ಬೆಂಗಳೂರು: ‘ಬಿಜೆಪಿ ವರಿಷ್ಠರು ಪಕ್ಷದ ರಾಜ್ಯ ನಾಯಕರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿಯ ಶೇಕಡ 75ರಷ್ಟು ಮಂದಿಗೆ ಈ ಮೈತ್ರಿ ಇಷ್ಟವಿಲ್ಲ’ ಎಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.
ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟ ಸೇರಿದ ಬಳಿಕ ಬಿಜೆಪಿಯ ಹಲವರು ಅಸಮಾಧಾನ ಹೊರಹಾಕಿದ್ದಾರೆ. ಶಾಸಕ ಎಸ್.ಟಿ. ಸೋಮಶೇಖರ್ ಮೈತ್ರಿಯನ್ನು ವಿರೋಧಿಸಿದ್ದಾರೆ. ಅವರ ಮಾತಿಗೆ ಸದಾನಂದ ಗೌಡ ಕೂಡ ದನಿಗೂಡಿಸಿದ್ದಾರೆ.
‘ಪ್ರಜಾವಾಣಿ’ ಜತೆ ಶನಿವಾರ ಮಾತನಾಡಿದ ಅವರು, ‘ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ರಾಜ್ಯದ ನಾಯಕರ ಜತೆ ಚರ್ಚೆಯನ್ನೇ ನಡೆಸಿದೆ ಏಕಪಕ್ಷೀಯವಾಗಿ ಮೈತ್ರಿ ಮಾಡಿಕೊಂಡರೆ ಯಾವ ರೀತಿಯ ಅನುಕೂಲ ಆಗಲು ಸಾಧ್ಯ’ ಎಂದು ಪ್ರಶ್ನಿಸಿದರು.
‘ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತು ಸುಣ್ಣವಾಗಿದ್ದೇವೆ. ಚುನಾವಣೆ ಮುಗಿದು ನಾಲ್ಕು ತಿಂಗಳು ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯುತ್ತಿತ್ತು. ಈಗ ಜೆಡಿಎಸ್ ಜತೆ ಮೈತ್ರಿಯಿಂದಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಎರಡನೇ ದರ್ಜೆ ನಾಗರಿಕರಂತೆ ಆಗುತ್ತಾರೆ. ಪಕ್ಷದಲ್ಲಿ ಒಕ್ಕಲಿಗ ನಾಯಕರ ಮಾತುಗಳಿಗೆ ಬೆಲೆಯೇ ಇಲ್ಲದ ಸ್ಥಿತಿ ನಿರ್ಮಾಣ ಆಗಲಿದೆ’ ಎಂದರು.
ಕಾರ್ಯಶೈಲಿ ಬದಲಾಗಬೇಕು
‘ನಾಲ್ಕು ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಸಂಪೂರ್ಣವಾಗಿ ನಿಷ್ಕ್ರಿಯರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜನರು ತಿರಸ್ಕರಿಸಿದ್ದ ಕಾರ್ಯಸೂಚಿಯನ್ನೇ ನಮ್ಮ ಪಕ್ಷ ಮುಂದುವರಿಸುತ್ತಿದೆ. ಮೊದಲು ನಮ್ಮ ನಾಯಕತ್ವವನ್ನು ಗುರುತಿಸಬೇಕು ಮತ್ತು ಕಾರ್ಯಸೂಚಿಯನ್ನು ಬದಲಿಸಿಕೊಳ್ಳಬೇಕು. ಪಕ್ಷದ ಪ್ರಮುಖರ ಸಮಿತಿಯ ಸಭೆಯಲ್ಲೇ ಈ ವಿಚಾರವನ್ನು ಸ್ಪಷ್ಟವಾಗಿ ಹೇಳಿದ್ದೇನೆ’ ಎಂದು ಸದಾನಂದ ಗೌಡ ತಿಳಿಸಿದರು.
‘ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 25 ಸ್ಥಾನ ಗಳಿಸಿತ್ತು. ಆಗ ಒಂದು ಸ್ಥಾನ ಪಡೆದಿದ್ದ ಜೆಡಿಎಸ್ ಜತೆಗಿನ ಮೈತ್ರಿಯೇ ಬಿಜೆಪಿ ದುರ್ಬಲವಾಗಿದೆ ಎನ್ನುವುದನ್ನು ಸೂಚಿಸುವಂತೆ ಮಾಡಿದೆ. ಕಾರ್ಯಕರ್ತರ ಹಂತದಲ್ಲೂ ಈ ಚರ್ಚೆ ಆರಂಭವಾಗಿದೆ. ಇಂತಹದ್ದಕ್ಕೆ ಅವಕಾಶ ಕೊಡಬಾರದಿತ್ತು’ ಎಂದರು.
‘ನನಗೆ ಯಾವ ಭಯವೂ ಇಲ್ಲ’
‘ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಅತ್ಯಂತ ಬಲಿಷ್ಠವಾಗಿದ್ದ ಪಕ್ಷಕ್ಕೆ ಈ ಸ್ಥಿತಿ ಬಂದಿರುವುದರ ಬಗ್ಗೆ ನೋವಿದೆ. ಅದನ್ನು ಸರಿಪಡಿಸಬೇಕು ಎಂಬುದಷ್ಟೇ ನನ್ನ ಆಗ್ರಹ. ನಾನು ಇನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ವಾಸ್ತವಿಕ ವಿಚಾರಗಳನ್ನು ಮಾತನಾಡಲು ನನಗೆ ಯಾವ ಭಯವೂ ಇಲ್ಲ’ ಎಂದು ಡಿ.ವಿ. ಸದಾನಂದ ಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.