ADVERTISEMENT

ಕಸ ಎಸೆಯುವವರಿಗೆ ಹೆಚ್ಚಿನ ದಂಡ: ಡಿಸಿಎಂ

ಡೆಕ್ಕನ್‌ ಹೆರಾಲ್ಡ್‌ ವತಿಯಿಂದ ಘನತ್ಯಾಜ್ಯ ನಿರ್ವಹಣೆ ಕುರಿತು ಸಂವಾದ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 18:55 IST
Last Updated 6 ಅಕ್ಟೋಬರ್ 2018, 18:55 IST
ಸಂವಾದ ಕಾರ್ಯಕ್ರಮಕ್ಕೂ ಮುನ್ನ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ಸಾಹಸ್‌ ಜೀರೋ ವೇಸ್ಟ್‌ನ ಸಿಇಒ ವಿಲ್ಮಾ ರೋಡ್ರಿಗಸ್‌ ಕೈಕುಲುಕಿದರು. ಪಾಲಿಕೆ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್ ಇದ್ದಾರೆ
ಸಂವಾದ ಕಾರ್ಯಕ್ರಮಕ್ಕೂ ಮುನ್ನ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ಸಾಹಸ್‌ ಜೀರೋ ವೇಸ್ಟ್‌ನ ಸಿಇಒ ವಿಲ್ಮಾ ರೋಡ್ರಿಗಸ್‌ ಕೈಕುಲುಕಿದರು. ಪಾಲಿಕೆ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್ ಇದ್ದಾರೆ   

ಬೆಂಗಳೂರು: ತ್ಯಾಜ್ಯ ಸಮಸ್ಯೆ ನಿರ್ವಹಣೆಗೆ ಜನರ ಸಹಕಾರ ಅಗತ್ಯ ಎಂದು ಪ್ರತಿಪಾದಿಸಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಕಸ ಹಾಕುವವರಿಗೆ ವಿಧಿಸುವ ದಂಡದ ಪ್ರಮಾಣ ಹೆಚ್ಚಿಸುವ ಬಗೆಗೆ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡ ನಗರದ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಬಿಕ್ಕಟ್ಟಿನ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ನೋವೆನಿಸಿದ್ದು...: ‘ಬೆಂಗಳೂರು ಗಾರ್ಬೇಜ್‌ ಸಿಟಿ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದಾಗ, ಬೆಂಗಳೂರಿನಲ್ಲಿ ಜೀವಿಸಲು ಅಸಾಧ್ಯ ಎಂದು ಯಾರೋ ಹೇಳಿದಾಗ ಸಾಕಷ್ಟು ನೋವೆನಿಸುತ್ತದೆ. ಇಲ್ಲಿ ಈ ವ್ಯವಸ್ಥೆಯನ್ನೇ ಸರಿಪಡಿಸಬೇಕಿದೆ’ ಎಂದು ಅವರು ಹೇಳಿದರು.

ADVERTISEMENT

‘ಕಸ ವಿಲೇವಾರಿ ಸಂಬಂಧಿಸಿದಂತೆ ಕೆ.ಆರ್‌.ಮಾರುಕಟ್ಟೆಯಲ್ಲೇ ದೊಡ್ಡ ಮಾಫಿಯಾ ಇದೆ. ಪ್ರತಿದಿನ 50 ಟನ್‌ ಕಸ ಅಲ್ಲಿಯೇ ಉತ್ಪತ್ತಿಯಾಗುತ್ತದೆ. ಕಸ ವಿಲೇವಾರಿಗೆ ಹಣದ ಸಮಸ್ಯೆ ಅಲ್ಲ. ಮೊದಲು ಮನಸ್ಸಿನೊಳಗಿನ ಕಸ ಸ್ವಚ್ಛಗೊಳಿಸಬೇಕಿದೆ’ ಎಂದರು.

‘ಹಿಂದೆ ಪಾಲಿಕೆಯಲ್ಲಿ 40 ಸಾವಿರ ಪೌರಕಾರ್ಮಿಕರಿದ್ದರು. ಬಯೋಮೆಟ್ರಿಕ್‌ ವ್ಯವಸ್ಥೆ ತಂದ ಬಳಿಕ ಅದು 18 ಸಾವಿರಕ್ಕೆ ಇಳಿಯಿತು. 5 ಸಾವಿರ ಕಸ ಸಾಗಿಸುವ ವಾಹನಗಳಿದ್ದವು. ಜಿಪಿಎಸ್‌ ವ್ಯವಸ್ಥೆ ಬಂದ ಬಳಿಕ ಆ ಸಂಖ್ಯೆ 2,600ಕ್ಕೆ
ಇಳಿಯಿತು. ಹಾಗಿದ್ದರೆ ನಾವು ಕಸ ವಿಲೇವಾರಿಗಾಗಿ ಎಷ್ಟೊಂದು ಹಣ ವ್ಯಯಿಸುತ್ತಿದ್ದೆವು? ಅದು ಎಲ್ಲಿಗೆ ಹೋಗುತ್ತಿತ್ತು’ ಎಂದು ಪ್ರಶ್ನಿಸಿದರು.

‘ಸ್ವಚ್ಛತೆಗೆ ವ್ಯಯಿಸುವ ₹1,600 ಕೋಟಿಯನ್ನು ನಗರದ 20 ಲಕ್ಷ ಮನೆಗಳಿಗೆ ಹಂಚಿದ್ದರೆ ಅವರವರ ತ್ಯಾಜ್ಯ ಅವರೇ ವಿಲೇ ಮಾಡಿ ಸ್ವಚ್ಛಗೊಳಿಸುತ್ತಿದ್ದರೇನೋ’ ಎಂದಾಗ ಸಭೆಯಲ್ಲಿ ಸಮ್ಮತಿಯ ಚಪ್ಪಾಳೆ ಕೇಳಿಬಂದಿತು.

ಪಾಲಿಕೆ ಆಯುಕ್ತ ಎನ್‌. ಮಂಜುನಾಥಪ್ರಸಾದ್‌ ಮಾತನಾಡಿ, ‘ಹೊಸ ಬದಲಾವಣೆ ತರಲು ಮುಂದಾದಾಗ ಸಾಕಷ್ಟು ಆರೋಪ, ಟೀಕೆ ಎದುರಿಸಬೇಕಾಗುತ್ತದೆ. ಉದಾಹರಣೆಗೆ ಕಸ ಸಂಗ್ರಹಿಸುವ ವಾಹನಗಳು ಆಟೊ ಟಿಪ್ಪರ್‌ಗಳಾಗಿರಬೇಕು. ಇಂಥ 555 ವಾಹನಗಳಿಗೆ 4 ಬಾರಿ ಟೆಂಡರ್ ಕರೆದಿದ್ದೇವೆ. ಇನ್ನೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಏಕೆಂದರೆ ಪೂರ್ಣಗೊಳಿಸಲು ಕೆಲವು ಹಿತಾಸಕ್ತಿಗಳು ಬಿಡುವುದಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಜನರು ಸಹಕರಿಸದಿದ್ದರೆ 1 ಲಕ್ಷ ಪೌರ ಕಾರ್ಮಿಕರಿದ್ದರೂ ನಿರ್ವಹಣೆ ಅಸಾಧ್ಯ ಎಂದರು.

‘ಸಾಹಸ್‌ ಜೀರೋ ವೇಸ್ಟ್‌’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಮಾ ರೋಡ್ರಿಗಸ್‌, ‘ತ್ಯಾಜ್ಯವನ್ನು ಉತ್ಪನ್ನವಾಗಿಸುವ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಅದಕ್ಕೆ ಪೂರಕ ವಾತಾವರಣ ರೂಪಿಸಬೇಕು. ಆಗ ಕಸ ನಿರ್ವಹಣೆಯ ಮಾಫಿಯಾವನ್ನು ನಿಯಂತ್ರಿಸಬಹುದು’ ಎಂದರು.

‘ಆಡಳಿತ ವ್ಯವಸ್ಥೆ, ನಾಗರಿಕರು ಮತ್ತು ಕಾರ್ಪೊರೇಟ್‌ ಸಂಸ್ಥೆಗಳು ಒಟ್ಟಾಗಿ ಶ್ರಮಿಸಿದಾಗ ಈ ಸಮಸ್ಯೆಯನ್ನು ನಿಭಾಯಿಸಬಹುದು’ ಎಂದರು.

ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌. ತಿಲಕ್‌ ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಡೆಕ್ಕನ್‌ ಹೆರಾಲ್ಡ್‌ ಡೆಪ್ಯುಟಿ ಎಡಿಟರ್‌ ಬಿ.ಎಸ್‌. ಅರುಣ್‌ ಸ್ವಾಗತಿಸಿದರು.

ಜನರು ಏನೆಂದರು?

* ತ್ಯಾಜ್ಯ ಸಂಗ್ರಹ ಮತ್ತು ಸಂಸ್ಕರಣೆಯನ್ನು ವಿಕೇಂದ್ರೀಕರಣಗೊಳಿಸಿ

–ನರೇಂದ್ರಬಾಬು

* ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲಿ ಅವರದ್ದೇ ಆದ ಸಾವಯವ ಪರಿವರ್ತಕ (ಆರ್ಗ್ಯಾನಿಕ್‌ ಕನ್ವರ್ಟರ್‌) ಇರಬೇಕು. ಅದನ್ನು ಕಡ್ಡಾಯಗೊಳಿಸಬೇಕು.

–ಸಂದೀಪ್‌

* ತ್ಯಾಜ್ಯ ಸಂಗ್ರಹಣಾ ಪ್ರದೇಶಕ್ಕೆ ಭೇಟಿ ನೀಡಲು ಮುಂದಾದಾಗ ಗುತ್ತಿಗೆದಾರರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಇಂಥ ಮಾಫಿಯಾಕ್ಕೆ ಕಡಿವಾಣ ಹಾಕಬೇಕು.

–ಗುರು

* ನಾನು ಖರೀದಿಸಿದ ಬಿಡಿಎ ಸೈಟ್‌ನ ಅರ್ಧ ಭಾಗದಲ್ಲಿ ಮಳೆ ನೀರು ಕಾಲುವೆ ನಿರ್ಮಾಣವಾಗಿದೆ. ಮನೆ ಕಟ್ಟಲು ಅಸಾಧ್ಯವಾಗಿದೆ.

–ರಾಜೇಂದ್ರ

* ಕಲ್ಯಾಣ ಮಂಟಪಗಳಲ್ಲಿ ಬಾಳೆ ಎಲೆ ಬದಲು ಸ್ಟೀಲ್‌ ತಟ್ಟೆಯಲ್ಲೇ ಊಟ ಬಡಿಸುವುದು ಕಡ್ಡಾಯ ಮಾಡಬೇಕು. ತ್ಯಾಜ್ಯ ಸಂಗ್ರಹವಾಗುವುದೇ ನಿಲ್ಲುತ್ತದೆ.

–ವಿಜಯ್‌ ಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.