ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಸಂಸ್ಥೆ ನಗರದ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ ಮೊಬೈಲ್ ಆಸ್ಪತ್ರೆಯಂತೆ ಕೆಲಸ ಮಾಡುವ ಬಸ್‌ಅನ್ನು ಕೊಡುಗೆಯಾಗಿ ನೀಡಿದೆ.
₹ 2.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಬಸ್‌ನಲ್ಲಿ ಕ್ಯಾನ್ಸರ್ ಪತ್ತೆ ಮಾಡುವ ಯಂತ್ರಗಳಿವೆ. ರಕ್ತ ಪರೀಕ್ಷೆ, ಸ್ಕ್ಯಾನಿಂಗ್ ಸೌಲಭ್ಯಗಳಿವೆ. ಚಿಕ್ಕದಾದ ಶಸ್ತ್ರಚಿಕಿತ್ಸೆಯನ್ನು ಮಾಡುವ ವ್ಯವಸ್ಥೆ ಕೂಡ ಇದೆ.
‘ಈ ಬಸ್ ರಾಜ್ಯದುದ್ದಕ್ಕೂ ಸಂಚರಿಸಬೇಕು ಎಂಬುದು ನಮ್ಮ ಕನಸು. ಡಿಸೆಂಬರ್ ವೇಳೆಗೆ ಇದು ನೆರವೇರಲಿದೆ. ಸದ್ಯಕ್ಕೆ ತಂತ್ರಜ್ಞರ ಕೊರತೆ ಇದೆ. ದಾದಿಯರು, ತಂತ್ರಜ್ಞರು, ಸಂಶೋಧಕರನ್ನು ಸೇರಿದಂತೆ ಇತ್ತೀಚೆಗೆ 311 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ. ಸಿ.ರಾಮಚಂದ್ರ ಹೇಳಿದರು.
‘ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಕ್ಯಾನ್ಸರ್ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವುದು ಇದರ ಮೂಲ ಉದ್ದೇಶ. ಗ್ರಾಮಗಳ ರೋಗಿಗಳಿಗೆ ಇದರಿಂದ ಅನುಕೂಲ ಆಗಲಿದೆ. ಕ್ಯಾನ್ಸರ್ ಲಕ್ಷಣಗಳು ಕಂಡುಬಂದರೆ ಸ್ಥಳದಲ್ಲೇ ಪರೀಕ್ಷೆ ಮಾಡಲಾಗುತ್ತದೆ. ಬಸ್‌ನ ಹೊರಭಾಗದಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದ ಸಾಕಷ್ಟು ಮಾಹಿತಿಯನ್ನು ಹಾಕಲಾಗಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.