ADVERTISEMENT

ಭೋವಿ ನಿಗಮದಲ್ಲೂ ₹10 ಕೋಟಿಗೂ ಹೆಚ್ಚು ಅಕ್ರಮ

ಆದಿತ್ಯ
Published 23 ಜುಲೈ 2024, 19:12 IST
Last Updated 23 ಜುಲೈ 2024, 19:12 IST
<div class="paragraphs"><p>ಸಿಐಡಿ ( ಸಾಂಕೇತಿಕ ಚಿತ್ರ)</p></div>

ಸಿಐಡಿ ( ಸಾಂಕೇತಿಕ ಚಿತ್ರ)

   

ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಕೆಲವು ಅಧಿಕಾರಿಗಳು ಸಾರ್ವಜನಿಕರ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ₹ 10 ಕೋಟಿಗೂ ಹೆಚ್ಚು ಮೊತ್ತದ ಅವ್ಯವಹಾರ ನಡೆಸಿರುವುದನ್ನು ಸಿಐಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರೂಪಾಯಿ ಮೊತ್ತದ ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್‌ ಚೆಕ್‌ ಪಡೆದು ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ADVERTISEMENT

ಪ್ರಕರಣದ ಪ್ರಮುಖ ಆರೋಪಿ, ಮಹಾಲಕ್ಷ್ಮಿಪುರದ ಭೋವಿಪಾಳ್ಯದ ನಿಗಮದ ಕಚೇರಿಯಲ್ಲಿ 2021ರ ಏಪ್ರಿಲ್‌ 5ರಿಂದ 2022ರ ಜುಲೈ 8ರವರೆಗೆ ಕಚೇರಿ ಅಧೀಕ್ಷಕರಾಗಿದ್ದ ಪಿ.ಡಿ.ಸುಬ್ಬಪ್ಪ ಅವರನ್ನು ಸಿಐಡಿ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.

‘ಪ್ರಧಾನ ವ್ಯವಸ್ಥಾಪಕರಾಗಿದ್ದ ಡಾ.ಬಿ.ಕೆ. ನಾಗರಾಜಪ್ಪ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲೀಲಾವತಿ ಅವರು ತಲೆಮರೆಸಿಕೊಂಡಿದ್ದು, ಪತ್ತೆಗೆ ಶೋಧ ಮುಂದುವರೆಸಲಾಗಿದೆ’ ಎಂದು ಸಿಐಡಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‌ಭೋವಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಕಾಳಗಿ ಪೊಲೀಸ್‌ ಠಾಣೆ(2022), ಬೆಂಗಳೂರಿನ ಸಿದ್ದಾಪುರ ಹಾಗೂ ಮಹಾಲಕ್ಷ್ಮಿಪುರ ಪೊಲೀಸ್‌ ಠಾಣೆ(2023), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ(2023) ದಾಖಲಾಗಿದ್ದ ಪ್ರಕರಣಗಳನ್ನು ಸಿಐಡಿ ವರ್ಗಾವಣೆ ಮಾಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

‘ಬಂಧಿತ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಕಸ್ಟಡಿಗೆ ಪಡೆದುಕೊಳ್ಳಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಧ್ಯವರ್ತಿಗಳ ಮೂಲಕವೇ ಅಕ್ರಮ:

‘ಅಧಿಕಾರಿಗಳು, ಮಧ್ಯವರ್ತಿಗಳ ಮೂಲಕವೇ ಅಕ್ರಮ ನಡೆಸುತ್ತಿದ್ದರು. ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೆ.ಎನ್‌.ಸೂರ್ಯಕಲಾವತಿ ಸೇರಿದಂತೆ 46 ಮಹಿಳೆಯರನ್ನು ಭೇಟಿ ಮಾಡಿದ್ದ ಮಧ್ಯವರ್ತಿಗಳು, ನಿಗಮದಿಂದ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿದ್ದರು. ನಂತರ, ಬ್ಯಾಂಕ್‌ ಅಧಿಕಾರಿಗಳ ಸೋಗಿನಲ್ಲಿ ಆರು ಮಂದಿ ಬಂದು ಫಲಾನುಭವಿಗಳ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಭಾವಚಿತ್ರ, ಜಾತಿ ಮತ್ತು ಆದಾಯ ಧೃಢೀಕರಣ ಪತ್ರ ಪಡೆದುಕೊಂಡಿದ್ದರು. ಖಾಲಿ ಕಾಗದದ ಮೇಲೆ ಫಲಾನುಭವಿಗಳ ಸಹಿ ಪಡೆದು, ಸಾಲ ಮಂಜೂರಾತಿ ಆಶ್ವಾಸನೆ ನೀಡಿದ್ದರು. ಅಲ್ಲದೇ, ₹25 ಸಾವಿರ ಕಮಿಷನ್‌ ನೀಡುವಂತೆ ಸೂಚಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಕಮಿಷನ್‌ ಕಡಿತ ಮಾಡಿಕೊಂಡು ನಿಮ್ಮ ಬ್ಯಾಂಕ್‌ ಖಾತೆಗೆ ₹25 ಸಾವಿರ ವರ್ಗಾಯಿಸಲಾಗಿದೆ ಎಂದು ಮಧ್ಯವರ್ತಿಗಳ ಮೂಲಕ ಅಧಿಕಾರಿಗಳು, ಪದ್ಮಾ ಎಂಬ ಫಲಾನುಭವಿಗೆ ಮಾಹಿತಿ ನೀಡಿದ್ದರು. ಅದಾದ ಮೇಲೆ ಪದ್ಮಾ ಸೇರಿದಂತೆ ಹಲವರಿಂದ ಪಡೆದಿದ್ದ ದಾಖಲೆಗಳನ್ನು ಮಲ್ಲೇಶ್ವರದ ಐಡಿಬಿಐ ಬ್ಯಾಂಕ್‌ ಶಾಖೆಗೆ ನೀಡಿ ಖಾತೆ ತೆರೆದಿದ್ದರು. ಪ್ರತಿ ಖಾತೆಗೆ ನಿಗಮದ ₹5 ಲಕ್ಷವನ್ನು ವರ್ಗಾವಣೆ ಮಾಡಿಕೊಂಡಿದ್ದರು. ಅಲ್ಲಿಂದ ನ್ಯೂ ಡ್ರೀಮ್ಸ್‌ ಎಂಟರ್‌ ಪ್ರೈಸಸ್‌ ಎಂಬ ಖಾತೆಗೆ ಹಣ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮೂವರ ಪಾತ್ರವಿರುವುದು ಸಾಬೀತಾಗಿದೆ’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ 20ಕ್ಕೂ ಹೆಚ್ಚು ಮಂದಿಗೆ ₹10 ಲಕ್ಷ ಸಾಲ ಕೊಡಿಸುವುದಾಗಿ ದಾಖಲೆ ಪಡೆದುಕೊಂಡಿದ್ದರು. ರಾಜಾಜಿನಗರದ ಬ್ಯಾಂಕ್‌ ಶಾಖೆಯಲ್ಲಿ ಖಾತೆ ತೆರೆದು, 18 ಫಲಾನುಭವಿಗಳ ಹೆಸರಿನಲ್ಲಿ ಹಣ ಬಿಡುಗಡೆ ಮಾಡಿಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.

221 ಕಡತ ಕದ್ದಿದ್ದ ಸುಬ್ಬಪ್ಪ

‘ಪಿ.ಡಿ.ಸುಬ್ಬಪ್ಪ ಅವರು ಹಿಂದಿನ ಅಧೀಕ್ಷಕರಿಂದ ಕಚೇರಿಯ ಕಡತಗಳನ್ನು ಪಡೆದುಕೊಂಡಿದ್ದರು. ಆದರೆ, ಸುಬ್ಬಪ್ಪ ವರ್ಗಾವಣೆಯಾದ ಸಂದರ್ಭದಲ್ಲಿ ಲೆಕ್ಕಪತ್ರ ಕಡತ, ನಗದು ಪುಸ್ತಕ, ಯೋಜನಾ ಕಡತ, ಬ್ಯಾಂಕ್‌ ಚೆಕ್‌ಗಳಿಗೆ ಸಂಬಂಧಿಸಿದ 221 ಕಡತಗಳನ್ನು ಹಸ್ತಾಂತರಿಸದೇ ಕಳವು ಮಾಡಿದ್ದರು. ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.