ಬೆಂಗಳೂರು: ‘ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಪುತ್ರ ಹಾಗೂ ದೊಡ್ಡಬಳ್ಳಾಪುರದ ಮಾಜಿ ಶಾಸಕ ನರಸಿಂಹಸ್ವಾಮಿ ಅವರು ಚುನಾವಣೆ ವೇಳೆ ಪಡೆದಿದ್ದ ಹಣ ವಾಪಸ್ ನೀಡದೆ ವಂಚಿಸಿದ್ದಾರೆ ಮತ್ತು ಹಣ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಸಂಗಮ್ ದೇವ್ ಎಂಬುವರು ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ.
‘ಡಾಲರ್ಸ್ ಕಾಲೊನಿ ನಿವಾಸಿಯಾಗಿರುವ ಪತ್ರಕರ್ತ ಎಚ್.ಸಂಗಮ್ ದೇವ್, ನರಸಿಂಹಸ್ವಾಮಿ ಮತ್ತು ಅವರ ಪತ್ನಿ ನಾಗಮಣಿ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ಸಂಗಮ್ ಅವರ ದೂರಿನ ಮೇರೆಗೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ನನಗೆ ಸ್ನೇಹಿತರಾಗಿದ್ದ ನರಸಿಂಹಸ್ವಾಮಿ ಅವರು ತನ್ನ ಪತ್ನಿಯೊಂದಿಗೆ ಮನೆಗೆ ಬಂದ್ದಿದ್ದರು. 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಖರ್ಚಿಗಾಗಿ ₹3 ಕೋಟಿ ಹಣ ಕೇಳಿದ್ದರು. ನನಗೆ ಪರಿಚಯವಿದ್ದರ ಬಳಿಯಿಂದ ಹಂತ ಹಂತವಾಗಿ ಹಣ ಹೊಂದಿಸಿ, ಅವರಿಗೆ ನೀಡಿದ್ದೆ. ಆದರೆ, ಚುನಾವಣೆಯಲ್ಲಿ ಅವರು ಸೋಲು ಕಂಡರು. ₹85 ಲಕ್ಷ ಮಾತ್ರ ವಾಪಸ್ ನೀಡಿದ್ದು, ಉಳಿದ ಹಣ ನೀಡದೆ ವಂಚಿಸಿದ್ದಾರೆ’ ಎಂದು ಸಂಗಮ್ ದೂರಿನಲ್ಲಿ ತಿಳಿಸಿದ್ದಾರೆ.
‘ಬಾಕಿ ಹಣ ಕೇಳಲು ಅವರ ಮನೆಯ ಬಳಿ ತೆರಳಿದಾಗ ಹಣ ನೀಡದೆ, ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ನರಸಿಂಹಸ್ವಾಮಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದ್ದಾರೆ.
‘ಈ ಬಗ್ಗೆ ಸದ್ಯಕ್ಕೆ ಏನೂ ಪ್ರತಿಕ್ರಿಯಿಸುವುದಿಲ್ಲ. ಸಾಲ ನೀಡಿರುವ ಹಾಗೂ ಆರೋಪಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಮೂರು ದಿನಗಳ ನಂತರ ಇವುಗಳಿಗೆ ಉತ್ತರ ನೀಡುತ್ತೇನೆ’ ಎಂದು ನರಸಿಂಹಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.