ADVERTISEMENT

ತುಮಕೂರಿನಲ್ಲಿ ಬಿಡಿ ಭಾಗಗಳ ತಯಾರಿಕಾ ಘಟಕ ಸ್ಥಾಪನೆಗೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 19:52 IST
Last Updated 26 ಜೂನ್ 2024, 19:52 IST
   

ಬೆಂಗಳೂರು: ತುಮಕೂರಿನ ಬಳಿ ಇರುವ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ₹210 ಕೋಟಿ ವೆಚ್ಚದಲ್ಲಿ ವಾಹನಗಳ ಬಿಡಿ ಭಾಗಗಳ ತಯಾರಿಕಾ ಘಟಕ ಸ್ಥಾಪನೆಗೆ ಅವೊಯಮಾ ಸೈಸಕುಷೊ ಕಂಪನಿ ಮತ್ತು ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಪಾನ್‌ನ ನಗೋಯಾ ನಗರದಲ್ಲಿ ಬುಧವಾರ ಸಹಿ ಹಾಕಿವೆ.

ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದ ನಿಯೋಗವು ಜಪಾನ್‌ ಪ್ರವಾಸ ಕೈಗೊಂಡಿದೆ. ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್ ಮತ್ತು ಅವೊಯಮಾ ಸೈಸಕುಷೊ ಕಂಪನಿಯ ಅಧ್ಯಕ್ಷ ಯುಕಿಯೋಷಿ ಅವೊಯಮಾ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಟೊಯೊಟಾ ಕಂಪನಿಯ ವಾಹನಗಳ ಬಿಡಿ ಭಾಗಗಳನ್ನು ತಯಾರಿಸುವ ಅವೊಯಮಾ, ತುಮಕೂರಿನ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ 20 ಎಕರೆಯಲ್ಲಿ ಘಟಕ ಸ್ಥಾಪಿಸಲಿದೆ ಎಂದು ಕೈಗಾರಿಕಾ ಸಚಿವರ ಕಚೇರಿಯ ಪ್ರಕಟಣೆ ತಿಳಿಸಿದೆ.

ಟೊಯೊಟಾ ಕಂಪನಿ ಕೇಂದ್ರ ಕಚೇರಿಗೂ ಭೇಟಿ ನೀಡಿದ ನಿಯೋಗವು, ಕಂಪನಿಯ ಯೋಜನಾ ಪ್ರಧಾನ ವ್ಯವಸ್ಥಾಪಕ ಟಕಾವೊ ಐಬಾ, ಟೊಯೊಟಾ ಕಿರ್ಲೋಸ್ಕರ್‌ ಮೋಟರ್‌ನ ಹಿರಿಯ ಉಪಾಧ್ಯಕ್ಷ ಸುದೀಪ್‌ ಎಸ್‌. ದಳವಿ ಅವರನ್ನು ಭೇಟಿ ಮಾಡಿ ಚರ್ಚಿಸಿದೆ. ಧಾರವಾಡ ಮತ್ತು ಗೌರಿಬಿದನೂರಿನಲ್ಲಿ ವಾಹನ ಉತ್ಪಾದನಾ ಘಟಕಗಳ ಆರಂಭಕ್ಕೆ ಅವಕಾಶ ಕಲ್ಪಿಸುವ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡಿದೆ ಎಂದು ತಿಳಿಸಿದೆ.

ADVERTISEMENT

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ನಿಯೋಗದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.