ಬೆಂಗಳೂರು: ‘ಉಬರ್ ಕ್ಯಾಬ್ ಚಾಲಕನೊಬ್ಬ ಪ್ರಯಾಣದ ವೇಳೆ ನನ್ನ ಎದುರು ಅಸಭ್ಯವಾಗಿ ವರ್ತಿಸಿದ್ದಾನೆ’ ಎಂದು ಆರೋಪಿಸಿ ಯುವತಿಯೊಬ್ಬರು ಲಿಂಕ್ಡ್‌ಇನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.
ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ‘ಸಂಬಂಧಪಟ್ಟ ಠಾಣೆಗೆ ನಿಮ್ಮ ದೂರು ತಿಳಿಸಲಾಗಿದೆ. ಪೊಲೀಸರ ಎದುರು ಹೇಳಿಕೆ ನೀಡಿ, ಕ್ರಮ ಕೈಗೊಳ್ಳುತ್ತಾರೆ’ ಎಂದಿದ್ದಾರೆ. ಆದರೆ, ಗುರುವಾರ ಸಂಜೆಯವರೆಗೂ ಯುವತಿ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ.
ಯುವತಿಯ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಉಬರ್ ಕಂಪನಿ ಪ್ರತಿನಿಧಿ, ‘ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತಪ್ಪಿತಸ್ಥ ಚಾಲಕನನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಪ್ರಯಾಣಿಕರ ಸುರಕ್ಷತೆಗೆ ಕ್ರಮ ತೆಗೆದುಕೊಂಡಿದ್ದೇವೆ’ ಎಂದಿದ್ದಾರೆ.
ಆಗಿದ್ದೇನು: ‘ಬಿಟಿಎಂ ಎರಡನೇ ಹಂತದಿಂದ ಜೆ.ಪಿ.ನಗರ ಮೆಟ್ರೊ ನಿಲ್ದಾಣಕ್ಕೆ ಹೋಗಲು ಕ್ಯಾಬ್ ಕಾಯ್ದಿರಿಸಿದ್ದೆ. ಸ್ಥಳಕ್ಕೆ ಬಂದಿದ್ದ ಚಾಲಕ, ಕ್ಯಾಬ್‌ನಲ್ಲಿ ಹತ್ತಿಸಿಕೊಂಡು ಜೆ.ಪಿ. ನಗರದತ್ತ ಹೊರಟಿದ್ದೆ. ಮಾರ್ಗಮಧ್ಯೆ ಚಾಲಕ ಅಸಭ್ಯವಾಗಿ ವರ್ತಿಸಿದ್ದ’ ಎಂದು ಯುವತಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.
‘ಚಾಲಕನ ವರ್ತನೆಯಿಂದ ಗಾಬರಿಯಾದೆ. ನಿಗದಿತ ಸ್ಥಳಕ್ಕೆ ಬಿಡುವಂತೆ ಚಾಲಕನನ್ನು ಒತ್ತಾಯಿಸಿದೆ. ಆತ, ನಿಗದಿತ ಸ್ಥಳಕ್ಕೆ ಹೋಗಿ ಕ್ಯಾಬ್ ನಿಲ್ಲಿಸಿದ. ಹಣ ನೀಡಲು ಹೋದಾಗ, ಚಾಲಕ ತನ್ನ ಖಾಸಗಿ ಅಂಗಾಂಗ ತೋರಿಸಿ ಅಸಭ್ಯವಾಗಿ ವರ್ತಿಸಲಾರಂಭಿಸಿದ್ದ. ಮತ್ತಷ್ಟು ಹೆದರಿ, ಸ್ಥಳದಿಂದ ಓಡಿಬಂದೆ’ ಎಂದು ಯುವತಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.