ADVERTISEMENT

ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಅಕ್ಕನ ಕೊಲೆ: ತಂಗಿ ಸ್ನೇಹಿತ ಬಂಧನ

ಮೊಬೈಲ್‌ನಲ್ಲಿ ಹೆಚ್ಚು ಮಾತು: ನಿತ್ಯವೂ ಸಹೋದರಿಯರ ಜಗಳ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 14:39 IST
Last Updated 25 ಮಾರ್ಚ್ 2024, 14:39 IST
<div class="paragraphs"><p>ರಾಜೇಶ್‌ಕುಮಾರ್</p></div>

ರಾಜೇಶ್‌ಕುಮಾರ್

   

ಬೆಂಗಳೂರು: ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಗುಡಿಯಾ ದೇವಿ (42) ಎಂಬುವವರ ಕೊಲೆ ನಡೆದಿದ್ದು, ಕೃತ್ಯ ಎಸಗಿದ್ದ ಆರೋಪದಡಿ ತಂಗಿಯ ಸ್ನೇಹಿತ ರಾಜೇಶ್‌ಕುಮಾರ್‌ನನ್ನು (29) ಪೊಲೀಸರು ಬಂಧಿಸಿದ್ದಾರೆ.

‘ಬಿಹಾರದ ಗುಡಿಯಾ ದೇವಿ ಹಾಗೂ ತಂಗಿ ಗೀತಾಕುಮಾರಿ ಅವರು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಗಾರ್ಮೆಂಟ್ಸ್‌ ಕಾರ್ಖಾನೆಯೊಂದರಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಸಿಂಗಸಂದ್ರದ ಮನೆಯಲ್ಲಿ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಆರೋಪಿ ರಾಜೇಶ್‌ಕುಮಾರ್ ಸಹ ಬಿಹಾರದವನು. ನಗರದಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಗೀತಾಕುಮಾರಿ ಸ್ನೇಹಿತನಾಗಿದ್ದ ಈತ, ಆಗಾಗ ಮನೆಗೂ ಹೋಗಿ ಬರುತ್ತಿದ್ದ’ ಎಂದು ತಿಳಿಸಿದರು.

ಮೊಬೈಲ್‌ನಲ್ಲಿ ಹೆಚ್ಚು ಮಾತು

‘ಗುಡಿಯಾ ದೇವಿ ಅವರು ನಿತ್ಯವೂ ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಗೀತಾಕುಮಾರಿ, ಮಾತನಾಡದಂತೆ ತಾಕೀತು ಮಾಡುತ್ತಿದ್ದರು. ಇದೇ ವಿಚಾರವಾಗಿ ಸಹೋದರಿಯರ ನಡುವೆ ನಿತ್ಯವೂ ಜಗಳ ಆಗುತ್ತಿತ್ತು’ ಎಂದು ಪೊಲೀಸರು ಹೇಳಿದರು.

‘ಗುಡಿಯಾ ದೇವಿ ಹಾಗೂ ಗೀತಾಕುಮಾರಿ ಭಾನುವಾರ ಮನೆಯಲ್ಲಿದ್ದರು. ಪಾನಮತ್ತನಾಗಿದ್ದ ರಾಜೇಶ್‌ಕುಮಾರ್ ಸಹ ಮನೆಗೆ ಹೋಗಿದ್ದ. ಮೂವರು ರಾತ್ರಿ ಒಟ್ಟಿಗೆ ಊಟ ಮಾಡಿದ್ದರು. ಬಳಿಕ, ಸಹೋದರಿಯರ ನಡುವೆ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.’

‘ಜಗಳದಲ್ಲಿ ಮಧ್ಯಪ್ರವೇಶಿಸಿದ್ದ ರಾಜೇಶ್‌ಕುಮಾರ್, ಜಗಳ ಬಿಡಿಸಲು ಮುಂದಾಗಿದ್ದ. ಇದೇ ಸಂದರ್ಭದಲ್ಲಿ ಗುಡಿಯಾ ದೇವಿ ಮೇಲೆ ಹಲ್ಲೆ ಮಾಡಿ ಕತ್ತು ಹಿಸುಕಿದ್ದ. ಅಸ್ವಸ್ಥಗೊಂಡು ಗುಡಿಯಾದೇವಿ ಕುಸಿದು ಬಿದ್ದಿದ್ದರು. ಗೀತಾಕುಮಾರಿ ಹಾಗೂ ರಾಜೇಶ್‌ಕುಮಾರ್ ಇಬ್ಬರೂ ಸೇರಿಕೊಂಡು ಆಸ್ಪತ್ರೆಗೆ ಕರೆದೊಯ್ದರು. ತಪಾಸಣೆ ನಡೆಸಿದ ವೈದ್ಯರು, ಗುಡಿಯಾದೇವಿ ಮೃತಪಟ್ಟಿರುವುದಾಗಿ ಹೇಳಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಜಗಳ ಬಿಡಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕತ್ತು ಹಿಡಿದಿದ್ದೆ. ಕೊಲ್ಲುವ ಉದ್ದೇಶ ನನಗಿರಲಿಲ್ಲ’ ಎಂಬುದಾಗಿ ರಾಜೇಶ್‌ಕುಮಾರ್ ಹೇಳುತ್ತಿದ್ದಾನೆ. ಪ್ರಕರಣದಲ್ಲಿ ಗೀತಾಕುಮಾರಿ ಅವರದ್ದು ಯಾವುದೇ ಪಾತ್ರವಿಲ್ಲವೆಂಬುದು ಸದ್ಯಕ್ಕೆ ಗೊತ್ತಾಗಿದೆ. ಅವರಿಂದಲೇ ಹೇಳಿಕೆ ಪಡೆದು ರಾಜೇಶ್‌ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.