ಬೆಂಗಳೂರು: ‘ರಾಜ್ಯ ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಪರವಾಗಿ ಕೆಪಿಎಸ್‌ಸಿ (ಉದ್ಯೋಗಸೌಧ) ಮುಂಭಾಗದಲ್ಲಿ ‘ಒಳಜಗಳ ಸಾಕು, ನ್ಯಾಯ ಬೇಕು’ ಎಂದು ಆಗ್ರಹಿಸಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಧರಣಿ ಕುಳಿತುಕೊಳ್ಳುತ್ತೇನೆ’ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಸೋಮವಾರ ಬರೆದುಕೊಂಡಿರುವ ಅವರು, ‘ಕೆಪಿಎಸ್‌ಸಿ ಕಾರ್ಯವೈಖರಿಯಿಂದ ನೊಂದಿರುವ 150ಕ್ಕೂ ಹೆಚ್ಚು ಯುವಕರು ಮತ್ತು ಯುವತಿಯರು ಸೋಮವಾರ ಬೆಳಿಗ್ಗೆ ನನ್ನ ಮನೆಗೆ ಬಂದಿದ್ದರು. ಅವರ ಪರಿಸ್ಥಿತಿ ವಿವರಿಸಿ ಈಗಾಗಲೇ ಮುಖ್ಯಮಂತ್ರಿಗೆ ಎರಡು ಪತ್ರ ಬರೆದಿದ್ದೇನೆ. ಆಯೋಗದ ಅಧ್ಯಕ್ಷ, ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದೇನೆ. ಮುಖ್ಯಮಂತ್ರಿಯ ಕಾರ್ಯದರ್ಶಿಗೂ ವಿಚಾರ ತಿಳಿಸಿದ್ದೇನೆ. ಸಚಿವರಾದ ಕೆ.ಜೆ. ಜಾರ್ಜ್ ಅವರಿಗೂ ವಿವರಿಸಿದ್ದೇನೆ’ ಎಂದಿದ್ದಾರೆ.
‘ಉದ್ಯೋಗ ಸೌಧ ಎಂದು ಹೆಸರು ಇಟ್ಟುಕೊಂಡಿರುವ ಕೆಪಿಎಸ್‌ಸಿ ಕಟ್ಟಡದಿಂದ ಯುವಕರಿಗೆ ನಿರಂತರ ಅನ್ಯಾಯವಾಗುತ್ತಿದೆ. ಆಯೋಗದ ಅಧ್ಯಕ್ಷರ ವಿಶ್ವಾಸದ ಮಾತು, ಕಾರ್ಯದರ್ಶಿ ಸಹಕರಿಸುತ್ತಿಲ್ಲ ಎಂಬ ಆರೋಪ ಇದ್ಯಾವುದೂ ಸಂತ್ರಸ್ತ ಯುವಕರಿಗೆ ಬೇಕಾಗಿಲ್ಲ. ಅವರಿಗೆ ನ್ಯಾಯಬೇಕಿದೆ. ಹೀಗಾಗಿ, ಯುವ ಸಮೂಹದ ಪರವಾಗಿ ನ್ಯಾಯ ಕೇಳಲು ನಾನೇ ಧರಣಿ ಕುಳಿತುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.