ADVERTISEMENT

ಕೆಂಗೇರಿ: ತಾಯಿ ಮಗು ಸಾವು: ವೈದ್ಯರ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 7:00 IST
Last Updated 26 ಡಿಸೆಂಬರ್ 2019, 7:00 IST
   

ಕೆಂಗೇರಿ: ‘ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡದೆ ಹಸುಗೂಸು ಹಾಗೂ ತಾಯಿಯ ಸಾವಿಗೆ ಕಾರಣರಾಗಿದ್ದಾರೆ’ ಎಂದು ಆರೋಪಿಸಿ ಮೃತರ ಸಂಬಂಧಿಕರು ಶವವಿಟ್ಟು ಪ್ರತಿಭಟನೆ ನಡೆಸಿದರು.

ಅದೇ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದ ಬಿಡದಿಯ ಕೆಂಚನಕುಪ್ಪೆ ನಿವಾಸಿ ಸುಮಿತ್ರಾ (29) ಮೃತಪಟ್ಟವರು. ಗರ್ಭಿಣಿಯಾಗಿದ್ದ ಸುಮಿತ್ರಾ ಡಿ.16ರಂದು ತಪಾಸಣೆಗೆಂದು ರಾಜರಾಜೇಶ್ವರಿ ಆಸ್ಪತ್ರೆಗೆ ಬಂದಿದ್ದರು. ಅವರನ್ನು ಪರೀಕ್ಷಿಸಿದ್ದ ವೈದ್ಯರು, ರಕ್ತದೊತ್ತಡ ಹೆಚ್ಚಿದೆ ಎಂಬ ಕಾರಣ ನೀಡಿ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದರು. 18ರ ಮಧ್ಯರಾತ್ರಿ ಸುಮಿತ್ರಾಳಿಗೆ ಅತೀವ ನೋವು ಕಾಣಿಸಿಕೊಂಡು ರಕ್ತದೊತ್ತಡದಲ್ಲಿ ಏರುಪೇರು ಕಂಡು ಬಂದಿತು. 19ರಂದು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆಯಲಾಯಿತು. ಮಗು ಕೆಲ ಹೊತ್ತಿನಲ್ಲೇ ಅಸುನೀಗಿತು. 20ರಂದು ಸುಮಿತ್ರಾ ಅಸ್ವಸ್ಥಗೊಂಡರು. ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಂಬಂಧಿಕರು ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಿದರು. 21ರಂದು ಆಕೆ ಮೃತಪಟ್ಟರು. ಕುಂಬಳಗೋಡು ಠಾಣೆಯಲ್ಲಿ ದೂರು ದಾಖಲಾಗಿದೆ.

ವೈದ್ಯರ ವಿಳಂಬದಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಮೃತಳ ಸಹೋದರ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕರ್ತವ್ಯ ಲೋಪವಾಗಿಲ್ಲ: ‘ಸುಮಿತ್ರಾ ರಕ್ತದೊತ್ತಡದಿಂದ ಬಳಲುತ್ತಿದ್ದರು. ಅವರಿಗೆ ಅವಧಿಪೂರ್ವ ಪ್ರಸವವಾಗುವ ಸಂಭವವಿತ್ತು. ಈ ಪ್ರಕ್ರಿಯೆ ನಡೆಸಲು ಸಂಬಂಧಿಕರು ಒಪ್ಪದ ಕಾರಣ ಶಸ್ತ್ರಚಿಕಿತ್ಸೆ ವಿಳಂಬವಾಯಿತು. ಮಗುವಿಗೆ ವೆಂಟಿಲೇಟರ್ ಸೌಲಭ್ಯ ಒದಗಿಸಲಾಗಿತ್ತು. ಈ ಪ್ರಕರಣದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಯಾವುದೇ ನಿರ್ಲಕ್ಷ್ಯ ತೋರಿಲ್ಲ’ ಎಂದು ವೈದ್ಯೆ ಸಾಯಿಲಕ್ಷ್ಮೀ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.