ADVERTISEMENT

ಪರಿಷತ್ ಚುನಾವಣೆ | ಅಭ್ಯರ್ಥಿ ಆಯ್ಕೆ: ಸಿದ್ದರಾಮಯ್ಯ, ಡಿಕೆಶಿ ಇಂದು ದೆಹಲಿಗೆ

​ಪ್ರಜಾವಾಣಿ ವಾರ್ತೆ
Published 28 ಮೇ 2024, 3:30 IST
Last Updated 28 ಮೇ 2024, 3:30 IST
<div class="paragraphs"><p>ಸಂಗ್ರಹ ಚಿತ್ರ</p></div>

ಸಂಗ್ರಹ ಚಿತ್ರ

   

ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊರಕಲಿರುವ ಏಳು ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ವರಿಷ್ಠರ ಜತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಂಗಳವಾರ ದೆಹಲಿಗೆ ತೆರಳುವರು.

11 ಸ್ಥಾನಗಳ ಪೈಕಿ ಏಳು ಕಾಂಗ್ರೆಸ್‌ಗೆ ದೊರಕಲಿದ್ದು, ಬಿಜೆಪಿಗೆ ಮೂರು ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ದೊರಕಲಿವೆ. ಏಳು ಸ್ಥಾನಗಳಿಗೆ ಕಾಂಗ್ರೆಸ್‌ನಲ್ಲಿ 75ಕ್ಕೂ ಹೆಚ್ಚು ಆಕಾಂಕ್ಷಿ ಗಳಿದ್ದಾರೆ. ನಿವೃತ್ತಿಯಾಗುತ್ತಿರುವ ನಾಲ್ವರಲ್ಲಿ ಕೆಲವರು ಮತ್ತೊಂದು ಅವಧಿಗೆ ಮುಂದುವರಿಸುವಂತೆ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದಾರೆ.

ADVERTISEMENT

‘ವಿವಿಧ ಸಂದರ್ಭಗಳಲ್ಲಿ ಪಕ್ಷದ 20ಕ್ಕೂ ಹೆಚ್ಚು ಮುಖಂಡರಿಗೆ ವಿಧಾನಪರಿಷತ್‌ ಸದಸ್ಯ ಸ್ಥಾನ ನೀಡುವುದಾಗಿ ವರಿಷ್ಠರು ಭರವಸೆ ನೀಡಿದ್ದರು. ಆ ಪಟ್ಟಿ ಹಾಗೂ ವಿಧಾನ ಪರಿಷತ್‌ ಸದಸ್ಯ ಸ್ಥಾನದ ಆಕಾಂಕ್ಷಿಗಳಾಗಿರುವವರ ಪಟ್ಟಿಗಳೊಂದಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಎಐಸಿಸಿ ಪ್ರಮುಖರನ್ನು ಭೇಟಿ ಮಾಡಲಿದ್ದಾರೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಮತ್ತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಜತೆ ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಆಕಾಂಕ್ಷಿಗಳೂ ದೆಹಲಿಯತ್ತ:

ಪರಿಷತ್‌ ಸದಸ್ಯ ಸ್ಥಾನದ ಆಕಾಂಕ್ಷಿಗಳಾಗಿರುವ ಕೆಲವರು ಈಗಾಗಲೇ ದೆಹಲಿ ತಲುಪಿದ್ದು, ಹೈಕಮಾಂಡ್‌ ಪ್ರಮುಖರ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ. ಅಭ್ಯರ್ಥಿಗಳ ಆಯ್ಕೆಗಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ದೆಹಲಿಗೆ ಹೊರಟಿರುವುದು ತಿಳಿಯುತ್ತಿದ್ದಂತೆ ಮತ್ತಷ್ಟು ಮಂದಿ ಆಕಾಂಕ್ಷಿಗಳು ರಾಷ್ಟ್ರ ರಾಜಧಾನಿಯತ್ತ ದೌಡಾಯಿಸುತ್ತಿದ್ದಾರೆ.

ಎರಡು ದಿನಗಳ ಕಾಲ ಚರ್ಚೆ ನಡೆಯಲಿದ್ದು, ಬುಧವಾರ ಸಂಜೆಯ ವೇಳೆಗೆ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಆ ಬಳಿಕ ಇಬ್ಬರೂ ವಾಪಸಾಗ ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಪಟ್ಟಿ ಸಿದ್ದ?: ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಿದ್ದು, ಮಂಗಳವಾರ ಅಭ್ಯರ್ಥಿ ಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಮೂರು ಸ್ಥಾನಗಳಿಗೆ 40 ಆಕಾಂಕ್ಷಿ ಗಳಿದ್ದು, 12 ಮಂದಿಯ ಪಟ್ಟಿಯೊಂದನ್ನು ರಾಜ್ಯ ಬಿಜೆಪಿ ದೆಹಲಿಗೆ ಕಳುಹಿಸಿದೆ. ಪಕ್ಷ ನಿಷ್ಠೆ, ಸಾಮಾಜಿಕ ಮತ್ತು ಪ್ರಾದೇಶಿಕ ನ್ಯಾಯವನ್ನು ಪರಿಗಣಿಸಿ ಅಭ್ಯರ್ಥಿಗಳ ಆಯ್ಕೆ ಆಗಲಿದೆ ಎಂದು ಮೂಲಗಳು ಹೇಳಿವೆ.

ಸಲ್ಲಿಕೆಯಾಗದ ನಾಮಪತ್ರ

ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳ ಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

ಸೋಮವಾರ ಚುನಾವಣಾ ಅಧಿಸೂಚನೆ ಪ್ರಕಟಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಜೂನ್‌ 3 ಕೊನೆಯ ದಿನ. ಜೂನ್‌ 4ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜೂನ್‌ 6 ಕೊನೆಯ ದಿನ. ಅಗತ್ಯವಿದ್ದಲ್ಲಿ ಜೂನ್‌ 13ಕ್ಕೆ ಮತದಾನ ನಡೆಯಲಿದೆ.

ಸಭೆ ನಡೆಸದಂತೆ ಮುಖ್ಯ ಚುನಾವಣಾಧಿಕಾರಿ ಸೂಚನೆ

ಲೋಕಸಭಾ ಚುನಾವಣೆ ಮತ್ತು ವಿಧಾನ ಪರಿಷತ್‌ ಚುನಾವಣೆಯ ಪ್ರಯುಕ್ತ ಮಾದರಿ ನೀತಿಸಂಹಿತೆ ಜೂನ್‌ 6ರವರೆಗೂ ಜಾರಿಯಲ್ಲಿದ್ದು, ಅಲ್ಲಿಯವರೆಗೆ ಅಧಿಕಾರಿಗಳ ಸಭೆ ಹಾಗೂ ವಿಡಿಯೊ ಸಂವಾದ ನಡೆಸದಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.

‘ಲೋಕಸಭಾ ಚುನಾವಣೆಯ ನೀತಿಸಂಹಿತೆ ಜೂನ್‌ 4ರವರೆಗೆ ಜಾರಿಯಲ್ಲಿದ್ದು, ವಿಧಾನ ಪರಿಷತ್‌ ಚುನಾವಣೆ ನೀತಿಸಂಹಿತೆ ಜೂನ್‌ 6ರವರೆಗೂ ಜಾರಿಯಲ್ಲಿರಲಿದೆ. ಈ ಮಧ್ಯೆಯೇ ಕೆಲವು ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಸೇರಿದಂತೆ ಇಲಾಖಾ ಮುಖ್ಯಸ್ಥರು ಸಭೆಗಳನ್ನು ನಡೆಸುತ್ತಿದ್ದಾರೆ. ಇದರಿಂದ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಸಿದ್ಧತೆ ಹಾಗೂ ವಿಧಾನ ಪರಿಷತ್‌ ಚುನಾವಣಾ ಕೆಲಸಗಳ ನಿರ್ವಹಣೆಗೆ ಅಡಚಣೆಯಾಗುತ್ತಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರು ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರಿಗೆ ಸೋಮವಾರ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಜೂನ್‌ 6ರವರೆಗೆ ಅಂತಹ ಯಾವುದೇ ಸಭೆ ನಡೆಸಬಾರದು. ತುರ್ತು ಅಗತ್ಯವಿದ್ದರೆ ಮುಖ್ಯ ಚುನಾವಣಾಧಿಕಾರಿಯ ಕಚೇರಿ ಜತೆ ಸಮಾಲೋಚಿಸುವಂತೆ ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

ಬಿಜೆಪಿ ಪಟ್ಟಿ ಸಿದ್ದ?

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಿದ್ದು, ಮಂಗಳವಾರ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಮೂರು ಸ್ಥಾನಗಳಿಗೆ 40 ಆಕಾಂಕ್ಷಿಗಳಿದ್ದು, 12 ಮಂದಿಯ ಪಟ್ಟಿಯೊಂದನ್ನು ರಾಜ್ಯ ಬಿಜೆಪಿ ದೆಹಲಿಗೆ ಕಳುಹಿಸಿದೆ. ಪಕ್ಷ ನಿಷ್ಠೆ, ಸಾಮಾಜಿಕ ಮತ್ತು ಪ್ರಾದೇಶಿಕ ನ್ಯಾಯವನ್ನು ಪರಿಗಣಿಸಿ ಅಭ್ಯರ್ಥಿಗಳ ಆಯ್ಕೆ ಆಗಲಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.