ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಸವನಹಳ್ಳಿಯ ಮಾರಮ್ಮ ದೇವಸ್ಥಾನದ ಬಳಿ ಬುಧವಾರ ರಾತ್ರಿ ಕಾರೊಂದನ್ನು ಅಡ್ಡಗಟ್ಟಿ ಗಾಜು ಪುಡಿ ಮಾಡಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
‘ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ಚಿಕ್ಕನಾಯಕನಹಳ್ಳಿಯಲ್ಲಿ ನೆಲಸಿರುವ ಐ.ಟಿ ಕಂಪನಿ ಉದ್ಯೋಗಿ ಅನೂಪ್ ಜಾರ್ಜ್(39) ಅವರು ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆಗೆ ದೀಪಾವಳಿ ಹಬ್ಬದ ಖರೀದಿಗೆಂದು ಕಾರಿನಲ್ಲಿ ಬರುತ್ತಿದ್ದರು. ಕಸವನಹಳ್ಳಿ ಬಳಿ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿದ್ದರು. ಅನೂಪ್ ಅವರು ಕಾರು ನಿಲುಗಡೆ ಮಾಡಿ ವಿಚಾರಿಸಿದ್ದರು. ಅಷ್ಟರಲ್ಲಿ ಕಲ್ಲಿನಿಂದ ಹಿಂದಿನ ಗಾಜು ಪುಡಿ ಮಾಡಿದ್ದರು. ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಮಕ್ಕಳಿಗೆ ಗಾಯವಾಗಿದೆ. ಐದು ವರ್ಷದ ಮಗುವಿನ ತಲೆಗೆ ಪೆಟ್ಟು ಬಿದ್ದಿದೆ’ ಎಂದು ಮೂಲಗಳು ತಿಳಿಸಿವೆ.
‘ಮುಂದೆಯೇ ಮತ್ತೊಂದು ವಾಹನ ಚಲಿಸುತ್ತಿತ್ತು. ಅವರು ವಾಹನ ನಿಲುಗಡೆ ಮಾಡದೇ ತೆರಳಿದರು. ನಾವು ಬರುತ್ತಿದ್ದ ಕಾರು ಅಡ್ಡಗಟ್ಟಿ ಕೃತ್ಯ ಎಸಗಿದರು’ ಎಂದು ಅನೂಪ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.