ಬೆಂಗಳೂರು: ‘ಸವಣೂರಿನಲ್ಲಿ ನಿಂತು ಎಲ್ಲೇ ಕಲ್ಲೆಸದರೂ ಅದು ಬಿದ್ದ ಜಾಗ ವಕ್ಫ್ ಆಸ್ತಿ ಎನ್ನುವಂತಾಗಿದೆ ಎಂಬ ಹೇಳಿಕೆ ಆಧರಿಸಿ ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
‘ಹಾವೇರಿ ಜಿಲ್ಲೆಯ ಸವಣೂರು ಠಾಣೆಯಲ್ಲಿ ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಇದೇ 16ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದು ಇದನ್ನು ರದ್ದುಪಡಿಸಬೇಕು’ ಎಂದು ಬೊಮ್ಮಾಯಿ ಕೋರಿದ್ದಾರೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ್ದ ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ‘ರೈತರ ಜಮೀನು, ದೇವಸ್ಥಾನ, ಕೆರೆಗಳ ಜಾಗವನ್ನು ವಕ್ಫ್ ಹೆಸರಿನಲ್ಲಿ ನೋಂದಾಯಿಸಲಾಗುತ್ತಿದೆ. ನಿಮಗೆ ಸಂವಿಧಾನ ದೊಡ್ಡದೋ ಅಥವಾ ಷರಿಯಾ ಕಾನೂನು ದೊಡ್ಡದೋ? ಜಮೀರ್ ಅಹ್ಮದ್ ಖಾನ್, ನಿಮ್ಮ ಷರಿಯಾ ಕಾನೂನು ಇಲ್ಲಿ ನಡೆಯುವುದಿಲ್ಲ’ ಎಂದು ಹೇಳಿರುವುದಾಗಿಯೂ ದೂರಿನಲ್ಲಿ ವಿವರಿಸಲಾಗಿದೆ.
‘ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ಶಾಸಕ ಅರವಿಂದ ಬೆಲ್ಲದ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮತ್ತಿತರರು ಇದೇ 4ರಂದು ಸವಣೂರಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು’ ಎಂದು ಗುಪ್ತಚರ ವಿಭಾಗದ ಪೊಲೀಸ್ ಮಂಜುನಾಥ ಮಣ್ಣಿಯವರ, ಸವಣೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರನ್ವಯ ಇಬ್ಬರ ವಿರುದ್ಧವೂ, ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್‌ಎಸ್) ಕಲಂ 196(1)(ಎ) ಅಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.