ADVERTISEMENT

ಹಳೇ ಕಾಮಗಾರಿಗೆ ಶಾಸಕರ ಶಂಕುಸ್ಥಾಪನೆ: ಆರೋಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 21:54 IST
Last Updated 26 ಜನವರಿ 2024, 21:54 IST

ನೆಲಮಂಗಲ: ಈಗಿನ ಸರ್ಕಾರದಲ್ಲಿ ಯಾವುದೇ ಅನುದಾನ ಮಂಜೂರಾಗಿಲ್ಲ, ಹಿಂದಿನ ಸರ್ಕಾರ 2022ರಲ್ಲಿ ಮಂಜೂರು ಮಾಡಿದ್ದ ಕಾಮಗಾರಿಗಳಿಗೆ ಶಾಸಕ ಎನ್‌. ಶ್ರೀನಿವಾಸ್ ಮತ್ತೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಶ್ರೀನಿವಾಸಮೂರ್ತಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸ ಕಾಮಗಾರಿ ಮಂಜೂರು ಆಗಿದ್ದರೆ ಅದರ ಪತ್ರವನ್ನು ತೋರಿಸಲಿ’ ಎಂದು ಸವಾಲು ಹಾಕಿದರು.

‘ನನ್ನ ವಯಸ್ಸಿಗಾದರೂ ಶಾಸಕರು ಮರ್ಯಾದೆ ಕೊಡಲಿ. ಏಕವಚನದಲ್ಲಿ ಬಾಯಿಗೆ ಬಂದಹಾಗೆ ಮಾತನಾಡುವುದನ್ನು ನಿಲ್ಲಿಸಲಿ. ರಕ್ತಮಂಗಲ ಎಂದು ಕುಖ್ಯಾತಿ ಪಡೆದಿದ್ದ ನೆಲಮಂಗಲವನ್ನು ನನ್ನ ಅವಧಿಯಲ್ಲಿ ನೆಮ್ಮದಿಯಿಂದ ಬಾಳುವಂತೆ ಮಾಡಿದ್ದೆ’ ಎಂದು ಹೇಳಿದರು.

ADVERTISEMENT

’ಅಧಿಕಾರಿಗಳಿಗೆ ಏಕವಚನದಲ್ಲಿ ಬೈಯುತ್ತಿದ್ದಾರೆ, ಅಮಾನತು ಮಾಡಿಸುತ್ತಿದ್ದಾರೆ. ತೊಂದರೆ ಕೊಡುವುದು ಹೀಗೆ ಮುಂದುವರಿದರೆ ಹೋರಾಟ ಮಾಡಬೇಕಾಗುತ್ತದೆ. ಹಾಡ ಹಗಲೇ ಕಳ್ಳತನಗಳಾಗುತ್ತಿವೆ. ಪೊಲೀಸರನ್ನು ತಮ್ಮ ಹಿಂದೆ ಓಡಾಡಲು ಬಳಸಿಕೊಳ್ಳುವುದನ್ನು ಬಿಟ್ಟು ಕೆಲಸ ಮಾಡಲು ಬಿಡಲಿ. ಅಪರಾಧ ಪ್ರಕರಣಗಳು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಿ‘ ಎಂದು ಸಲಹೆ ನೀಡಿದರು.

ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಟಿ. ತಿಮ್ಮರಾಯಪ್ಪ, ಮುಖಂಡರಾದ ಎಲ್‌.ಜಿ.ಕೃಷ್ಣಪ್ಪ, ಗಂಗಣ್ಣ, ರಾಜಣ್ಣ, ವಕೀಲರ ಸಂಘದ ಕಾರ್ಯದರ್ಶಿ ನಾಗೇಂದ್ರ, ಆಂಜಿನಪ್ಪ, ನಾರಾಯಣರಾವ್‌, ನಗರಸಭೆ ಸದಸ್ಯ ಶಿವಕುಮಾರ್‌, ಮಾಜಿ ಸದಸ್ಯ ಸೀತಾರಾಮು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.