ಬೆಂಗಳೂರು: ಮುಂಗಾರು ಮಳೆ ಕಾಣಿಸಿಕೊಂಡ ಬಳಿಕ ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಳವಾಗಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ.
ಈಡಿಸ್ ಎಂಬ ಸೊಳ್ಳೆ ಕಡಿತದಿಂದ ಈ ಜ್ವರ ಬರಲಿದ್ದು, ಬಿಸಿಲು ಜತೆಗೆ ಮಳೆ ಬರುತ್ತಿರುವುದರಿಂದಾಗಿ ಡೆಂಗಿ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಪತ್ತೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ಈ ವರ್ಷ ಈಗಾಗಲೇ 87 ಸಾವಿರಕ್ಕೂ ಅಧಿಕ ಡೆಂಗಿ ಶಂಕಿತರನ್ನು ತಪಾಸಣೆಗೆ ಒಳಪಡಿಸಿದೆ. ಅವರಲ್ಲಿ 39 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ಈವರೆಗೆ ವರದಿಯಾದ ಒಟ್ಟು ಡೆಂಗಿ ಪ್ರಕರಣಗಳ ಸಂಖ್ಯೆ 4,886ಕ್ಕೆ ತಲುಪಿದೆ. ಕಳೆದ ತಿಂಗಳು ಈ ವೇಳೆ ಒಟ್ಟು 2,877 ಪ್ರಕರಣಗಳು ವರದಿಯಾಗಿದ್ದವು.
2023ರಲ್ಲಿ 16,500ಕ್ಕೂ ಅಧಿಕ ಡೆಂಗಿ ಪ್ರಕರಣಗಳು ದೃಢಪಟ್ಟಿದ್ದವು. 9 ಮಂದಿ ಮೃತಪಟ್ಟಿದ್ದರು. ಜೂನ್ ಬಳಿಕ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗಿತ್ತು. ಈ ವರ್ಷವೂ ಜೂನ್‌ನಲ್ಲಿ ಏರಿಕೆ ಕಂಡಿದೆ. ಈವರೆಗೆ ಯಾವುದೇ ಮರಣ ಪ‍್ರಕರಣ ವರದಿಯಾಗಿಲ್ಲ.
ಈ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 4,063 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ 1,230 ಮಂದಿಯಲ್ಲಿ ಈ ಜ್ವರ ಖಚಿತಪಟ್ಟಿದೆ. ಮೈಸೂರು (377), ಚಿಕ್ಕಮಗಳೂರು (346), ಹಾವೇರಿ (272), ಶಿವಮೊಗ್ಗ (236), ಚಿತ್ರದುರ್ಗ (229), ದಕ್ಷಿಣ ಕನ್ನಡ (211) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ದೃಢಪಟ್ಟಿವೆ.
ಚಿಕೂನ್‌ಗುನ್ಯಾವೂ ಏರಿಕೆ: 27 ಜಿಲ್ಲೆಗಳಲ್ಲಿ ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. 28 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 12 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 813 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ. ಶಿವಮೊಗ್ಗ (147), ವಿಜಯಪುರ (98) ಹಾಗೂ ಮೈಸೂರು (82) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 50ಕ್ಕಿಂತ ಕಡಿಮೆಯಿದೆ.
ಡೆಂಗಿ ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಜಾತಿಯ ಸೊಳ್ಳೆಗಳಿಂದ ಈ ಜ್ವರವು ಕಾಣಿಸಿಕೊಳ್ಳುತ್ತದೆ. ಸೊಳ್ಳೆ ಕಚ್ಚಿದ ನಾಲ್ಕರಿಂದ ಹತ್ತು ದಿನಗಳ ಒಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಡೆಂಗಿ ಜ್ವರ ಇದ್ದರೆ ದೇಹದ ತಾಪಮಾನ ವಿಪರೀತವಾಗಿ ಹೆಚ್ಚಾಗುತ್ತದೆ. ರೋಗ ಲಕ್ಷಣಗಳಿಗೆ ಅನುಸಾರ ಚಿಕಿತ್ಸೆ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.