ADVERTISEMENT

ನಿಶ್ಚಿತ ಠೇವಣಿ ಹಣಕ್ಕಾಗಿ ತಾಯಿ ಕೊಲೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 15:56 IST
Last Updated 12 ನವೆಂಬರ್ 2024, 15:56 IST
ಸುರೇಶ್‌ 
ಸುರೇಶ್‌    

ಬೆಂಗಳೂರು: ಜಮೀನು ಮತ್ತು ಮನೆ ಮಾರಾಟ ಮಾಡಿದ್ದ ಹಣ ಕೊಡದ ಕೋಪಕ್ಕೆ ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪುತ್ರ, ಆತನ ಸಂಬಂಧಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹೊಂಗಸಂದ್ರ ನಿವಾಸಿ ಉಮೇಶ್(28) ಮತ್ತು ಆತನ ಸಂಬಂಧಿ ಸುರೇಶ್(43) ಬಂಧಿತರು.

ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಆರೋಪಿಗಳು ಜಯಮ್ಮ(45) ಅವರನ್ನು ಕೊಲೆ ಮಾಡಿ ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ADVERTISEMENT

‘ತಮಿಳುನಾಡಿನ ಜಯಮ್ಮ ಅವರು ಕೆಲವು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲಸಿದ್ದರು. ಜಯಮ್ಮ ಅವರ ಪತಿ ಮೃತಪಟ್ಟಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಪುತ್ರರ ಪೈಕಿ, ಕಿರಿಯ ಪುತ್ರ ಗಿರೀಶ್‌ಗೆ ಕೆಲವು ದಿನಗಳ ಹಿಂದೆ ಕೆಎಸ್‌ಆರ್‌ಟಿಸಿಯಲ್ಲಿ ಉದ್ಯೋಗ ಸಿಕ್ಕಿದ್ದು, ಆನೇಕಲ್ ಡಿಪೊದಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಉಮೇಶ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮದ್ಯ ವ್ಯಸನಿಯಾಗಿದ್ದು, ಸ್ನೇಹಿತರ ಜತೆ ಸುತ್ತಾಡಿಕೊಂಡಿದ್ದ. ಜಯಮ್ಮ ಅವರು ಮಗನಿಗೆ ಕೆಲಸಕ್ಕೆ ಹೋಗುವಂತೆ ಬುದ್ಧಿಮಾತು ಹೇಳುತ್ತಿದ್ದರು. ಆದರೂ, ಕೆಲಸಕ್ಕೆ ಹೋಗಿರಲಿಲ್ಲ. ಪುತ್ರನ ನಡೆ ಜಯಮ್ಮ ಅವರಿಗೆ ಬೇಸರ ತರಿಸಿತ್ತು. ಪುತ್ರನ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಪತಿಗೆ ಸೇರಿದ ಜಮೀನು ಮತ್ತು ಮನೆಯನ್ನು ಜಯಮ್ಮ ಅವರು ಮಾರಾಟ ಮಾಡಿ ಆ ಹಣವನ್ನು ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇಟ್ಟಿದ್ದರು. ಆ ಹಣವನ್ನು ತನಗೆ ಕೊಡುವಂತೆ ಆರೋಪಿ ನಿತ್ಯ ಪೀಡಿಸುತ್ತಿದ್ದ. ಆದರೂ ತಾಯಿ ಹಣ ಕೊಟ್ಟಿರಲಿಲ್ಲ. ಬಳಿಕ ಸಹೋದರ ಸಂಬಂಧಿ ಸುರೇಶ್ ಜತೆಗೆ ಸೇರಿಕೊಂಡು ತಾಯಿ ಕೊಲೆಗೆ ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

‘ನ.8ರಂದು ತಡರಾತ್ರಿ ಜಯಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಆಗ ಮನೆಗೆ ನುಗ್ಗಿದ ಆರೋಪಿಗಳು ಜಯಮ್ಮನ ಮುಖಕ್ಕೆ ಹಲ್ಲೆ ಮಾಡಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.

ಉಮೇಶ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.