ADVERTISEMENT

ಹಂದಿ ಮಾಂಸದ ಫೋಟೊ ಕಳುಹಿಸಿ ಬೆದರಿಕೆ: ಮೊಹಮ್ಮದ್ ಜುಬೇರ್

​ಪ್ರಜಾವಾಣಿ ವಾರ್ತೆ
Published 2 ಮೇ 2023, 21:19 IST
Last Updated 2 ಮೇ 2023, 21:19 IST
ಮೊಹಮ್ಮದ್ ಜುಬೇರ್
ಮೊಹಮ್ಮದ್ ಜುಬೇರ್   

ಬೆಂಗಳೂರು: ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಸಂಸ್ಥೆಯ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಅವರಿಗೆ ಹಂದಿ ಮಾಂಸದ ಫೋಟೊ ಕಳುಹಿಸಿ ಕೊಲೆ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ಡಿ.ಜೆ. ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆರ್‌.ಟಿ.ನಗರ ಕೆ.ಬಿ.ಸಂದ್ರದ ನಿವಾಸಿ ಮೊಹಮ್ಮದ್ ಜುಬೇರ್ ಅವರು ದೂರು ನೀಡಿದ್ದಾರೆ. ‘ಸೈಬರ್ ಹಂಟ್ಸ್’ ಹೆಸರಿನ ಟ್ವಿಟರ್ ಖಾತೆ ಹಾಗೂ ಇತರರ ವಿರುದ್ಧ ಏಪ್ರಿಲ್ 17ರಂದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಟ್ವೀಟ್ ಮಾಡಿದ್ದ ಆರೋಪದಡಿ 2022ರ ಜೂನ್ 27ರಂದು ಜುಬೇರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ, ಅವರು ಜಾಮೀನು ಮೇಲೆ ಹೊರಬಂದಿದ್ದಾರೆ.

ADVERTISEMENT

ದೂರಿನ ವಿವರ

‘ಸಾಮಾಜಿಕ ಜಾಲತಾಣ ಹಾಗೂ ಸುದ್ದಿ ವಾಹಿನಿಗಳಲ್ಲಿ ಬರುವ ಸುದ್ದಿಗಳ ಸತ್ಯಾಂಶವನ್ನು ಕಂಡುಹಿಡಿಯುವ ಕೆಲಸ ಮಾಡುತ್ತಿದ್ದೇನೆ. ಟ್ವಿಟರ್ ಖಾತೆ ಸಹ ಹೊಂದಿದ್ದೇನೆ. ಏಪ್ರಿಲ್ 9ರಂದು ಸೈಬರ್ ಹಂಟ್ಸ್‌ ಖಾತೆಯಿಂದ ಬೆದರಿಕೆ ಟ್ವೀಟ್ ಮಾಡಿ ನನ್ನ ಖಾತೆಗೆ ಟ್ಯಾಗ್ ಮಾಡಿದ್ದಾರೆ’ ಎಂದು ಜುಬೇರ್ ದೂರಿನಲ್ಲಿ ತಿಳಿಸಿದ್ದಾರೆ.

‘ದೇವರ ಆಶೀರ್ವಾದದಿಂದ ನನ್ನ ಹತ್ತಿರ ಎಲ್ಲ ಇದೆ. ನಿನಗೆ 400 ಗ್ರಾಂ ಹಂದಿ ಮಾಂಸ ಕಳಿಸಿರುತ್ತೇನೆ. ಅದನ್ನು ಸ್ಕ್ರೀನ್ ಶಾರ್ಟ್ ಮಾಡಿ ನೋಡಬಹುದು ಮತ್ತು ಯಾವ ಮಾಂಸ ಎಂದು ಕಾಣಬಹುದು. ಇದನ್ನು ನಿನ್ನ ಆಲ್ಟ್‌ನ್ಯೂಸ್ ಜನರಿಗೂ ತಿನ್ನಿಸು’ ಎಂದು ಟ್ವೀಟ್ ಮಾಡಿದ್ದಾರೆ. ಈ ಮಾಂಸವನ್ನು ಪ್ರಾಣಿಗಳಿಗೆ ಆಹಾರ ಪೂರೈಸುವ ಜಾಲತಾಣದಿಂದ ಆರ್ಡರ್ ಮಾಡಿರುತ್ತಾರೆ. ಈ ಮೂಲಕ ನನಗೆ ಜೀವ ಬೆದರಿಕೆಯೊಡ್ಡಿದ್ದಾರೆ. ಜೊತೆಗೆ, ಈಗಾಗಲೇ 5 ಟ್ವಿಟರ್ ಖಾತೆಗಳ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.