ADVERTISEMENT

ಶಾಸನಗಳ ಕಾಲದಲ್ಲೇ ಪ್ರಜಾಪ್ರಭುತ್ವದ ಆಶಯ: ಅಗ್ರಹಾರ ಕೃಷ್ಣಮೂರ್ತಿ

‘ಕನ್ನಡ ಸಾಹಿತ್ಯ ಮತ್ತು ಪ್ರಜಾಪ್ರಭುತ್ವದ ಒಳ ಹರಿವು’ ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 16:22 IST
Last Updated 6 ಏಪ್ರಿಲ್ 2024, 16:22 IST
ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ ಮತ್ತು ಎನ್‌. ಗಾಯತ್ರಿ ಮಾತುಕತೆಯಲ್ಲಿ ತೊಡಗಿದ್ದರು. ಬಂಡಾಯ ಸಾಹಿತ್ಯ ಸಂಘಟನೆ ಬೆಂಗಳೂರು ಜಿಲ್ಲಾ ಘಟಕದ ಸಂಚಾಲಕ ರಾಜು ಗುಂಡಾಪುರ ಭಾಗವಹಿಸಿದ್ದರು  -ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ ಮತ್ತು ಎನ್‌. ಗಾಯತ್ರಿ ಮಾತುಕತೆಯಲ್ಲಿ ತೊಡಗಿದ್ದರು. ಬಂಡಾಯ ಸಾಹಿತ್ಯ ಸಂಘಟನೆ ಬೆಂಗಳೂರು ಜಿಲ್ಲಾ ಘಟಕದ ಸಂಚಾಲಕ ರಾಜು ಗುಂಡಾಪುರ ಭಾಗವಹಿಸಿದ್ದರು  -ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರಜಾಪ್ರಭುತ್ವ ಎನ್ನುವುದು ಆಧುನಿಕ ರಾಜಕೀಯದ ಪರಿಕಲ್ಪನೆಯಾಗಿದ್ದರೂ ಕೂಡ ಶಾಸನಗಳ ಕಾಲದಲ್ಲಿಯೇ ಪ್ರಜಾಪ್ರಭುತ್ವದ ಆಶಯಗಳು ಇದ್ದಿದ್ದನ್ನು ಕಾಣಬಹುದು ಎಂದು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದರು.

ಬಂಡಾಯ ಸಾಹಿತ್ಯ ಸಂಘಟನೆ ಬೆಂಗಳೂರು ಜಿಲ್ಲಾ ಘಟಕ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯ ಮತ್ತು ಪ್ರಜಾಪ್ರಭುತ್ವದ ಆಶಯ’ ವಿಚಾರಗೊಷ್ಠಿಯಲ್ಲಿ ‘ಆಧುನಿಕ ಪೂರ್ವ ಕನ್ನಡ ಸಾಹಿತ್ಯ ಮತ್ತು ಪ್ರಜಾಪ್ರಭುತ್ವದ ಒಳಹರಿವು’ ಬಗ್ಗೆ ಅವರು ಮಾತನಾಡಿದರು.

ಶಾಸನಗಳ ಭಾಷೆಯ ಆಯ್ಕೆಯನ್ನು ನೋಡಿದಾಗಲೂ ಈ ವಿಚಾರವನ್ನು ಕಾಣಬಹುದು. ಸಂಸ್ಕೃತ, ಪ್ರಾಕೃತ ಭಾಷೆಗಳೇ ಪ್ರಮುಖವಾಗಿದ್ದಾಗಲೂ ಆಯಾ ಪ್ರದೇಶಗಳ ಭಾಷೆಯನ್ನು ಶಾಸನಗಳಲ್ಲಿ ಬಳಸಲಾಗಿದೆ. ಅದೇ ರೀತಿ ಮಹಾಕಾವ್ಯಗಳು ಸಂಸ್ಕೃತ, ಪ್ರಾಕೃತದಲ್ಲಿದ್ದರೂ ಜನಜನಿತಗೊಳಿಸಲು ದೇಸಿ ಭಾಷೆಗಳನ್ನು ಬಳಸಲಾಯಿತು ಎಂದು ವಿವರಿಸಿದರು.

ADVERTISEMENT

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂಬ ಒತ್ತಾಯ ಇದ್ದಾಗ, ತಮಿಳಿಗೆ 2,000 ವರ್ಷ, ಕನ್ನಡಕ್ಕೆ 1,500 ವರ್ಷಗಳ ಇತಿಹಾಸವಿದೆ ಎಂಬ ಚರ್ಚೆಗಳಾಗಿದ್ದವು. 2000 ವರ್ಷ ದಾಟಿರದ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ನಿರ್ಧಾರಗಳಾಗಿದ್ದವು. ಆಗ 2000 ವರ್ಷ ಮೀರಿದ ಶಾಸನಗಳಲ್ಲಿ ಕನ್ನಡ ಇರುವುದನ್ನು ಸಾಕ್ಷಿ ಸಮೇತ ನೀಡಿದ್ದರಿಂದ ಶಾಸ್ತ್ರೀಯ ಸ್ಥಾನಮಾನ ನೀಡಲಾಯಿತು ಎಂದು ನೆನಪು ಮಾಡಿಕೊಂಡರು.

‘ಒಳ್ಳೆಯ ಕೆಲಸಗಳು ಎಂದು ರಾಜ ಮಹಾರಾಜರು ಭಾವಿಸಿದ್ದಷ್ಟೇ ಶಾಸನಗಳಾಗಿ ಕೆತ್ತಲಾಗಿತ್ತು. ಹಾಗಾಗಿ ಹಳೇ ಸಾಹಿತ್ಯ, ಶಾಸನಗಳನ್ನು  ನೋಡಿದಾಗ ಆಗ ಎಲ್ಲ ಸುಭಿಕ್ಷವಾಗಿದ್ದವು. ಪ್ರಜಾಪ್ರಭುತ್ವದ ಆಶಯಗಳು ಚೆನ್ನಾಗಿದ್ದವು ಎಂಬ ಭಾವನೆ ಉಂಟು ಮಾಡುತ್ತಿದೆ. ಈಗ ಇರುವ ಎಲ್ಲ ಕೆಟ್ಟವುಗಳು ಆಗಲೂ ಇದ್ದವು’ ಎಂದು ಪ್ರತಿಪಾದಿಸಿದರು.

‘ಆಧುನಿಕ ಕನ್ನಡ ಸಾಹಿತ್ಯ ಮತ್ತು ಪ್ರಜಾಪ್ರಭುತ್ವದ ಪ್ರತಿರೋಧ’ ಬಗ್ಗೆ ಸಾಹಿತಿ ಎನ್‌. ಗಾಯತ್ರಿ ಮಾತನಾಡಿ, ‘ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಪ್ರಭುತ್ವ ಇಲ್ಲವೇ ಪ್ರಭುತ್ವ ಬೆಂಬಲಿತ ಸಂಘಟನೆಗಳು ನಡೆಸಿದಾಗ ಅದನ್ನು ದಿಟ್ಟವಾಗಿ ಅನೇಕ ಲೇಖಕರು ಎದುರಿಸಿದ್ದಾರೆ’ ಎಂದರು.

‘ಭಾರತವನ್ನು ಆಳಿದ ವಸಾಹತುಶಾಹಿಗಳಿಂದಲೇ ಪ್ರಜಾಪ್ರಭುತ್ವ ಅಂಶಗಳನ್ನು ನಾವು ಕಲಿತುಕೊಂಡೆವು. ಇಲ್ಲಿ ಆಧುನಿಕ ಭಾರತದಲ್ಲಿ ಸಮಾಜ ಸುಧಾರಕರು ಹುಟ್ಟಿಕೊಳ್ಳಲು ಇಂಗ್ಲಿಷ್‌ ಶಿಕ್ಷಣ ಕಾರಣವಾಯಿತು. ಮಹಿಳೆಯ ಉದ್ಧಾರವಾಗದೇ ಸಮಾಜದ ಉದ್ದಾರ ಸಾಧ್ಯವಿಲ್ಲ ಎಂದು ಹಲವರು ಪ್ರತಿಪಾದಿಸಲು ಕೂಡ ಇಂಗ್ಲಿಷ್ ಶಿಕ್ಷಣ ಪಡೆದಿರುವುದೇ ಕಾರಣ’ ಎಂದು ವಿಶ್ಲೇಷಿಸಿದರು.

’ಪ್ರಜಾಪ್ರಭುತ್ವ ಸಂಕಷ್ಟದಲ್ಲಿ ಇರುವ ಈ ಕಾಲದಲ್ಲಿಯೂ ಅದರ ಪ್ರತಿರೋಧದ ಬರಹಗಳನ್ನು ಆಧುನಿಕ ಕನ್ನಡದ ಅನೇಕ ಸಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ’ ಎಂದು ಹೇಳಿದರು.

ಆಧುನಿಕ ಕನ್ನಡದ ಅನೇಕ ಸಾಹಿತಿಗಳು ಸಂಪ್ರದಾಯ, ದೇವರು ಮತ್ತು ಪ್ರಭುತ್ವನ್ನು ದಿಟ್ಟವಾಗಿ ಪ್ರಶ್ನಿಸಿದರು. ಅಬ್ರಾಹ್ಮಣ ಸಾಹಿತ್ಯ ಹುಟ್ಟಿಕೊಂಡಿತು ಎನ್‌.ಗಾಯತ್ರಿ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.