ADVERTISEMENT

ಲೆಕ್ಕಕ್ಕೆ ಸಿಗದ ದಟ್ಟಣೆ: ಆನ್‌ ಆಗದ ‘ಮೊಡೆರಾಟೊ’

ಮಿತಿ ಮೀರುತ್ತಿರುವ ವಾಹನಗಳ ಸಂಚಾರ: ಪ್ರಾಯೋಗಿಕ ಜಾರಿಯಲ್ಲಿ ನಿರಾಸೆ

ಸಂತೋಷ ಜಿಗಳಿಕೊಪ್ಪ
Published 29 ಮೇ 2024, 23:22 IST
Last Updated 29 ಮೇ 2024, 23:22 IST
ನಗರದ ಎಂ.ಜಿ. ರಸ್ತೆಯಲ್ಲಿರುವ ಹಳೇ ಸಿಗ್ನಲ್‌ಗಳ ಪಕ್ಕವೇ ಅಳವಡಿಸಿರುವ ‘ಮೊಡೆರಾಟೊ’ ವ್ಯವಸ್ಥೆಯ ಹೊಸ ಸಂಚಾರ ಸಿಗ್ನಲ್‌ಗಳು  – ಪ್ರಜಾವಾಣಿ ಚಿತ್ರ / ಎಸ್‌.ಕೆ. ದಿನೇಶ್
ನಗರದ ಎಂ.ಜಿ. ರಸ್ತೆಯಲ್ಲಿರುವ ಹಳೇ ಸಿಗ್ನಲ್‌ಗಳ ಪಕ್ಕವೇ ಅಳವಡಿಸಿರುವ ‘ಮೊಡೆರಾಟೊ’ ವ್ಯವಸ್ಥೆಯ ಹೊಸ ಸಂಚಾರ ಸಿಗ್ನಲ್‌ಗಳು  – ಪ್ರಜಾವಾಣಿ ಚಿತ್ರ / ಎಸ್‌.ಕೆ. ದಿನೇಶ್   

ಬೆಂಗಳೂರು: ‘ದಟ್ಟಣೆ ನಗರ ಬೆಂಗಳೂರು’ ಎಂಬ ಅಪಖ್ಯಾತಿ ಹೋಗಲಾಡಿಸಲು ರೂಪಿಸಿರುವ ಮೊಡೆರಾಟೊ (ವಾಹನಗಳ ದಟ್ಟಣೆ ಆಧರಿಸಿ ಸ್ವಯಂಚಾಲಿತ ಸಿಗ್ನಲ್ ನಿರ್ವಹಣೆ ತಂತ್ರಜ್ಞಾನ) ವ್ಯವಸ್ಥೆ ಜಾರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಲೆಕ್ಕಕ್ಕೆ ಸಿಗದ ನಗರದ ದಟ್ಟಣೆಯಿಂದಾಗಿ ಮೊಡೆರಾಟೊ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಜಪಾನ್ ತಜ್ಞರು ಹಿಂದೇಟು ಹಾಕುತ್ತಿದ್ದಾರೆ.

ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ದಟ್ಟಣೆ ಪ್ರಮಾಣವೂ ವೃದ್ಧಿಸುತ್ತಿದೆ. ಮಿತಿ ಮೀರುತ್ತಿರುವ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್), ಜಪಾನ್‌ನಲ್ಲಿ ಬಳಕೆಯಲ್ಲಿರುವ ಮೊಡೆರಾಟೊ ವ್ಯವಸ್ಥೆಯನ್ನು ನಗರದಲ್ಲಿ ಜಾರಿಗೊಳಿಸುವ ಪ್ರಕ್ರಿಯೆಗೆ ಹಲವು ವರ್ಷಗಳ ಹಿಂದೆಯೇ ಚಾಲನೆ ನೀಡಿದೆ.

ಜಪಾನ್‌ನಲ್ಲಿ ಯಶಸ್ವಿಯಾಗಿರುವ ಮೊಡೆರಾಟೊ ವ್ಯವಸ್ಥೆಯನ್ನು ಮುಂಬೈ ಹಾಗೂ ದೆಹಲಿಯಲ್ಲೂ ಅಳವಡಿಸಲಾಗಿದೆ. ಎರಡೂ ಕಡೆಯ ಹಲವು ರಸ್ತೆಗಳಲ್ಲಿ ವ್ಯವಸ್ಥೆ ಜಾರಿಯಲ್ಲಿದ್ದು, ತಕ್ಕಮಟ್ಟಿಗೆ ದಟ್ಟಣೆ ತಗ್ಗಿದೆ. ಇದೇ ಕಾರಣಕ್ಕೆ ಆ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿ ಜಾರಿಗೆ ತರಲು ಡಲ್ಟ್ ಯೋಜನೆ ರೂಪಿಸಿದ್ದು, ಕೆಲ ವೃತ್ತಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ.

ADVERTISEMENT

ಜಪಾನೀಸ್ ಇಂಟರ್‌ನ್ಯಾಷನಲ್ ಕೋ–ಆಪರೇಷನ್ ಏಜೆನ್ಸಿ (ಜೆಐಸಿಎ) ಮೂಲಕ ಮೊಡೆರಾಟೊ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿರುವ 28 ವೃತ್ತಗಳಲ್ಲಿ ಸಿಗ್ನಲ್ ಹಾಗೂ ಇತರೆ ಉಪಕರಣ ಅಳವಡಿಕೆಯ ಜವಾಬ್ದಾರಿಯನ್ನು ಜೆಐಸಿಎ ವಹಿಸಿಕೊಂಡಿದೆ.

ಎಂ.ಜಿ. ರಸ್ತೆಯ ಅನಿಲ್‌ ಕುಂಬ್ಳೆ ವೃತ್ತ, ಕೆನ್ಸಿಂಗ್‌ಟನ್ ಜಂಕ್ಷನ್, ಹಳೇ ಮದ್ರಾಸ್ ರಸ್ತೆ, ಮಾರ್ಪಿ ರಸ್ತೆ ಜಂಕ್ಷನ್‌, ಕ್ವೀನ್ಸ್ ರಸ್ತೆ ಸೇರಿದಂತೆ 28 ವೃತ್ತಗಳಲ್ಲಿ ಜಪಾನ್ ತಜ್ಞರು ಹಾಗೂ ವಿವಿಧ ಕಂಪನಿಗಳ ಸಿಬ್ಬಂದಿಯೇ ಸಿಗ್ನಲ್‌ ಹಾಗೂ ಸೆನ್ಸಾರ್ ಉಪಕರಣ ಅಳವಡಿಸಿದ್ದಾರೆ. ಆದರೆ, ಯಾವ ವೃತ್ತಗಳಲ್ಲಿಯೂ ಸಿಗ್ನಲ್‌ಗಳು ಸಂಪೂರ್ಣವಾಗಿ ಆನ್ ಆಗಿಲ್ಲ. ಇದಕ್ಕೆ ಹಲವು ಕಾರಣಗಳಿರುವುದಾಗಿ ಡಲ್ಟ್ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಹೇಳುತ್ತಿದ್ದಾರೆ.

‘ಮೊಡೆರಾಟೊ ವ್ಯವಸ್ಥೆಗೆ ಸಂಬಂಧಪಟ್ಟಂತೆ 2014ರಲ್ಲಿ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಆದರೆ, ಯೋಜನೆಗೆ ಅನುಮತಿ ಸಿಕ್ಕಿರಲಿಲ್ಲ. 2021ರ ಜುಲೈನಲ್ಲಿ ಸಿದ್ಧಪಡಿಸಿದ್ದ ಪರಿಷ್ಕೃತ ಪ್ರಸ್ತಾವಕ್ಕೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿತ್ತು. ಬಳಿಕವೇ ಜಪಾನ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ಮೊಡೆರಾಟೊ ಅಳವಡಿಕೆ ಕೆಲಸ ಆರಂಭಿಸಲಾಗಿದೆ’ ಎಂದು ನಗರ ಭೂ ಸಾರಿಗೆ ನಿರ್ದೇಶನಾಲಯದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘2023ರಿಂದ ಪ್ರಾಯೋಗಿಕವಾಗಿ ಮೊಡೆರಾಟೊ ವ್ಯವಸ್ಥೆ ಜಾರಿಗೊಳಿಸುವ ಕೆಲಸ ಶುರುವಾಗಿದೆ. ಕಳೆದ ಡಿಸೆಂಬರ್‌ನಲ್ಲಿಯೇ ವ್ಯವಸ್ಥೆ ಸಂಪೂರ್ಣ ಜಾರಿಗೊಳಿಸುವ ಗುರಿ ಇತ್ತು. ಆದರೆ, ಹಲವು ಸಮಸ್ಯೆಗಳು ಎದುರಾಗಿರುವುದರಿಂದ ವ್ಯವಸ್ಥೆ ಜಾರಿಗೆ ಮತ್ತಷ್ಟು ದಿನ ತಡವಾಗಬಹುದು’ ಎಂದು ಅವರು ಹೇಳಿದರು.

ಲೆಕ್ಕಕ್ಕೆ ಸಿಗದ ದಟ್ಟಣೆ, ತಜ್ಞರೇ ಸುಸ್ತು: ‘ಸಾಫ್ಟ್‌ವೇರ್ ಸಹಾಯದಿಂದ ಮೊಡೆರಾಟೊ ರೂಪಿಸಲಾಗಿದೆ. ಪ್ರಾಯೋಗಿಕ ಜಾರಿ ಸಂದರ್ಭದಲ್ಲಿ ವಾಹನಗಳ ಸಂಖ್ಯೆ ಆಧರಿಸಿ ದಟ್ಟಣೆ ಪ್ರಮಾಣ ಲೆಕ್ಕ ಹಾಕಲಾಗುತ್ತಿತ್ತು. ಶೇ 30ರಷ್ಟು ದಟ್ಟಣೆ ತಗ್ಗುವ ನಿರೀಕ್ಷೆ ಇತ್ತು. ಆದರೆ, ವಾಹನಗಳ ಓಡಾಟದಲ್ಲಿ ಸಾಕಷ್ಟು ವ್ಯತ್ಯಾಸವಾಗಿದ್ದರಿಂದ ಸೂಕ್ತ ಲೆಕ್ಕ ಸಿಕ್ಕಿಲ್ಲ. ದಟ್ಟಣೆಯೂ ಕಡಿಮೆಯಾಗಲಿಲ್ಲ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಹಲವು ವೃತ್ತಗಳಲ್ಲಿ ವಾಹನಗಳ ಓಟಾಟ ನಿತ್ಯವೂ ಬದಲಾಗುತ್ತಿರುತ್ತದೆ. ವಿವಿಧ ಪ್ರಕಾರಗಳ ವಾಹನಗಳೂ ಸಂಚರಿಸುತ್ತವೆ. ಬಹುತೇಕರು, ಪಥಶಿಸ್ತು ಹಾಗೂ ಇತರೆ ಸಂಚಾರ ನಿಯಮಗಳನ್ನು ಪಾಲಿಸುವುದಿಲ್ಲ. ಇದರಿಂದಾಗಿ ವಾಹನಗಳ ದಟ್ಟಣೆ ಗ್ರಹಿಸಲು ಜಪಾನ್ ತಜ್ಞರಿಗೆ ಸಾಧ್ಯವಾಗುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ತಂತ್ರಜ್ಞಾನ ಜಾರಿಗೊಳಿಸಿದರೆ, ತಮ್ಮ ಕಂಪನಿ ಹೆಸರಿಗೆ ಚ್ಯುತಿ ಉಂಟಾಗಬಹುದೆಂದು ತಜ್ಞರು ಭಯಪಡುತ್ತಿದ್ದಾರೆ. ಹೀಗಾಗಿ, ವ್ಯವಸ್ಥೆ ಜಾರಿಗೆ ಮತ್ತಷ್ಟು ದಿನಗಳ ಕಾಲಾವಕಾಶ ಕೋರುತ್ತಿದ್ದಾರೆ’ ಎಂದು ಹೇಳಿದರು.

ಅಧಿಕಾರಿಗಳ ಸಮನ್ವಯ ಕೊರತೆ:

ನಗರ ಭೂ ಸಾರಿಗೆ ನಿರ್ದೇಶನಾಲಯ ರೂಪಿಸಿರುವ ಯೋಜನೆಗೆ ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳು, ಸಂಚಾರ ಪೊಲೀಸರು ಹಾಗೂ ಇತರೆ ಸಂಸ್ಥೆಗಳ ಅಧಿಕಾರಿಗಳ ಸಹಕಾರ ಅಗತ್ಯವಿದೆ. ಆದರೆ, ಕೆಲ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರಿಂದ ಯೋಜನೆಗೆ ಹಿನ್ನೆಡೆ ಉಂಟಾಗಿರುವುದಾಗಿ ಡಲ್ಟ್ ಅಧಿಕಾರಿಯೊಬ್ಬರು ದೂರಿದರು.

‘ಸಿಗ್ನಲ್ ಅಳವಡಿಸಿರುವ ವೃತ್ತಕ್ಕೆ ಹೊಂದಿಕೊಂಡಿರುವ ಕೆಲ ರಸ್ತೆಗಳಲ್ಲಿ ನೆಲ ಅಗೆಯಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮೊಡೆರಾಟೊ ಜಾರಿ ಮಾಡುವುದು ಹೇಗೆ? ಎಂಬುದಾಗಿ ಜಪಾನ್ ತಜ್ಞರು ಪ್ರಶ್ನಿಸುತ್ತಿದ್ದಾರೆ’ ಎಂದು ಅಧಿಕಾರಿ ಹೇಳಿದರು.

‘ವ್ಯವಸ್ಥೆಯ ಪ್ರಾಯೋಗಿಕ ಜಾರಿ ಸಂದರ್ಭದಲ್ಲಿ ಉಂಟಾದ ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಬಗ್ಗೆ ಎಲ್ಲ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತಿದೆ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಸಮಸ್ಯೆ ಬಗೆಹರಿಸಲು ಕೈ ಜೋಡಿಸಿದರೆ ಜೂನ್ ಅಂತ್ಯದಲ್ಲಿ ಮೊಡೆರಾಟೊ ವ್ಯವಸ್ಥೆ ಸಂಪೂರ್ಣವಾಗಿ ಜಾರಿ ಮಾಡಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

ಮೊಡೆರಾಟೊ ಕಾರ್ಯನಿರ್ವಹಣೆ

‘ದಿನದ 24 ಗಂಟೆಯೂ ರಸ್ತೆಗಳಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳ ದಟ್ಟಣೆ ಆಧರಿಸಿ ಮೊಡೆರಾಟೊ ವ್ಯವಸ್ಥೆ ಕಾರ್ಯನಿರ್ವಹಣೆ ಮಾಡಲಿದೆ. ಪ್ರತಿ ವೃತ್ತದಲ್ಲಿ ಕೆಂಪು ಹಾಗೂ ಹಸಿರು ದೀಪಗಳ ಸಿಗ್ನಲ್‌ ಅಳವಡಿಸಲಾಗಿದ್ದು ವಾಹನಗಳ ಸಂಚಾರಕ್ಕೆ ಸ್ವಯಂಚಾಲಿತವಾಗಿ ಸೂಚನೆ ನೀಡಲಿದೆ’ ಎಂದು ಅಧಿಕಾರಿ ಹೇಳಿದರು. ‘ವೃತ್ತದ ವಾಹನಗಳ ದಟ್ಟಣೆ ಜೊತೆಯಲ್ಲಿ ಅಕ್ಕ–ಪಕ್ಕದ ರಸ್ತೆಗಳ ದಟ್ಟಣೆ ಬಗ್ಗೆಯೂ ಸೆನ್ಸಾರ್ ಮೂಲಕ ‘ಮೊಡೆರಾಟೊ’ ಮಾಹಿತಿ ಕಲೆಹಾಕಲಿದೆ. ಅದಕ್ಕೆ ತಕ್ಕಂತೆ ಸಿಗ್ನಲ್‌ಗಳನ್ನು ಬದಲಿಸಿ ದಟ್ಟಣೆ ತಗ್ಗಿಸಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.