ಬೆಂಗಳೂರು: ‘ಸಿ ವೃಂದದಲ್ಲಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ರಾಜ್ಯ ವೃಂದವೆಂದು ಪರಿಗಣಿಸಿ, ಕೌನ್ಸೆಲಿಂಗ್ ಇಲ್ಲದೇ ಅಂತರ ಜಿಲ್ಲಾ ವರ್ಗಾವಣೆ ಮಾಡಿರುವುದರಿಂದ ಆತ್ಮಹತ್ಯೆಯ ಸ್ಥಿತಿ ನಿರ್ಮಾಣವಾಗಿದೆ’ ಎಂದು ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘ ದೂರಿದೆ.
‘ಪಿಡಿಒ ಹುದ್ದೆಯನ್ನು ‘69 ಪಿಡಿಒಗಳಿಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿದೆ. ಇದರಿಂದ ಉಳಿದವರ ಮೇಲೆ ಒತ್ತಡ ಹೆಚ್ಚಾಗಿದೆ. ಕೋರಿಕೆ ಸಲ್ಲಿಸದಿದ್ದರೂ ಹಾಸನದಿಂದ ಬೆಳಗಾವಿಗೆ, ಮಂಗಳೂರಿನಿಂದ ಕಲಬುರಗಿಗೆ, ಮಡಿಕೇರಿಯಿಂದ ಚಾಮರಾಜನಗರಕ್ಕೆ, ವಿಜಯಪುರದಿಂದ ಮೈಸೂರಿಗೆ ಹೀಗೆ ಅಂತರ ಜಿಲ್ಲಾ ವರ್ಗಾವಣೆ ಮಾಡಲಾಗಿದೆ. ಇಂತಹ ದೋಷಪೂರಿತ ವರ್ಗಾವಣೆಯಿಂದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದಾರೆ’ ಎಂದು ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ವಾರದ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಡಿಒ ಹುದ್ದೆಯನ್ನು ‘ಗ್ರೂಪ್–ಬಿ’ಗೆ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆ 12 ವರ್ಷಗಳಿಂದ ಬಾಕಿ ಇದೆ. ಈಗ 1,500 ಹಿರಿಯ ಪಿಡಿಒ ಹುದ್ದೆಗಳನ್ನು ಸೃಜಿಸಿ, ವೃಂದ ಮತ್ತು ನೇಮಕಾತಿ ನಿಯಮ ಹಾಗೂ ವರ್ಗಾವಣೆ ನಿಯಮಗಳಿಲ್ಲದೇ ತರಾತುರಿಯಲ್ಲಿ ವರ್ಗಾವಣೆ ಆದೇಶ ಹೊರಡಿಸಲಾಗಿದೆ. 500ಕ್ಕೂ ಹೆಚ್ಚು ಪಿಡಿಒಗಳನ್ನು ದೂರದ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಅವರೆಲ್ಲರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. 100ಕ್ಕೂ ಹೆಚ್ಚು ಮಂದಿ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
‘ಮನಬಂದಂತೆ ವರ್ಗಾವಣೆ ಮಾಡಿರುವುದರಿಂದ ಪಿಡಿಒಗಳ ಕುಟುಂಬಗಳು ಬೀದಿಗೆ ಬಂದಿವೆ. ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅಮಾನತು, ವರ್ಗಾವಣೆಯಂತಹ ಶಿಕ್ಷೆ ನೀಡಿ ಪಿಡಿಒಗಳನ್ನು ಅವಮಾನಿಸಲಾಗುತ್ತಿದೆ’ ಎಂದು ದೂರಿದ್ದಾರೆ.
ಜ್ಯೇಷ್ಠತಾ ಪಟ್ಟಿಗೆ ಆಗ್ರಹ: ಪಿಡಿಒ ಹುದ್ದೆ ಸೃಷ್ಟಿಯಾಗಿ 13 ವರ್ಷಗಳಾಗಿವೆ. ಆದರೆ, ಈವರೆಗೂ ಕ್ರಮಬದ್ಧವಾದ ಜ್ಯೇಷ್ಠತಾ ಪಟ್ಟಿ ತಯಾರಿಸಿಲ್ಲ. ನ್ಯಾಯಾಲಯದ ಆದೇಶಗಳನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿಕೊಂಡು ನಾಲ್ಕು ವರ್ಷಗಳಿಂದ ಯಾರಿಗೂ ಬಡ್ತಿ ನೀಡಿಲ್ಲ. ಇದು ಪಿಡಿಒಗಳಿಗೆ ತಮ್ಮ ವೃತ್ತಿಯ ಬಗ್ಗೆಯೇ ಜುಗುಪ್ಸೆ ಮೂಡುವಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಲು ಸಂಘದ 31 ಜಿಲ್ಲಾ ಘಟಕಗಳ ಅಧ್ಯಕ್ಷರು, ರಾಜ್ಯ ಪರಿಷತ್ ಸದಸ್ಯರು ಹಾಗೂ ರಾಜ್ಯ ಪದಾಧಿಕಾರಿಗಳ ನಿಯೋಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು, ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರನ್ನು ಭೇಟಿಮಾಡಿ ಮನವಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.