ಬೆಂಗಳೂರು: ಕಾಡುಗೋಡಿಯ ಹೋಪ್ ಫಾರ್ಮ್ ಬಳಿ ಪಾದಚಾರಿ ಮಾರ್ಗದಲ್ಲಿ ಹೋಗುವಾಗ ಬೆಸ್ಕಾಂ ವಿದ್ಯುತ್ ತಂತಿ ತುಳಿದು ತಾಯಿ, ಮಗು ಮೃತಪಟ್ಟ ಘಟನೆ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ತೀವ್ರ ಆಘಾತ ವ್ಯಕ್ತಪಡಿಸಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
NHRC ಈ ಕುರಿತು ತನ್ನ ವೆಬ್‌ಸೈಟ್‌ನಲ್ಲಿ ಮಂಗಳವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಮಾಧ್ಯಮಗಳ ವರದಿ ಪರಿಗಣಿಸಿ ಎನ್‌ಎಚ್‌ಆರ್‌ಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರು ವಾರಗಳಲ್ಲಿ ಘಟನೆ ಬಗ್ಗೆ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ವರದಿ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದೆ.
ಈ ಘಟನೆಯನ್ನು ಗಮನಿಸಿದರೆ ಇಲ್ಲಿ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಬೆಸ್ಕಾಂ ಅಧಿಕಾರಿಗಳ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ತಾಯಿ–ಮಗು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ. ಸಿಬ್ಬಂದಿ, ಅಧಿಕಾರಿಗಳ ಮೇಲೆ ಏನು ಕ್ರಮ ಕೈಗೊಂಡಿರಿ? ಸಂತ್ರಸ್ತರಿಗೆ ಯಾವ ರೀತಿ ಪರಿಹಾರ ನೀಡಲಾಗಿದೆ? ಹಾಗೂ ಈ ರೀತಿಯ ಘಟನೆಗಳು ಪುನಃ ನಡೆಯದಂತೆ ಏನು ನಿಗಾ ವಹಿಸಲಾಗಿದೆ? ಎಂಬುದರ ಬಗ್ಗೆ ವಿವರ ನೀಡಿ ಎಂದು ಎನ್‌ಎಚ್‌ಆರ್‌ಸಿ ನೋಟಿಸ್‌ನಲ್ಲಿ ಕೇಳಿದೆ.
ನವೆಂಬರ್ 19 ರಂದು ಭಾನುವಾರ ನಸುಕಿನ ಜಾವ ನಡೆದಿದ್ದ ಈ ಮನಕಲುಕುವ ಘಟನೆ ಬಗ್ಗೆ ನಾಗರಿಕರು, ಬೆಸ್ಕಾಂ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ್ದರು.
ಘಟನೆ ಏನು?
ಸೌಂದರ್ಯ ಎನ್ನುವ ಮಹಿಳೆ ತಮ್ಮ ಪತಿ ಸಂತೋಷ್‌ಕುಮಾರ್ ಹಾಗೂ 9 ತಿಂಗಳ ಮಗು ಸುವಿಕ್ಷಾ ಲಿಯಾ ಜೊತೆಯಲ್ಲಿ ನಸುಕಿನ 3.50ರ ಸುಮಾರಿಗೆ ಹೋಪ್ ಫಾರ್ಮ್ ಜಂಕ್ಷನ್‌ನ ತಂಗುದಾಣಕ್ಕೆ ಬಸ್‌ನಲ್ಲಿ ಬಂದಿಳಿದಿದ್ದರು. ತಂಗುದಾಣದಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ಎ.ಕೆ.ಗೋಪಾಲ್ ಕಾಲೊನಿಯಲ್ಲಿ ಪೋಷಕರ ಮನೆ ಇದ್ದು, ಅಲ್ಲಿಗೆ ನಡೆದುಕೊಂಡು ಹೊರಟಿದ್ದರು.
ಪಾದಚಾರಿ ಮಾರ್ಗದಲ್ಲಿ ದೀಪವಿರಲಿಲ್ಲ. ಪತಿ ಸಂತೋಷ್‌ಕುಮಾರ್ ಕತ್ತಲಲ್ಲೇ ಮುಂದೆ ಹೋಗುತ್ತಿದ್ದರು, ಸೌಂದರ್ಯ ಮಗು ಎತ್ತಿಕೊಂಡು ಅವರ ಹಿಂದೆ ಸಾಗುತ್ತಿದ್ದರು. ಕತ್ತಲಾಗಿದ್ದರಿಂದ ವಿದ್ಯುತ್ ತಂತಿ ಗಮನಿಸದ ಸೌಂದರ್ಯ, ಅದರ ಮೇಲೆ ಕಾಲಿಟ್ಟಿದ್ದರು. ಕ್ಷಣಮಾತ್ರದಲ್ಲಿ ವಿದ್ಯುತ್ ತಗುಲಿ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತ್ತು. ಪತಿ, ರಕ್ಷಣೆಗೆ ಹೋಗುವಷ್ಟರಲ್ಲಿ ಬೆಂಕಿಯ ಕೆನ್ನಾಲಗೆ ಹೆಚ್ಚಾಗಿತ್ತು. ರಕ್ಷಣೆಗಾಗಿ ಪತಿ ಚೀರಾಡಿದ್ದರು. ದಾರಿಹೋಕರು ಸ್ಥಳಕ್ಕೆ ಬಂದರೂ ತಾಯಿ–ಮಗುವನ್ನು ರಕ್ಷಿಸಲು ಆಗಲಿಲ್ಲ. ತಾಯಿ–ಮಗು ಸ್ಥಳದಲ್ಲೇ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.