ್ದೇಶಕ ಮೆಥುಕು ಶ್ರೀನಿವಾಸ್ ಅವರು ಸಿಸಿಬಿಗೆ ದೂರು ನೀಡಿದ್ದರು. ದೂರು ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
100ಕ್ಕೂ ಹೆಚ್ಚಿನ ಪಬ್ ಮಾಲೀಕರು ಮತ್ತು ವ್ಯವಸ್ಥಾಪಕರ ಖಾತೆಗಳಿಗೆ ಆರೋಪಿಗಳು ಸ್ವಲ್ಪ ಪ್ರಮಾಣದ ಹಣ ವರ್ಗಾವಣೆ ಮಾಡಿದ್ದರು. ನಂತರ, ಆರೋಪಿಗಳು ಪಬ್‌ಗೆ ತೆರಳಿ ಪಾರ್ಟಿ ನಡೆಸುತ್ತಿದ್ದರು. ಪಬ್ ಮಾಲೀಕರನ್ನು ವಿಚಾರಣೆ ನಡೆಸಿ ಹಣ ಜಪ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ. ಗೋವಾ ಹಾಗೂ ಮುಂಬೈ ಮೂಲದ ಪಬ್‌ಗಳಿಗೆ ಬಹುತೇಕ ಮೊತ್ತ ವರ್ಗಾವಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.