ADVERTISEMENT

ಬೆಂಗಳೂರು: ವಿಚಾರಣಾಧೀನ ಕೈದಿಯ ಗುದದ್ವಾರದಲ್ಲಿ ಮೊಬೈಲ್‌ ಪತ್ತೆ!

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 16:30 IST
Last Updated 4 ಜುಲೈ 2024, 16:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ವಿಚಾರಣಾಧೀನ ಕೈದಿಯೊಬ್ಬ ಗುದದ್ವಾರದಲ್ಲಿ ಮೊಬೈಲ್‌ ಇಟ್ಟುಕೊಂಡಿರುವುದನ್ನು ಪತ್ತೆಹಚ್ಚಿರುವ ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ.

ವಿಚಾರಣಾಧೀನ ಕೈದಿ ರಘುವೀರ್‌ ಮೊಬೈಲ್ ಅನ್ನು ಜೈಲಿನೊಳಗೆ ಒಯ್ಯಲು ಪ್ರಯತ್ನಿಸಿದ ಆರೋಪಿ. ವಿಚಾರಣೆಗಾಗಿ ರಘುವೀರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸ್‌ ಕಾರಾಗೃಹಕ್ಕೆ ತೆರಳುವ ಸಂದರ್ಭದಲ್ಲಿ ಲೋಹಶೋಧಕ ಯಂತ್ರದ ಮೂಲಕ ತಪಾಸಣೆ ಮಾಡಲು ಮುಂದಾದಾಗ, ಹೊಟ್ಟೆನೋವು ಎಂದು ತಿಳಿಸಿದ್ದ. ಸಿಬ್ಬಂದಿ ಆತನನ್ನು ಬಿಡದೇ ತಪಾಸಣೆ ನಡೆಸಿದಾಗ ಗುದದ್ವಾರದಲ್ಲಿ ಯಾವುದೋ ವಸ್ತು ಇರುವುದನ್ನು ಲೋಹಶೋಧಕ ತೋರಿಸಿತ್ತು.

ADVERTISEMENT

ಪರಪ್ಪನ ಅಗ್ರಹಾರದ ಮುಖ್ಯ ವೈದ್ಯಾಧಿಕಾರಿ ಬಳಿಗೆ ಆರೋಪಿಯನ್ನು ಕರೆದೊಯ್ದು ಎಕ್ಸ್‌–ರೇ ಪರೀಕ್ಷೆಗೆ ಒಳಪಡಿಸಿದಾಗ ವಸ್ತು ಕಂಡು ಬಂದಿತ್ತು. ಸೆಲ್ಲೊ ಟೇಪ್‌ನಿಂದ ಸುತ್ತಿದ್ದ ಲಕೋಟೆಯನ್ನು ಚಿಕಿತ್ಸೆ ಮೂಲಕ ಹೊರತೆಗೆದು ಬಿಡಿಸಿದಾಗ ಅದರಲ್ಲಿ 7 ಸೆಂಟಿ ಮೀಟರ್‌ ಉದ್ದ, 2 ಸೆಂಟಿ ಮೀಟರ್‌ ಅಗಲದ ಮೊಬೈಲ್‌ ಪತ್ತೆಯಾಗಿತ್ತು.

ಕಾರಾಗೃಹದ ಮುಖ್ಯ ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ಸೂಚನೆಯಂತೆ ಜೈಲರ್‌ ಕ್ಯು.ಎಸ್‌. ದೇಸಾಯಿ ಅವರು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. 

‘ಗುಪ್ತಾಂಗದ ಮೂಲಕ ಬಚ್ಚಿಟ್ಟುಕೊಂಡು ವಸ್ತುಗಳನ್ನು ಜೈಲಿನೊಳಗೆ ಸಾಗಿಸುವುದನ್ನು ಕಟ್ಟುನಿಟ್ಟಿನ ತಪಾಸಣೆ ಮೂಲಕ ನಿಯಂತ್ರಿಸಲಾಗುತ್ತಿದೆ. ಇತ್ತೀಚೆಗೆ ಆರೋಪಿಯೊಬ್ಬ ಮಾದಕ ವಸ್ತುಗಳನ್ನು ಗುದದ್ವಾರದಲ್ಲಿ ಇಟ್ಟುಕೊಂಡು ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದನ್ನು ಕೂಡ ಪತ್ತೆ ಹಚ್ಚಲಾಗಿತ್ತು. ಇದೀಗ ಮೊಬೈಲ್‌ ಪತ್ತೆಹಚ್ಚಲಾಗಿದೆ’ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.