ಬೆಂಗಳೂರು: ಚಂದ್ರಾ ಲೇಔಟ್ ಠಾಣೆ ವ್ಯಾಪ್ತಿಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದಿರುವ ದುಷ್ಕರ್ಮಿಗಳು, ಅದರಲ್ಲಿದ್ದ ₹ 10 ಲಕ್ಷ ಕಳವು ಮಾಡಿದ್ದಾರೆ.
‘ಶ್ರೀನಿವಾಸ್ ಎಂಬುವವರು ಘಟನೆ ಬಗ್ಗೆ ಹೇಳಿಕೆ ನೀಡಿದ್ದಾರೆ. ನಾಲ್ವರು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕೆಂಗೇರಿ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ನೆಲೆಸಿರುವ ಜಯಪ್ರಕಾಶ್ ಎಂಬುವವರ ಬಳಿ ಶ್ರೀನಿವಾಸ್ ಕೆಲಸ ಮಾಡುತ್ತಿದ್ದರು. ಜಯಪ್ರಕಾಶ್ ಅವರ ಮೊಮ್ಮಗಳ ಮದುವೆ ನಿಶ್ಚಯವಾಗಿತ್ತು. ಅದರ ಖರ್ಚಿಗಾಗಿ ಹಣದ ಅಗತ್ಯವಿತ್ತು. ಬ್ಯಾಂಕ್‌ಗಳಿಂದ ಹಣ ಡ್ರಾ ಮಾಡಿಕೊಂಡು ಬರುವಂತೆ ಶ್ರೀನಿವಾಸ್‌ಗೆ ಡಿ.9ರಂದು ಸೂಚಿಸಿದ್ದರು.’
‘ಮಾಲೀಕರ ಕಾರಿನಲ್ಲೇ ಚಾಲಕನ ಜೊತೆ ಎರಡು ಬ್ಯಾಂಕ್‌ಗಳಿಗೆ ಹೋಗಿದ್ದ ಶ್ರೀನಿವಾಸ್, ₹ 10 ಲಕ್ಷ ಡ್ರಾ ಮಾಡಿ ಮನೆಗೆ ಮರಳುತ್ತಿದ್ದಾಗ ಕಾರಿನ ಚಕ್ರ ಪಂಕ್ಚರ್ ಆಗಿತ್ತು.’
‘ಚಂದ್ರಾ ಲೇಔಟ್ 60 ಅಡಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಚಕ್ರ ಬದಲಿಸಲಾಗಿತ್ತು. ಅದಾದ ನಂತರ, ಶ್ರೀನಿವಾಸ್ ಹಾಗೂ ಚಾಲಕ ಟೀ ಕುಡಿಯಲು ಸಮೀಪದಲ್ಲೇ ಇದ್ದ ಅಂಗಡಿಗೆ ಹೋಗಿದ್ದರು. ಆಗಲೇ ದುಷ್ಕರ್ಮಿಗಳು ಸ್ಥಳಕ್ಕೆ ಬಂದು, ಕಾರಿನ ಗಾಜು ಒಡೆದಿದ್ದಾರೆ. ಹಣವಿದ್ದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.